ಅಧಿಕ ಮಳೆ ಹೊಲದಲ್ಲೇ ಕೊಳೆಯುತ್ತಿರುವ ಈರುಳ್ಳಿ, ಕಂಗಾಲಾದ ರೈತರು

News Desk

ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
:
ಜಿಲ್ಲೆಯಾದ್ಯಂತ ಬಿತ್ತನೆ ಮಾಡಲಾಗಿದ್ದ 25 ಸಾವಿರ ಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆಗೆ  ತೇವಾಂಶ ಹೆಚ್ಚಳದಿಂದ ಹೊಲದಲ್ಲಿಯೇ ಕೊಳೆತು ನಾರುತ್ತಿರುವುದು ಒಂದೆಡೆಯಾದರೆ ಮಳೆಗೂ ಮುನ್ನ ಈರುಳ್ಳಿ ಕಿತ್ತು ರಾಶಿ ಹಾಕಿಕೊಂಡಿರುವ ಈರುಳ್ಳಿ ಗೆಡ್ಡೆ ರಾಶಿ ಕೂಡ ಕೊಳೆಯುತ್ತಿರುವುದು ಮತ್ತು ಮೊಳಕೆ ಹೊಡೆದು ಈರುಳ್ಳಿ ಗೆಡ್ಡೆ ಕರಗುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿಯನ್ನು ರೈತರು ಅನುಭವಿಸುವಂತಾಗಿದೆ.

ಪ್ರತಿ ವರ್ಷ ಸಾಕಷ್ಟು ರೈತರು ಈರುಳ್ಳಿ ಬಿತ್ತನೆ ಮಾಡುತ್ತಾರೆ. ಇನ್ನೂ ಕೆಲ ರೈತರು ಜಮೀನು ಗುತ್ತಿಗೆ ಪಡೆದು ಈರುಳ್ಳಿ ಬಿತ್ತನೆ ಮಾಡುತ್ತಾರೆ. ಮಳೆ ಆರಂಭಕ್ಕೂ ಮುನ್ನ ಕಟಾವು ಮಾಡಿ ಮಾರಾಟ ಮಾಡಿದ್ದರೆ ಇಂದಿನ ಈರುಳ್ಳಿ ದರಕ್ಕೆ ಹೊಲಿಕೆ ಮಾಡಿದರೆ ಎಕರೆ ಒಂದಕ್ಕೆ ಖರ್ಚು ವೆಚ್ಚ ತೆಗೆದು ಲಕ್ಷ ರೂ. ಆದಾಯ ಪಡೆಯುತ್ತಿದ್ದ ರೈತರಿಗೆ ಮಳೆ ನಿರಾಸೆ ಮಾಡಿದೆ.

ಆತ್ತ ಬೆಳೆಯು ಇಲ್ಲ, ಇತ್ತ ಆದಾಯವೂ ಇಲ್ಲ, ನಷ್ಟದ ಮೇಲೆ ನಷ್ಟವನ್ನು ರೈತರು ಅನುಭವಿಸುವಂತಾಗಿದೆ. ಈರುಳ್ಳಿ ಬೆಳೆಗೆ ಒಂದಿಲ್ಲೊಂದು ಕಷ್ಟಗಳು ಕಾಡುತ್ತಲೇ ಇರುತ್ತವೆ ಎಂದು ರೈತ ಹೆಚ್.ಡಿ.ಹನುಮಂತರಾಯ ಅಳಲು ತೋಡಿ ಕೊಂಡರು.

ಪ್ರಸಕ್ತ ಸಾಲಿನಲ್ಲಿ 50 ಎಕರೆ ಜಮೀನು ಗುತ್ತಿಗೆ ಪಡೆದು ಈರುಳ್ಳಿ ಬಿತ್ತನೆ ಮಾಡಿದ್ದೆ. ಈ ಸಲ ಉತ್ತಮ ಬೆಳೆಯ ನಿರೀಕ್ಷೆ ಇತ್ತು. ಆದರೆ ಈರುಳ್ಳಿ ಕೀಳೋ ಹೊತ್ತಿಗೆ ಮಳೆ ಶುರುವಾಗಿ ಜಮೀನಿನಲ್ಲೇ ಈರುಳ್ಳಿ ಕೊಳೆಯುವಂತಾಗಿದೆ. ಹಾಕಿದ ಖರ್ಚು ತಲೆ ಮೇಲೆ ಬರುವಂತಿದೆ ಎಂದು ಗುತ್ತಿದೆದಾರ ರೈತ ಕೋವೇರಹಟ್ಟಿ ಕೆ.ದ್ಯಾಮಣ್ಣ ನೋ ವು ತೋಡಿಕೊಂಡರು.

