ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರಣಿ ಲೇಖನ ನೆಲದ ಮಾತು 47…
ನನ್ನನ್ನು ಸೇರಿ ಅಂದು ಬಾಲಂಬಾವಿ ಕಾಡಿಗೆ ಹೊರಟಿದ್ದು ನಾಲ್ಕು ಮಂದಿ, ಗುರುರಾಜ್, ವಿಜಯ್ ಆಚಾರ್, ಶ್ರೀರಾಮ ಪ್ರಿಂಟರ್ಸ್ ರಮೇಶ್ ಮತ್ತು ನಾನು. ಗೆಳೆಯ ಗುರುರಾಜ್ ಕಾನ್ವೆಂಟ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ, ಮಕ್ಕಳಿಗೆ ಶಿಸ್ತು ಹೇಳಿ ಕೊಡುವುದರ ಜೊತೆ ಜೊತೆಗೆ, ನಮ್ಮ ತಂಡಕ್ಕೂ ಶಿಸ್ತಿನ ಪಾಠವನ್ನು ಹೇಳಿಕೊಡುತ್ತಿರುತ್ತಾನೆ.
ಇನ್ನು ವಿಜಯ್, ತಾನಾಯ್ತು ತನ್ನ ಮನೆ ಆಯ್ತು ಅನ್ನುವವ, ಮೇಲು ದುರ್ಗದ ಗೋಪಾಲಸ್ವಾಮಿ ಹೊಂಡದಲ್ಲಿ, ರಾಮದೇವರ ವೊಡ್ಡಿನಲ್ಲಿ, ಚಂದ್ರವಳ್ಳಿ ಕೆರೆಯಲ್ಲಿಯೂ ಬಹು ವರ್ಷಗಳಿಂದ ಒಬ್ಬ ಸಾಹಸಿ ಈಜುಗ, ನಡಿಗೆಯಲ್ಲೂ ನಮ್ಮನ್ನ ಮುಂದಕ್ಕೆ ಬಿಡುವುದೇ ಇಲ್ಲ.
“ಕಬ್ಬಿಣದ ಬಳಿ ನೊಣಕ್ಕೇನು ಕೆಲಸ” ಅವಶ್ಯಕತೆ ಇಲ್ಲದ ಕಡೆ ಹೋಗಬಾರದು, ಅನ್ನುವ ಅರ್ಥದ ಗಾದೆ ಅವನದು, ತಮಾಷೆಯಾಗಿದ್ರು ಒಳಾರ್ಥ ಬಿರುಸಾಗಿಯೇ ಇದೆ. ಬಂಗಾರದ ಕೆಲಸದಿಂದ ಬದುಕನ್ನು ಸಾಗಿಸಿಕೊಂಡಿದ್ದಾನೆ. ನಮ್ಮೆಲ್ಲರಿಗೂ ಹೋಲಿಕೆಯಾದರೆ ಈತ ಸ್ವಲ್ಪ ಕಿರಿಯನೇ.
ಶ್ರೀರಾಮ ಪ್ರಿಂಟರ್ಸ್ ರಮೇಶ್, ಜೋಗಿ ಜಾಡಿನಲ್ಲಿಯೇ ಒಬ್ಬ ಆರ್ಥಿಕ ಸ್ಥಿತಿವಂತ. ಚರಂಡಿಯಲ್ಲಿ ಸಿಕ್ಕ ಒಂದು ನಾಯಿಮರಿಗೆ ಕರುಣೆ ತೋರಿ ಜೋಪಾನವಾಗಿಸಿ, ತನ್ನ ಕೋಟಿ ಬಂಗ್ಲೆಯಲ್ಲಿ, ಅದಕ್ಕೆಂದೆ ಒಂದು ಕೋಣೆ ಕಟ್ಟಿಸಿ, ಹಾಸಿಗೆ ಮೇಲೆ ಮಲಗಿಸಿ ಬೆಚ್ಚಗಿನ ಅಚ್ಚಡ ಹೊದಿಸಿ ತೃಪ್ತಿಪಡುವ ಪ್ರಾಣಿ ಪ್ರಿಯ.
