ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸಿ- ಡಾ.ಕೆ.ಟಿ.ತಿಪ್ಪೇಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವುದು ಬಹಳ ಮುಖ್ಯವಾಗಿದ್ದು, ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಅವರು ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ2016 ಮತ್ತು ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಸ್ನೇಹಿ ದೃಷ್ಠಿಕೋನದಿಂದ, ಈಗಾಗಲೇ ಬಹಳ ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ರಿಯಾಯತಿ ದರ ಬಸ್ಪಾಸ್ ಕೊಡುವ ವ್ಯವಸ್ಥೆ ಜಾರಿಯಲ್ಲಿದ್ದು, ಮಕ್ಕಳಿಗೆ ಉತ್ತಮ ಸೇವೆ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹೆಚ್ಚಿನ ಮಕ್ಕಳು ಪ್ರಯಾಣಿಸುವುದರಿಂದ ಎಲ್ಲ ಬಸ್ನಿಲ್ದಾಣ ಹಾಗೂ ಎಲ್ಲ ಬಸ್ಗಳಲ್ಲಿಯೂ ಸಹ ಮಕ್ಕಳ ಸಹಾಯವಾಣಿ1098 ಮಾಹಿತಿಯ ಸ್ಟಿಕರ್ಸ್ಗಳನ್ನು ಅಳವಡಿಸಬೇಕು ಎಂದು ತಿಳಿಸಿದ ಅವರು, ಬಸ್ನಿಲ್ದಾಣಗಳಲ್ಲಿರುವ ತಾಯಂದಿರ ಹಾಲುಣಿಸುವ ಕೇಂದ್ರಗಳನ್ನು ಯಾವಾಗಲೂ ಬೀಗ ಹಾಕಿ ಮುಚ್ಚಿರುತ್ತಾರೆ ಎಂಬ ದೂರುಗಳು ಇದ್ದು, ತಾಯಂದಿರ ಹಾಲುಣಿಸುವ ಕೇಂದ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು.  ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಬಸ್ ನಿಲ್ದಾಣ ಸೇರಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕಿನ ಬಸ್ ನಿಲ್ದಾಣಗಳಲ್ಲಿಯೂ ತಾಯಂದಿರ ಹಾಲುಣಿಸುವ ಕೇಂದ್ರಗಳಿದ್ದು, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಕೆಎಸ್ಆರ್ಟಿಸಿ ನಿಗಮದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಕೆಎಸ್ಆರ್ಟಿಸಿ ಸಿಬ್ಬಂದಿಗೆ ಅರಿವು ಮೂಡಿಸಿ: ಜಿಲ್ಲೆಯ ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ಚಾಲನಾ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವವರಿಗೆ ಪೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ರಕ್ಷಣಾ ನೀತಿ ಕುರಿತು ತರಬೇತಿ ಅಗತ್ಯವಾಗಿದ್ದು, ಕುರಿತು ತರಬೇತಿ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ.ಕೆ.ಟಿ.ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ, ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ:
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ2009 ಅನುಷ್ಠಾನದ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಕೆ.ಟಿ. ತಿಪ್ಪೇಸ್ವಾಮಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಕಳೆದ ಒಂದು ವರ್ಷದಿಂದ ಆರ್.ಟಿ. 2009 ಕಲಂ 3 ಅನುಷ್ಠಾನಗೊಳಿಸಿರುವ ಮತ್ತು ಬಾಕಿ ಇರುವ ಮಾಹಿತಿ ಕೇಳಿದ ಅವರು, ಜೂನ್ ಮಾಹೆಯಲ್ಲಿ ಎಲ್ಲಾ ಖಾಸಗಿ ಶಾಲೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಬೇಕು. ಹಿರಿಯ ವಿದ್ಯಾರ್ಥಿ ಸಂಘಟನೆ ರಚನೆಯಾಗಿರುವ  ಕುರಿತು ಮಾಹಿತಿ ಪಡೆದು ಅವರೊಂದಿಗೆ ಶಾಲೆಯ ಚಟುವಟಿಕೆಗಳನ್ನು ಹಂಚಿಕೊಳ್ಳಲು ತಿಳಿಸಿದರು.

