ಕೈಕೊಟ್ಟ ಮಳೆ, ಕಂಗಾಲಾದ ರೈತ, ಅಂತರ್ಜಲ ವೃದ್ಧಿಗೆ ವಿವಿ ಸಾಗರ ನೀರು ಹರಿಸಿ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಅಸಮರ್ಪಕ ಮಳೆಯಿಂದಾಗಿ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಲ ಭಾಗಗಳಲ್ಲಿ ಬರದ ದವಡೆಗೆ ರೈತರು ಸಿಲುಕಿದ್ದು ಗಾಯದ ಮೇಲೆ ಬರೆ ಎಳೆಯಲಾಗಿದೆ.

ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರದ ಸುತ್ತ ಮುತ್ತಲ ಹತ್ತಾರು ಹಳ್ಳಿಗಳಲ್ಲಿ ಮುಂಗಾರು ಹಂಗಾಮಿನ ಮಳೆ ಕೈಕೊಟ್ಟಿದ್ದರಿಂದಾಗಿ ಮಳೆ ಯಾಶ್ರಿತದಲ್ಲಿ ಬಿತ್ತನೆ ಮಾಡಿದ ಹಲವು ಬೆಳೆಗಳು ಒಣಗುತ್ತಿವೆ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ
, ಸೂರ್ಯಕಾಂತಿ, ಮೆಕ್ಕೆ ಜೋಳ, ರಾಗಿ, ನವಣೆ, ಸಜ್ಜೆ ಮತ್ತಿತರ ಬೆಳೆಗಳು ಮಳೆ ಕೊರತೆಯಿಂದಾಗಿ ಒಣಗಿ ನಿಂತಿವೆ.

ಆದರೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗುವ ಮಳೆ ವಿವರಗಳನ್ನು ಪರಿಶೀಲನೆ ಮಾಡಿದಾಗ ವಾಡಿಕೆ ಮಳೆಗಿಂತ ಅಧಿಕ ಮಳೆ ಬಿದ್ದಿದೆ ಎನ್ನುವ ಮಾಹಿತಿ ದಾಖಲಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾದ ಬೆಳೆಗಳಿಗೆ ವಾರ ಅಥವಾ 10-12 ದಿನಗಳಿಗೊಮ್ಮೆ ಮಳೆ ಬಿದ್ದರೆ ಫಸಲು ಹೆಚ್ಚಾಗಿ ಬರುತ್ತದೆ. ಆದರೆ 10-15 ದಿನಗಳ ಕಾಲ ನಿರಂತರವಾಗಿ ಜೋರಾಗಿ ಮಳೆ ಬಿದ್ದಿದ್ದರಿಂದಾಗಿ ವಾಡಿಕೆ ಮಳೆಗಿಂತ ಅಧಿಕ ಮಳೆ ದಾಖಲಾಗಿದೆ. ಆದರೆ ಅಧಿಕ ಮಳೆ ಬಿದ್ದಿರಬಹುದು. ವಾಸ್ತವದಲ್ಲಿ ಅಸಮರ್ಪಕ ಮಳೆಯಿಂದಾಗಿ ಮಳೆಯಾಶ್ರಿತ ಬೆಳೆಗಳು ಒಣಗಿ ನಿಂತಿವೆ. ಇದರ ಜೊತೆಯಲ್ಲಿ ಅಂತರ್ಜಲ ಮಟ್ಟ ಕೂಡ ತೀವ್ರ ಕುಸಿತಕಂಡಿದೆ. ಕಳೆದ ತಿಂಗಳಿಂದ ಮಳೆಯಾಗದೆ ಬಹುತೇಕ ಕೃಷಿ ಚಟುವಟಿಕೆಗಳು ಸ್ಥಗಿತೊಂಡಿವೆ.