ಮಹಾ ದೈವ ಭಕ್ತನೂ ಹೌದು. ಶನಿವಾರ ಬಂತೆಂದರೆ, ಬರಿಗಾಲಲ್ಲಿ ದುರ್ಗದ ಎಲ್ಲ ದೇವಾಲಯಗಳಿಗೂ, ಉಪವಾಸದಲ್ಲಿ ದರ್ಶನ ಮಾಡಿಯೇ ಮುಂದಿನ ಕೆಲಸ. ಒಮ್ಮೆ ಗೆಳೆಯರ ಜೊತೆ ತಿರುಪತಿಗೆ ಕರೆದೊಯ್ದಿದ್ದೆ. ಹಣದ ವಿಷಯದಲ್ಲಿ ಸ್ವಲ್ಪ ಬಿಕ್ಕಟ್ಟಿನ ಗೆಳೆಯ. ರಾತ್ರಿ ಮಾತು ಕೊಟ್ಟರೆ, ಬೆಳಿಗ್ಗೆ ಹುಡುಕಾಡಿದರೂ ಸಿಗದವ.
ಒಮ್ಮೆ ಗೋವಾ ಪ್ರವಾಸಕ್ಕೆ ಹೋದ ಸಂದರ್ಭ, ಗೆಳೆಯರಿಗೆಂದು ತಂದ ಹಣವೆಲ್ಲ ಖರ್ಚಾಗಿ, ಈತನ ಬಳಿ ಕೇಳಿದಾಗ, ಐದು ಸಾವಿರ ಕೊಟ್ಟು ಖರ್ಚು ಮಾಡಿಸಿ, ದುರ್ಗಕ್ಕೆ ಬಂದ ಮೇಲೆ ಕೇಳಿ ವಾಪಸ್ ಪಡೆದಂತಹ ಜಾಣ. ತುಂಬಾ ಲೆಕ್ಕಾಚಾರಸ್ತ. ತಿರುಪತಿ ಹುಂಡಿಗೆ ಐನೂರರ ನೋಟಿನ ಐವತ್ತು ಸಾವಿರ ರೂಪಾಯಿಗಳ ಒಂದು ಕಟ್ಟನ್ನ ಹಾಕಿ, ಹತ್ತು ನಿಮಿಷ ಆ ಹುಂಡಿಯೆದುರು ಕಣ್ಮುಚ್ಚಿ ಕೈ ಮುಗಿದಿದ್ದ.
ಕುತೂಹಲದಿಂದ ಕೇಳಿದೆ, ನೀನು ಹಾಕಿದ ದುಡ್ಡು ಆಂಧ್ರ ಸರ್ಕಾರಕ್ಕೆ ಹೋಯಿತು.ತಿಮ್ಮಪ್ಪನಿಗೆ ಸೇರುವುದಿಲ್ಲ ಅಂದೆ. ಅದಕ್ಕವನು ಈ ದಾನ ಧರ್ಮಗಳಿಂದಲೇ, ನನ್ನತ್ರ ಕೋಟಿಗಳು ಉಳಿದಿರುವುದು ಅಂದ. ನಾನು ಸಹ ಸುಮ್ಮನಾಗಿ ಎದುರಿಗಿದ್ದ ಅವನಿಗೂ, ಆ ಹುಂಡಿಗೂ ಕೈ ಮುಗಿದೆ.
ಬಹಳ ಹಿಂದೆ ಆರು ಬಾರಿ ಮಾಲೆ ಧರಿಸಿ ಶಬರಿಮಲೈ ಯಾತ್ರೆ ಕೈಗೊಂಡು, ಮಂಡಲ ಪೂಜೆ, ಮಾಳಿಗೆ ಪುರತ್ತಮ್ಮ ಜಾತ್ರೆ, ಜ್ಯೋತಿ, ಮಾಲೆ ಇಲ್ಲದೆಯೂ ಒಮ್ಮೆ ಸಾಮಾನ್ಯನಾಗಿ ಹೋಗಿ ಬಂದಿದ್ದೇನೆ. ವಾವರ್ ದರ್ಗಾದಿಂದ ಅರವತ್ತೈದು ಕಿಲೋಮೀಟರ್, ಕರಿಮಲೈಯಿಂದ ಪಂಪಾಕ್ಕೆ, ಇರುಮುಡಿ ಹೊತ್ತು ಪಾದಯಾತ್ರೆ ಮಾಡಿದ್ದೇನೆ.