ಎಲ್ಲ ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ1098 ಅನ್ನು ಬರೆಸಬೇಕು ಎಂದು ಶಿಕ್ಷಣ ಇಲಾಖೆ  ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಲಾ ಆವರಣದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ಶಾಲೆಗಳು ಇದ್ದಲ್ಲಿ ತೆರವುಗೊಳಿಸಲು ಕ್ರಮವಹಿಸಬೇಕು. ಶಾಲೆಗಳಲ್ಲಿ ಕಡ್ಡಾಯವಾಗಿ ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಅರಿವು ಮೂಡಿಸಬೇಕು. ಬೀಟ್ ಪೊಲೀಸರು ಶನಿವಾರ ಮತ್ತು ಭಾನುವಾರ ಶಾಲೆಯ ಕಡೆ ಗಮನವಹಿಸಬೇಕು, ಎಲ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಮಕ್ಕಳ ಕಲ್ಯಾಣ ಸಮಿತಿ, ಬಾಲನ್ಯಾಯ ಮಂಡಳಿ, ಮಕ್ಕಳ ಸಹಾಯವಾಣಿ ಸಂಖ್ಯೆ1098 ಕಚೇರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬಗ್ಗೆ ಮಾಹಿತಿ ತಿಳಿಸಿದರು.
ಜಿಲ್ಲೆಯಲ್ಲಿ 109 ಏಕ ಶಿಕ್ಷಕ ಶಾಲೆಗಳು ಇದ್ದು, ಇವು ಇನ್ನೂ ಮೂರು ವರ್ಷಗಳಲ್ಲಿ ಮುಚ್ಚುವ ಆತಂಕದಲ್ಲಿರುವ ಶಾಲೆಗಳಾಗಿವೆ.

ಹಾಗಾಗಿ ಶಾಲೆಗಳನ್ನು ಪುನರಾರಂಭ ಮಾಡುವುದಕ್ಕೆ ಶಿಕ್ಷಣ ಇಲಾಖೆ, ಗ್ರಾಮಪಂಚಾಯಿತಿ, ಎಸ್ಡಿಎಂಸಿಯವರು ತುಂಬಾ ಪ್ರಯತ್ನ ಮಾಡುವ ಅಗತ್ಯವಿದೆ. ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಮುಚ್ಚುವ ಸಾಧ್ಯತೆ ಇದೆ ಎಂದು ತಿಳಿಸಿದ ಅವರು, ಮಕ್ಕಳು ಶಾಲೆಗೆ ದಾಖಲಾಗದ ಕಾರಣದಿಂದ ಹಿರಿಯೂರಿನಲ್ಲಿ 4 ಶಾಲೆಗಳು, ಚಳ್ಳಕೆರೆ 1, ಹೊಳಲ್ಕೆರೆ 3, ಮೊಳಕಾಲ್ಮುರು 2 ಶಾಲೆಗಳು ಸೇರಿದಂತೆ ಜಿಲ್ಲೆಯಲ್ಲಿ 10 ಶೂನ್ಯ ದಾಖಲಾತಿ ಶಾಲೆಗಳು ಮುಚ್ಚಿವೆ. ಹಾಗಾಗಿ ಶಾಲೆಗಳನ್ನು ಪುನರಾರಂಭ ಮಾಡಲು ಸಮೀಕ್ಷೆ ನಡೆಸಿ, ಮಕ್ಕಳ ಬಗ್ಗೆ ಗಮನಹರಿಸಲು ಸೂಚಿಸಿದರು. ಸರ್ಕಾರಿ ಶಾಲೆ ಶಾಶ್ವತ ಮುಚ್ಚಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಮಕ್ಕಳ ಸಂಖ್ಯೆ ಜಾಸ್ತಿಯಾದರೆ ಶಾಲೆ ಪುನರಾರಂಭ ಮಾಡಬೇಕು. ಅಲ್ಲಿಯವರೆಗೆ ಸರ್ಕಾರಿ ಶಾಲೆಯ ಕಟ್ಟಡವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಅಗತ್ಯ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಸೇರಿದಂತೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ಪಿ, ಬಿಆರ್ಸಿ ಹಾಗೂ ಇಸಿಒ ಹಾಗೂ ಅಕ್ಷರ ದಾಸೋಹದ ಅಧಿಕಾರಿಗಳು ಇದ್ದರು.

 

Share This Article
error: Content is protected !!
";