ಸಂಕಷ್ಟದ ಸ್ಥಿತಿ-
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಸಮರ್ಪಕವಾಗಿ ಮಳೆ ಸುರಿಯದೆ ರೈತರು ಸಂಕಷ್ಟದ ಸ್ಥಿತಿ ಎದುರಿಸುವಂತಾಗಿದೆ. ಹಲವು ಕಡೆ ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶ ಕೊರತೆಯಿಂದ ಬಹುತೇಕ ಬೆಳೆಗಳು ಒಣಗಿ ಕುಂಠಿತವಾಗಿದೆ. ಸೂಕ್ತ ಸಮಯಕ್ಕೆ ಮಳೆ ಬಾರದೆ ಬಿತ್ತನೆ ಕ್ಷೇತ್ರ ಕೂಡ ಕಡಿಮೆಯಾಗಿದೆ.
ತೇವಾಂಶ ಕೊರತೆಯಿಂದಾಗಿ ವಿವಿ ಪುರ, ಕಕ್ಕಯ್ಯನಹಟ್ಟಿ, ಬೆಳಗಟ್ಟ, ಭರಂಗಿರಿ, ಹುಚ್ಚವ್ವನಹಳ್ಳಿ, ಕುಂಟಪ್ಪನಪಾಳ್ಯ, ಗುಡಿಹಳ್ಳಿ, ಗೌನಹಳ್ಳಿ, ಭೂತಯ್ಯನಹಟ್ಟಿ, ಮಾಯಸಂದ್ರ, ಕೂನಿಕೆರೆ, ಕುರುಬರಹಳ್ಳಿ, ಲಕ್ಕವ್ವನಹಳ್ಳಿ ಬೀರೇನಹಳ್ಳಿ, ಎ.ವಿ.ಕೊಟ್ಟಿಗೆ ಸೇರಿದಂತೆ ಮತ್ತಿತರ ಭಾಗಗಳಲ್ಲಿ ರಾಗಿ, ನವಣೆ, ಶೇಂಗಾ, ಬಾಳೆ, ಅಡಿಕೆ, ಮುಸುಕಿನ ಜೋಳ ಮತ್ತಿತರ ಫಸಲುಗಳು ನೆಲಸಮವಾಗಿವೆ. ಕೊಳವೆ ಬಾವಿ ಆಶ್ರಯದಲ್ಲಿ ಬಿತ್ತನೆ ಮಾಡಲಾದ ಈರುಳ್ಳಿ
, ಮೆಣಸಿನಕಾಯಿ, ಬಾಳೆ ಗಿಡಗಳ ಬೆಳೆಗಳು ಕೂಡ ಒಣಗಿ ನಿಂತಿವೆ. ಇವುಗಳನ್ನು ಉಳಿಸಿಕೊಳ್ಳಲು ರೈತರು ಜಮೀನುಗಳಲ್ಲಿ ಹರಸಹಾಸ ಮಾಡುತ್ತಿದ್ದು ಅದರಿಂದ ರೈತರಿಗೆ ಲಾಭವಾಗುವುದು ತುಂಬಾ ಕಡಿಮೆ.

ಬರದ ಕಾರ್ಮೋಡ-
ಯಾವುದೇ ನೀರಾವರಿ ಯೋಜನೆ ಇಲ್ಲಿಯವರೆಗೂ ಈ ಭಾಗದ ಹಳ್ಳಿಗಳನ್ನು ತಲುಪದಿರುವುದು ಒಂದಡೆಯಾದರೆ ಇನ್ನೊಂದೆಡೆ ಮಳೆಯಾಶ್ರಿತ ಕೃಷಿ ಪ್ರದೇಶ ಹೊಂದಿರುವ ರೈತರ ಗೋಳು ಹೇಳ ತೀರದಾಗಿದೆ.

ಮಳೆಗಾಲದಲ್ಲಿಯೇ ಬರದ ಕಾರ್ಮೋಡ ಆವರಿಸುತ್ತಿದೆ. ಹೀಗಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ಬಿತ್ತನೆಗಾಗಿ ಮಾಡಿದ ಖರ್ಚು, ಬದುಕು ಕಟ್ಟಿಕೊಳ್ಳಲು ಹಾಕಿದ ಶ್ರಮ ವ್ಯರ್ಥವಾಗುತ್ತಿದೆ.