ಈಗ ಬರವಣಿಗೆ ವಿಷಯ ಏನಂದ್ರೆ, ನಮ್ಮ ಗುಂಪಿನ ಗುರುಸ್ವಾಮಿಗಳು, ಬುರುಜಿನಟ್ಟಿ ಆಟೋ ಮಲ್ಲಪ್ಪ ಮತ್ತು ಮಾಲತೇಶ. ಗಜಾನನ ಬೆಡ್ಡಿಂಗ್ ಹೌಸ್ ರಾಜು, ಸಾಮಿಲ್ ಹನುಮಂತು, ನಾನು ಸೇರಿ ನಮ್ಮದೊಂದು ಗುಂಪು. ನಾವು ಮಾಲೆ ಧರಿಸುತ್ತಿದ್ದಿದ್ದು ಮೆದೆಹಳ್ಳಿ ರಸ್ತೆಯ ಈಶ್ವರನ ಗುಡಿಯಲ್ಲಿ.
ಆಗಿನ್ನು ಅಯ್ಯಪ್ಪನ ದೇವಾಲಯದ ಕಟ್ಟಡ ಆಗಿರಲಿಲ್ಲ. ತಮಿಳುನಾಡಿನ ಗುರುಗಳೊಬ್ಬರು, ನಮಗೆ ಇರುಮುಡಿ ಕಟ್ಟುತ್ತಿದ್ದಿದ್ದು ನೆನಪು. ಸ್ನೇಹಿತರು, ಸಂಬಂಧಿಗಳು, ಹರಕೆ ಮಾಡಿಕೊಂಡ ಭಕ್ತರು, ಕೇರಳದ ಅಯ್ಯಪ್ಪಸ್ವಾಮಿ ಸನ್ನಿಧಿಯ ಹುಂಡಿಗೆ ಕಾಣಿಕೆ ಹಾಕೋದಕ್ಕೆ,ಇಲ್ಲಿಯೇ ಹಣ ಕೊಟ್ಟು ಕಾಲಿಗೆ ಬಿದ್ದು ಕೈ ಮುಗಿಯುತ್ತಿದ್ದು. ನಾವೆಲ್ಲ ಅದನ್ನ ಅಯ್ಯಪ್ಪನಿಗೆ ಸೇರಿದ್ದು ಅಂತ, ಇರುಮುಡಿಯಲ್ಲೇ ಹಾಕಿಸಿ, ತಲೆ ಮೇಲೆ ಹೊತ್ತು ಶಬರಿಮಲೈ ತಲುಪುತಿದ್ವಿ.
ಇಲ್ಲಿನ ಸ್ವಾರಸ್ಯ ಏನಂದ್ರೆ, ನಮ್ಮ ಇರುಮುಡಿಯನ್ನ ಬಿಚ್ಚಿ ಕಾಯಿ ಹೊಡೆದು, ತುಪ್ಪದ ಕಾಯಿಯನ್ನು ಅಗ್ನಿಕುಂಡಕ್ಕೆ ಹಾಕುತ್ತಿದ್ದುದು ಮಲ್ಲಪ್ಪ ಗುರುಸ್ವಾಮಿಯೇ.ಎಲ್ಲರ ಇರುಮುಡಿಯನ್ನು ಬಿಚ್ಚಿದ ಮಲ್ಲಪ್ಪ, ಹುಂಡಿಗೆ ಹಾಕಬೇಕಾಗಿದ್ದ ಹಣವನ್ನೆಲ್ಲ ತಗೊಂಡು, ಉಳಿದ ಪೂಜಾ ಸಾಮಾನುಗಳನ್ನ ಅಗ್ನಿಕುಂಡಕ್ಕೆ ಹಾಕಿ ಬನ್ನಿ ಅಂದ. ನನಗೂ ಸ್ವಲ್ಪ ಕುತೂಹಲವೇ! ಮತ್ತೇ ಹುಂಡಿ ಹಣವನ್ನು, ನೀವೊಬ್ಬರೇ ಹೋಗಿ ಹಾಕಿ ಬರ್ತೀರಾ ಅಂತ ನಾನು ಸೇರಿ ಎಲ್ಲರೂ ಕೇಳಿದ್ವಿ.