ಜಿಲ್ಲೆಯಲ್ಲಿ ಈರುಳ್ಳಿ ಬಿತ್ತನೆ-
ಚಿತ್ರದುರ್ಗ ಜಿಲ್ಲೆಯಾದ್ಯಂತ 30390 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮುಂಗಾರು ಹಂಗಾಮಿನಲ್ಲಿ ರೈತರು 26,630 ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಿದ್ದರು.

ಈ ಪೈಕಿ ಚಿತ್ರದುರ್ಗ ತಾಲೂಕಿನಲ್ಲಿ 7530 ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಿದ್ದರೆ,  ಹಿರಿಯೂರು ತಾಲೂಕಿನಲ್ಲಿ 2300 ಹೆಕ್ಟೇರ್,  ಚಳ್ಳಕೆರೆ ತಾಲೂಕಿನಲ್ಲಿ 10990 ಹೆಕ್ಟೇರ್, ಹೊಸದುರ್ಗ ತಾಲೂಕಿನಲ್ಲಿ 3452 ಹೆಕ್ಟೇರ್, ಹೊಳಲ್ಕೆರೆ ತಾಲೂಕಿನಲ್ಲಿ 2158 ಹೆಕ್ಟೇರ್ ಬಿತ್ತನೆ, ಮೊಳಕಾಲ್ಮೂರು ತಾಲೂಕಿನಲ್ಲಿ 200 ಹೆಕ್ಟೇರ್ ಈರುಳ್ಳಿ ಬಿತ್ತನೆ ಮಾಡಲಾಗಿತ್ತು.

ಬೆಳೆ ಹಾನಿ-
ಜಿಲ್ಲೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ ದಿನದಿಂದಲೂ ರೈತರು ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ.
ಈರುಳ್ಳಿ ಬಿತ್ತನೆ ಮಾಡಿದ ತಿಂಗಳೊಳಗೆ ಮುಂಗಾರು ಪೂರ್ವದಲ್ಲಿ 509 ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಮುಂಗಾರು ಹಂಗಾಮಿನಲ್ಲಿ 253 ಹೆಕ್ಟೇರ್ ಹಾನಿಯಾಗಿದೆ.  ಹಿಂಗಾರು ಹಂಗಾಮಿನ ಮಳೆಯಿಂದಾಗಿ 99.9 ಹೆಕ್ಟೇರ್ ಈರುಳ್ಳಿ ಹಾನಿ ಆಗಿದೆ.

ತಾಲೂಕುವಾರು ಬೆಳೆ ಹಾನಿ-
ಚಿತ್ರದುರ್ಗ-60 ಹೆಕ್ಟೇರ್ ಹಾನಿಯಾಗಿದ್ದರೆ, ಚಳ್ಳಕೆರೆ-15 ಹೆಕ್ಟೇರ್, ಹಿರಿಯೂರು- 25 ಹೆಕ್ಟೇರ್ ಹಾನಿಯಾಗಿದೆ. ಒಟ್ಟು 150 ಹೆಕ್ಟೇರ್ ತೋಟಗಾರಿಕಾ ಬೆಳೆಗಳ ಹಾನಿ ಪೈಕಿ ಈರುಳ್ಳಿ ಬೆಳೆಯೇ 100 ಹೆಕ್ಟೇರ್ ಹಾನಿಯಾಗಿದೆ.

ಕಟಾವು ನಂತರ ಕೊಳೆಯುತ್ತಿರುವ ಈರುಳ್ಳಿ-
ಮಾರುಕಟ್ಟೆಯಲ್ಲಿ ಉತ್ತಮ ದರ ಇತ್ತು. ಈರುಳ್ಳಿ ಫಸಲು ಕೂಡ ಉತ್ತಮವಾಗಿತ್ತು. ಇನ್ನೇನು ಕಟಾವು ಮಾಡಿ ಮಾರಾಟ ಮಾಡಿದರೆ ಕೈ ತುಂಬಾ ದುಡ್ಡು ನೋಡುತ್ತೇವೆಂದು ಕೊಂಡಿದ್ದ ರೈತರಿಗೆ ದಿಢೀರ್ ಕಾಡಿದ್ದು ಹಿಂಗಾರು ಹಂಗಾಮಿನ ಭಾರೀ ಮಳೆ.