ಜೂನ್‌, ಜುಲೈ ತಿಂಗಳಲ್ಲಿ ಬಿದ್ದ ಮಳೆಗೆ ರೈತರು ಭರ್ಜರಿ ಬಿತ್ತನೆ ಕಾರ್ಯ ಮಾಡಿದ್ದರು. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಅಸಮರ್ಪಕ ಮಳೆಯಾಗಿದೆ. ಬೆಳೆಗೆ ಅತ್ಯಂತ ತುರ್ತಾಗಿ ಮಳೆಯ ಅಗತ್ಯವಿದೆ. ಒಂದೆರಡು ದಿನಗಳಲ್ಲಿ ಮಳೆಯಾದಲ್ಲಿ ರೈತರಿಗೆ ಯಾವುದೇ ಫಸಲು ಕೈಗೆ ದೊರೆಯದಿದ್ದರೂ ಜಾನುವಾರುಗಳಿಗೆ ಮೇವು ಲಭ್ಯವಾಗಲಿದೆ.

ಕೆಲ ದಿನಗಳಿಂದೆ ಮೋಡ ಮುಸುಕಿದ ವಾತಾವರಣ ಇತ್ತು, ಆಗ ಕೊಂಚವಾದರೂ ಬೆಳೆ ಸಿಗುತ್ತದೆ ಎನ್ನುವ ಭರವಸೆ ರೈತರಲ್ಲಿತ್ತು. ಆದರೆ ಈಗ ಬಿಸಿಲು ಜೋರಾಗಿದ್ದು ಬೆಳೆಗಳು ಬಾಡುತ್ತಿರುವುದರಿಂದ ರೈತರು ಬೆಳೆ ಉಳಿಸಿಕೊಳ್ಳಲು ವಿವಿಧ ಕಸರತ್ತು ಮಾಡುತ್ತಿದ್ದರೂ ಏನು ಪ್ರಯೋಜನ ಆಗುವ ಲಕ್ಷಣ ಕಾಣುತ್ತಿಲ್ಲ.

