ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸುಳ್ಳು ಬಿಜೆಪಿಯ ಮನೆ ದೇವರಲ್ಲ. ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಪಕ್ಷದ ಮನೆ ದೇವರು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ದಿನಕ್ಕೊಂದು ಹಗರಣ ಬಯಲಾಗುತ್ತಿವೆ. ಸಿಎಂ ಸಿದ್ಧರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಯಾವುದಕ್ಕೂ ಜಗ್ಗಲ್ಲ, ಬಗ್ಗಲ್ಲ ಅಂದ ಸಿಎಂ ಮುಡಾ ಸೈಟ್ ಏಕೆ ವಾಪಸ್ ಕೊಟ್ಟರು.
ಪ್ರಿಯಾಂಕ ಖರ್ಗೆ 5 ಎಕರೆ ಜಾಗ ಏಕೆ ವಾಪಸ್ ಕೊಟ್ಟರು. ಕಾಂಗ್ರೆಸ್ ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ. ಯಾರೆಷ್ಟು ಬೇಕಾದರೂ ಕದಿಯಬಹುದು. ಸಿಕ್ಕಿಬಿದ್ದಾಗ ವಾಪಸ್ ಕೊಟ್ಟರಾಯ್ತು ಎನ್ನುವ ಮನೋಭಾವದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಅವರು ಟಾಂಗ್ ನೀಡಿದರು.
ರಾಬರಿ, ದರೋಡೆ ಮಾಡಿದ್ದನ್ನ ವಾಪಸ್ ಕೊಟ್ಟರೆ ಕ್ರಮ ಜರುಗಿಸುವುದು ಬೇಡವೇ..? ಎಂದು ಚಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಸಿಎಂ ಸಿದ್ಧರಾಮಯ್ಯ ಇರೋವರೆಗೆ ಮುಸ್ಲಿಂರು ಬಳಿಕ ಬೊಂಬೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಹೇಳಿಕೆ ನೀಡಿರು ವಿಚಾರಕ್ಕೆ ಪ್ರತಿಕ್ರಿಯಿಸುವುದಿಲ್ಲ. ನಾನೇನು ಹೇಳಲ್ಲ ರಾಜ್ಯದ ಜನರೇ ತೀರ್ಮಾನಿಸಲಿ. ಸಚಿವ ಜಮೀರ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಆದೇಶ ಸರಿಯಿದೆ. ನ್ಯಾಯಾಂಗದ ಆದೇಶ ಬೀದೀಲಿ ಪ್ರಶ್ನಿಸೋದು ಸರಿಯಲ್ಲ ಎಂದರು.
ಎಲ್ಲಾ ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರುವುದರಿಂದ ಅವರಲ್ಲಿ ನಡಕ ಉಂಟಾಗಿದೆ ಎಂಬ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯ ಪ್ರತಿಕ್ರಿಯಿಸಿ ಸುಳ್ಳು ನಮ್ಮ ಮನೆ ದೇವರಲ್ಲ, ಭ್ರಷ್ಟಾಚಾರ, ಸುಳ್ಳು, ಮೋಸ ಕಾಂಗ್ರೆಸ್ ಮನೆ ದೇವರು ಎಂದರು.