ರೈತರು ಜಮೀನಿನಲ್ಲಿದ್ದ ಈರುಳ್ಳಿ ಗೆಡ್ಡೆಗಳನ್ನು ಕಿತ್ತು ಗುಡ್ಡೆ ಹಾಕುತ್ತಿದ್ದರು. ಕೆಲ ರೈತರು ಹೊಲದಲ್ಲೇ ಈರುಳ್ಳಿ ಕಿತ್ತು ಗುಡ್ಡೆ ಹಾಕಿದರು. ಇನ್ನೂ ಕೆಲ ರೈತರು ಈರುಳ್ಳಿ ಕಿತ್ತು ಕಣಗಳಿಗೆ ತೆಗೆದುಕೊಂಡು ಹೋಗಿ ಗುಡ್ಡೆ ಹಾಕಿದರು. ಇನ್ನೇನು ಕೊಯ್ಲು ಮಾಡಬೇಕೆನ್ನುವಷ್ಟರಲ್ಲಿ ಹಿಂಗಾರು ಮಳೆ ರೈತರಿಗೆ ಬರ ಸಿಡಿಲು ಬಡಿದಂತಾಯಿತು.

ಸತತವಾಗಿ ಸುರಿಯುತ್ತಿರುವ ಮಳೆಗೆ ಸಿಲುಕಿರುವ ಈರುಳ್ಳಿ ಫಸಲು ಬಹುತೇಕ ಕೊಳೆತು ದುರ್ನಾಥ ಬರುತ್ತಿದೆ, ಇನ್ನೊಂದೆಡೆ ಕೃಷಿ ಜಮೀನಿಯಲ್ಲೇ ಉಳಿದ ಈರುಳ್ಳಿ ಕೂಡ ಮಳೆಯಿಂದಾಗಿ ಕೊಳೆಯುತ್ತಿದೆ. ಮತ್ತೊಂದೆಡೆ ಕೊಯ್ಲು ಮಾಡಿ ಚೀಲ ಮಾಡಲು ಜಮೀನಿನಿಂದ ಹೊರತರಲಾಗಿರುವ ಈರುಳ್ಳಿ ಗಡ್ಡೆ ಹಸನುಗೊಳಿಸುವ ಮೊದಲೇ ಕರಗುತ್ತಿದೆ.

ಮುಂಗಾರು ಮಳೆ ಆರಂಭಕ್ಕೂ ಮೊದಲು ಕಿತ್ತು ಹಸನು ಮಾಡಿ ಮಾರುಕಟ್ಟೆಗೆ ಕೊಂಡೊಯ್ಯಲು ಚೀಲದಲ್ಲಿ ತುಂಬಿರುವ ಈರುಳ್ಳಿ ಕೆಟ್ಟು ಹೋಗುತ್ತಿವೆ. ಚೀಲದಲ್ಲಿ ತುಂಬಿ ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧಗೊಳಿಸಲಾದ ಈರುಳ್ಳಿ ಮಳೆಗೆ ಸಿಲುಕಿ ಕೊಳೆತಿವೆ.

ಕರಗಿರುವ ಈರುಳ್ಳಿ ಗಡ್ಡೆಯನ್ನು ಚೀಲ ಸಮೇತ ರಸ್ತೆಗೆ ಎಸೆಯಲಾಗಿದೆ. ಇದು, ಹಲವು ಗ್ರಾಮಗಳ ರಸ್ತೆಯಂಚಿನಲ್ಲಿ ಕಾಣಸಿಗುವ ಈರುಳ್ಳಿ ಕಥೆಯ ವ್ಯಥೆ. ಇದು ರೈತರನ್ನು ಅಕ್ಷರಶಃ ಕಂಗಾಲಾಗುವಂತೆ ಮಾಡಿದೆ.