ಸಾಲದ ಸುಳಿಯಲ್ಲಿ ರೈತರು-
ಉತ್ತಮ ಮಳೆಯಾಗಲಿದೆ ಎನ್ನುವ ಭರವಸೆಯೊಂದಿಗೆ ಭೂಮಿಯನ್ನು ಹತ್ತಾರು ಸಾವಿರ ರೂ.ಖರ್ಚು ಮಾಡಿ ಎರಡು ಮೂರು ಸಲ ಹಸನು ಮಾಡಿಕೊಂಡಿದ್ದರು. ಅಲ್ಲಲ್ಲಿ ಬಿದ್ದ ಅಸಮರ್ಪಕ ಮಳೆಯಿಂದಾಗಿ ಬಿತ್ತನೆ ಮಾಡಿದ್ದರು. ಬಿತ್ತನೆ ಬೀಜ, ಗೊಬ್ಬರ, ಎಡೆ ಹೊಡೆಯುವುದು, ಕಳೆ ತೆಗೆಯುವುದು ಸೇರಿದಂತೆ ಪ್ರತಿ ಎಕರೆಗೆ 30 ಸಾವಿರದಷ್ಟು ಹಣವನ್ನು ಸಾಲ-ಸೋಲ ಮಾಡಿ ಹಾಕಿದ್ದರು. ಫಸಲು ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿವೆ. ಇದಕ್ಕಾಗಿ ಮಾಡಿದ ಸಾಲ ಹೆಚ್ಚಾಗುತ್ತಿದ್ದು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ಬರ ಘೋಷಣೆ ಮಾಡಲಿ-
ಮುಂಬರುವ ಉತ್ತರೆ ಮಳೆ, ಹಸ್ತ, ಚಿತ್ತ, ಸ್ವಾತಿ ಮಳೆಗಳು ಬಂದರೂ ಈ ಫಸಲುಗಳು ಸುಧಾರಿಸಿಕೊಳ್ಳುವ ಸಾಧ್ಯತೆ ತೀರಾ ಕ್ಷೀಣವಾಗಿದೆ. ರೈತರ ಫಸಲುಗಳಿಗೆ ಬರ ಪರಿಹಾರ ನೀಡಬೇಕು. ಸರ್ಕಾರ ರೈತರ ಕೋರಿಕೆ ಈಡೇರಿಸದಿದ್ದರೆ ವಿಷ ಕುಡಿಯುವುದೊಂದೇ ಬಾಕಿ ಇದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಈ ಕುರಿತು ಗಂಭೀರ ಚಿಂತನೆ ಮಾಡಿ ಗ್ರಾಮವಾರು ಬರ ಘೋಷಣೆ ಮಾಡಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಲುವೆಯಲ್ಲಿ ವಿವಿ ಸಾಗರದ ನೀರು ಹರಿಸಿ-
ಭರಮಗಿರಿ ಕೆರೆ, ಕೂನಿಕೆರೆ, ಗುಡಿಹಳ್ಳಿ, ಗೌನಹಳ್ಳಿ, ಮಾಯಸಂದ್ರ, ಹುಚ್ಚವ್ವನಹಳ್ಳಿ, ಕಕ್ಕಯ್ಯನಹಟ್ಟಿ, ಭೂತಯ್ಯನಹಟ್ಟಿ, ಬೆಳಗಟ್ಟ, ವಾಣಿ ವಿಲಾಸ ಸಾಗರ ಸುತ್ತ ಮುತ್ತಲ ಹಳ್ಳಿಗಳ ಸೇರಿದಂತೆ ಮತ್ತಿತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು ಕೆರೆ ಕಟ್ಟೆಗಳಿಗೆ ವಿವಿ ಸಾಗರದ ಕಾಲುವೆಗಳಲ್ಲಿ ಡ್ಯಾಂ ನೀರು ಹರಿಸಿ ಅಂತರ್ಜಲ ವೃದ್ಧಿಸುವ ಕಾರ್ಯ ಮಾಡಬೇಕು. ತುರ್ತಾಗಿ ಈ ಕಾರ್ಯ ಮಾಡದಿದ್ದರೆ ಅಳಿದುಳಿದಿರುವ ಬಾಳೆ, ಅಡಿಕೆ, ತೆಂಗು ಸೇರಿದಂತೆ ಮತ್ತಿತರ ತೋಟಗಾರಿಕಾ ಬೆಳೆಗಳು ಒಣಗಿ ಹೋಗಲಿವೆ. ಕನಿಷ್ಠ ಪಕ್ಷ ಲಕ್ಕವ್ವನಹಳ್ಳಿ ಬ್ಯಾರೇಜ್ ಗೆ ವಿವಿ ಸಾಗರದ ಎಡ ಮತ್ತು ಬಲ ದಂಡೆಯ ಕಾಲುವೆಗಳ ಮೂಲಕ ನೀರು ಹರಿಸಿ ಅಂತರ್ಜಲ ವೃದ್ಧಿಸಬೇಕು ಎನ್ನುವುದು ರೈತರ ಬಹು ಮುಖ್ಯ ಕೋರಿಕೆಯಾಗಿದೆ.

ವಿವಿ ಸಾಗರ ಸುತ್ತ ಮುತ್ತಲ ಹಲವು ಹಳ್ಳಿಗಳಲ್ಲಿ ಮಳೆ ಕೊರತೆ ತೀವ್ರವಾಗಿ ಅಂತರ್ಜಲ ಮಟ್ಟ ಕುಸಿದಿದೆ. ಕೆರೆ, ಕಟ್ಟೆಗಳಿಗೆ ವಿವಿ ಸಾಗರದ ನೀರು ಹರಿಸಿ ಅಂತರ್ಜಲ ವೃದ್ಧಿಸಬೇಕು. ಈಗಾಗಲೇ ಒಣಗಿ ಹೋಗಿರುವ ಬೆಳೆಗಳಿಗೆ ಪರಿಹಾರ ನೀಡಿ ರೈತರ ಆತ್ಮಹತ್ಯೆಗಳನ್ನು ತಪ್ಪಿಸಬೇಕು.ಎಸ್.ಮೂರ್ತಿ, ಸದಸ್ಯರು, ಗ್ರಾಮ ಪಂಚಾಯಿತಿ, ವಿವಿಪುರ.

 

 

- Advertisement -  - Advertisement -  - Advertisement - 
Share This Article
error: Content is protected !!
";