ಅದಕ್ಕವನು ನಕ್ಕು, ನಿಮ್ಮೆಲ್ರನ್ನು ಕರ್ಕೊಂಡು ಬಂದು, ಕನ್ಯಾ ಸ್ವಾಮಿಗಳ ಜೊತೆ ಅಯ್ಯಪ್ಪನ ಸೇವೆ ಮಾಡಿ, ಈ ಹುಂಡಿ ಹಣನ ನಾನೇ ತಗೊಂಡಿದಿನಿ. ಇದು ಅಯ್ಯಪ್ಪನಿಗೆ ತಲುಪಿದೆ ಅಂತನೇ ನೀವೆಲ್ಲರೂ ಅರ್ಥಮಾಡ್ಕೋಬೇಕು. ಎಲ್ಲರೂ ಗುರುಸ್ವಾಮಿ ಕಾಲಿಗೆ ಬಿದ್ದು ಕೈ ಮುಟ್ಟಿ ನಮಸ್ಕಾರ ಮಾಡ್ಕೊಳ್ಳಿ ಅಂದ.
ಮಾಲತೇಶ್ ಗುರುಸ್ವಾಮಿ ಕೇಳಿದವನೇ, ಆಕಾಶದ ಕಡೆ ಮುಖ ಮಾಡಿದ್ದ. ನಮ್ಮದಾದ್ರು ಏನು ತಪ್ಪಿದೆ ಹೇಳಿ, ಅಯ್ಯಪ್ಪನ ಕಡೆಗೊಮ್ಮೆ ನೋಡಿ, ಅವನಿಗೂ ಕೈ ಮುಗಿದು ನಾವು ಸುಮ್ಮನಾದೆವು.
ಐವತ್ತು ಸಾವಿರ ತಿರುಪತಿ ಹುಂಡಿಗಾಕಿ ಪುಣ್ಯ ಕಟ್ಟಿಕೊಂಡವ ಒಬ್ಬ ಗೆಳೆಯನಾದರೆ, ಹುಂಡಿಗೆ ಅಂತ ಕೊಟ್ಟ ಹರಕೆ ಹಣವನ್ನೆಲ್ಲಾ ಖರ್ಚು ಮಾಡಿಕೊಂಡು ಸುಖವಾಗಿ ಮನೆಗೆ ಬಂದ ಇನ್ನೊಬ್ಬ ಗೆಳೆಯ. ನಮ್ಮ ಜೋಗಿ ಜಾಡಲ್ಲಿ ಮತ್ತೊಬ್ಬ ದೈವ ಭಕ್ತರಿದ್ದಾರೆ.
ಸಿದ್ದರನ್ನ ಗೌರವ ಭಕ್ತಿಗಳಿಂದ ಪೂಜಿಸಿ, ವರ್ಷಕ್ಕೆರಡು ಬಾರಿ ಚಂದ್ರವಳ್ಳಿ, ಆಡುಮಲ್ಲೇಶ್ವರದ ವಾಯುವಿಹಾರಿ ಗೆಳೆಯರೆಲ್ಲರಿಗೂ, ಪ್ರಸಾದದ ರೂಪದಲ್ಲಿ ಊಟ ಹಾಕಿಸಿ ತೃಪ್ತಿಪಟ್ಟುಕೊಳ್ಳುವ ಕುಟುಂಬವದು.
ಶ್ರಾವಣ ಮಾಸದಲ್ಲಿ ಹುಲೆಗೊಂದಿಸಿದ್ದಪ್ಪನಿಗೂ, ಶಿವರಾತ್ರಿಯಲ್ಲಿ ಬಾಳೆಕಾಯಿ ಸಿದ್ದಪ್ಪನಿಗೂ, ವಿಶೇಷ ಪೂಜೆಗಳನ್ನ ನೆರವೇರಿಸಿ, ಬಂದ ಭಕ್ತರಿಗೆ ಊಟ ಬಡಿಸಲು ಇಡೀ ಕುಟುಂಬವೇ ನಿಂತು ಭಕ್ತಿ ಸಮರ್ಪಿಸಿಕೊಳ್ಳುವ ಡಾಕ್ಟರ್ ದಿನೇಶ್ ಹಾಗೂ ಅವರ ಸಹೋದರ ಕುಟುಂಬಗಳು.
ನಾನು ಬಹು ದಿನಗಳಿಂದಲೂ ಉತ್ತರಕ್ಕಾಗಿ ಹುಡುಕಾಡಿಕೊಂಡಿದ್ದೇನೆ. ಈ ಮೂರಲ್ಲಿ ದೇವರಿಗೆ ಹತ್ತಿರವಾದ ದೈವಭಕ್ತ ಯಾರು ಅಂತ. ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.