ಶಾಪವಾದ ಹಿಂಗಾರು ಮಳೆ-
ರೈತಾಪಿ ವರ್ಗಕ್ಕೆ ವರವಾಗಬೇಕಿದ್ದ ಮುಂಗಾರು-ಹಿಂಗಾರು ಮಳೆ ಶಾಪವಾಗಿ ಕಾಡುತ್ತಿದೆ. ಅತಿಯಾದ ಮಳೆಯಿಂದಾಗಿ ಈರುಳ್ಳಿ ಗಡ್ಡೆ ಕೊಳೆತು ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮುಂಗಾರು-ಹಿಂಗಾರು ಮಳೆರಾಯ ಮಾಡಿದ್ದು
, ಆದಾಯ ನಿರೀಕ್ಷೆ ನೀರಿನಲ್ಲಿ ಕೊಚ್ಚಿ ಹೋಗಿದೆ.

ಸಾಲದ ಸುಳಿಯಲ್ಲಿ ರೈತರು-
ಈರುಳ್ಳಿ ಬಿತ್ತನೆಗೆ ಜಮೀನು ಹಸನು ಮಾಡುವುದು, ಬಿತ್ತನೆ ಬೀಜ ಖರೀದಿ, ಬಿತ್ತನೆ ಮಾಡುವ ಕೂಲಿ, ನೀರಾಯಿಸುವುದು, ಕಳೆ ತೆಗೆಯುವುದು, ಔಷಧಿ ಸಿಂಪರಣೆ ಸೇರಿದಂತೆ ಮತ್ತಿತರ ಖರ್ಚು ವೆಚ್ಚಗಳಿಗೆ ಮಾಡಿದ ಲಕ್ಷಾಂತರ ರೂ. ಸಾಲ ತೀರಿಸುವುದು ಹೇಗೆಂದು
? ರೈತರು ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಒಂದು ಕಡೆ ಈರುಳ್ಳಿ ಬೆಳೆಗೆ ಮಾಡಿದ ಸಾಲದ ಹೊರೆ ಇನ್ನೊಂದು ಕಡೆ ವರ್ಷದ ಜೀವನ ನಿರ್ವಹಣೆ ಹೇಗೆಂಬ ಚಿಂತೆ ಈರುಳ್ಳಿ ಬೆಳೆದ ರೈತರಲ್ಲಿ ಆವರಿಸಿದೆ.

ರೋಗ ಬಾಧೆ-
ಈರುಳ್ಳಿ ಬೀಜ ಬಿತ್ತನೆ ಮಾಡಿದ ದಿನದಿಂದಲೂ ನಾನಾ ರೀತಿಯ ರೋಗ ಬಾಧೆ ಈರುಳ್ಳಿ ಫಸಲಿಗೆ ಕಾಡಿತು. ಈರುಳ್ಳಿ ಬೆಳೆಗೆ ನೇರಳೆ ಮಚ್ಚೆ ರೋಗ, ಮೊಳಕೆ ಹೊಡೆದ ಈರುಳ್ಳಿ, ಕಟಾವು ನಂತರ ಕೊಳೆಯುತ್ತಿರ ಈರುಳ್ಳಿ, ತೇವಾಂಶ ಜಾಸ್ತಿಯಾಗಿ ಮೊಳಕೆ ಹೊಡೆದ ಈರುಳ್ಳಿ ಹೀಗೆ ಹಲವು ಸಂದರ್ಭದಲ್ಲಿ ಈರುಳ್ಳಿ ಫಸಲಿಗೆ ಸಂಕಷ್ಟ ಬಂದಿದೆ.

ಕಟಾವು ಮಾಡಿರುವ ಈರುಳ್ಳಿ ಗೆಡ್ಡೆಯನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಆದರೆ ಈರುಳ್ಳಿ ಗೆಡ್ಡೆ ಕೊಯ್ಲು ಮಾಡಿ ಒಣಗಿಸಲು ಸಾಧ್ಯವಾಗುತ್ತಿಲ್ಲ. ಮಳೆ ಜಾಸ್ತಿ ಬೀಳುತ್ತಿರುವುದರಿಂದ ಈರುಳ್ಳಿ ಗೆಡ್ಡೆಯಲ್ಲಿ ತೇವಾಂಶ ಜಾಸ್ತಿ ಆಗಿದೆ. ಈರುಳ್ಳಿ ಗೆಡ್ಡೆಗೆ ಸ್ವಲ್ಪ ನೀರು ಬಿದ್ದರೂ ಸಾಕು ಕೊಳೆತು ಹೋಗಲಿದೆ. ಹಾಗಾಗಿ ರೈತರು ಕಟಾವು ಮಾಡಿರುವ ಈರುಳ್ಳಿಯನ್ನು ಮನೆಯಲ್ಲಿ ಶೇಖರಣೆ ಮಾಡಲೂ ಬರುವುದಿಲ್ಲ. ಈರುಳ್ಳಿ ಗೆಡ್ಡೆಗಳನ್ನು ಒಂದೇ ಕಡೆ ರಾಶಿಯಾಗಿ ಇಡುವುದರಿಂದ ಉಷ್ಣಾಂಶ ಜಾಸ್ತಿಯಾಗಿ ಬೆವೆತುಕೊಂಡು ಕೊಳೆಯುತ್ತಿದೆ. ಇದರ ಜೊತೆಗೆ ಮೊಳಕೆಗಳು ಕೂಡ ಮೂಡುತ್ತಿವೆ.

ಸ್ವಲ್ಪ ತೇವಾಂಶ ಸಿಕ್ಕರೂ ಸಾಕು ಉದ್ದುದ್ದ ಮೊಳಕೆ ದಿನ ಬೆಳೆಗಾದರೆ ಎದ್ದೇಳುತ್ತಿವೆ. ದೀರ್ಘಕಾಲ ಒಂದೇ ಕಡೆ ಅಲುಗಾಡದಂತೆ ಈರುಳ್ಳಿ ಗೆಡ್ಡೆ ರಾಶಿಯಲ್ಲಿ ಇಟ್ಟರೆ ಮೊಳಕೆ ಬಂದಿದೆ. ಮೊಳಕೆ ಹೊಡೆದ ಈರುಳ್ಳಿಯನ್ನು ತಿಪ್ಪೆಗುಂಡಿಗೆ ಬಿಸಾಡಬೇಕಾಗಿದೆ.

ಒಟ್ಟಾರೆ ಈರುಳ್ಳಿ ಬೆಳೆದ ರೈತರ ಪಾಡು ಹೇಳ ತೀರದಾಗಿದೆ. ಸರ್ಕಾರ ಕೂಡಲೇ ಈರುಳ್ಳಿ ಸಮೀಕ್ಷೆ ಆರಂಭಿಸಿ ರೈತರಿಗೆ ಎಕರೆ ಒಂದಕ್ಕೆ ಕನಿಷ್ಠ 30 ಸಾವಿರ ರೂ. ಪರಿಹಾರ ನೀಡುವಂತೆ ಈರುಳ್ಳಿ ಬೆಳೆಗಾರ ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮುಂಗಾರು ಪೂರ್ವ, ಮುಂಗಾರು ಮತ್ತು ಹಿಂಗಾರು ಮಳೆಯಿಂದಾಗಿ 862 ಹೆಕ್ಟೇರ್ ಈರುಳ್ಳಿ ಫಸಲು ಹಾನಿಯಾಗಿದೆ. ಆದರೆ ಕಟಾವು ಮಾಡಿರುವ ಈರುಳ್ಳಿ ಗೆಡ್ಡೆಗಳು ಮಳೆಯಿಂದಾಗಿ ಕೊಳೆಯುತ್ತಿದೆ ಮತ್ತು ಮೊಳಕೆ ಬರುತ್ತಿದೆ. ಇದರ ನಷ್ಟ ಪ್ರಮಾಣ ಇನ್ನೂ ಲಭ್ಯವಾಗಿಲ್ಲ. ತಾಲೂಕು ಅಧಿಕಾರಿಗಳು ಸಮೀಕ್ಷೆ ಮಾಡಿ ಎಷ್ಟು ಹೆಕ್ಟೇರ್ ನಷ್ಟವಾಗಿದೆ ಎನ್ನುವ ಮಾಹಿತಿ ತಿಳಿಸಲಿದ್ದಾರೆ. ಗೋವಿಂದರಾಜ್, ತಾಂತ್ರಿಕ ಅಧಿಕಾರಿ, ತೋಟಗಾರಿಕೆ ಇಲಾಖೆ, ಚಿತ್ರದುರ್ಗ.

 

- Advertisement -  - Advertisement - 
Share This Article
error: Content is protected !!
";