ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾತಿಗಣತಿ ಸಮೀಕ್ಷೆ ಕಾರ್ಯವು ಆಮೆನಡಿಗೆಯಲ್ಲಿ ಆರಂಭಗೊಂಡು, ಈಗ ಅತ್ಯಂತ ಚುರುಕು ಪಡೆದುಕೊಂಡಿದೆ. ಜೊತೆಗೆ ಬಹಳಷ್ಟು ಅವಕಾಶವನ್ನು ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಆಯೋಗವು ನೀಡಿದೆ. ಆದ್ದರಿಂದ ಜೂ.22 ಅಂತಿಮ ದಿನ ಆಗಬೇಕು. ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು ಎಂದು ಮಾಜಿ ಸಚಿವ ಎಚ್.ಆಂಜನೇಯ ಒತ್ತಾಯಿಸಿದರು.
ಜಾತಿಗಣತಿ ಸರ್ವೇ ಕಾರ್ಯದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಿಸಲು ಮಹದೇವಪುರ ವಿಧಾನಸಭಾ ಕ್ಷೇತ್ರದ ಹೂಡಿ ವ್ಯಾಪ್ತಿಯ ಪರಿಶಿಷ್ಟರ ವಾಸದ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಆಂಜನೇಯ ಅವರು ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯ ಮುಖಂಡರು, ಮಾದಿಗ ಸಮುದಾಯದವರು ಅದ್ದೂರಿಯಾಗಿ ಬರಮಾಡಿಕೊಂಡು ಮನೆ ಮನೆಗೆ ಭೇಟಿ ಮಾಡಿಸಿದರು.
ಈ ವೇಳೆ ಜಾತಿಗಣತಿ ಸರ್ವೇ ವೇಳೆ ನೊಂದಾಯಿಸಿದ್ದರ ಬಳಿ ನೀವು ಏನೆಂದು ಬರೆಯಿಸಿದ್ದೀರಾ ಎಂದು ಆಂಜನೇಯ ಪ್ರಶ್ನೀಸಿದರು. ಜಾತಿ ಆದಿಕರ್ನಾಟಕ, ಮೂಲ ಜಾತಿ ಮಾದಿಗ 061 ಎಂದು ಬರೆಯಿಸಿದ್ದೇವೆ ಎಂದು ಹೇಳಿದರು.
ಅದೇ ರೀತಿ ಅನೇಕ ಮನೆಗಳಿಗೆ ಭೇಟಿ ನೀಡಿ, ನೀವುಗಳು ತಕ್ಷಣ ಸರ್ವೇ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಜಾತಿ ಹೇಳಿಕೊಳ್ಳಲು ಹಿಂಜರಿಕೆ ಬೇಡ. ಇದು ಮೀಸಲಾತಿ ಪಡೆಯಲು ಇರುವ ಏಕೈಕ ಮಾರ್ಗ. ಕೀಳರಿಮೆ ತೊರೆಯದಿದ್ದರೆ ನಿಮಗೆ ಮೀಸಲಾತಿ ಸೌಲಭ್ಯ ದೊರೆಯುವುದಿಲ್ಲ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮೂಲ ಜಾತಿ ಮಾದಿಗ 061 ಎಂದು ಬರೆಯಿಸುವ ಮೂಲಕ ಒಳಮೀಸಲಾತಿಯಲ್ಲಿ ಹೆಚ್ಚು ಪಾಲು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಮಾದಿಗರು ಸ್ವಾಭಿಮಾನದಿಂದ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ನಗರ ಪ್ರದೇಶ ಅದರಲ್ಲೂ ಬೆಂಗಳೂರಿನಲ್ಲಿ ಸಾಮಾಜಿಕ ಕಾರಣಕ್ಕೆ ಜಾತಿ ಹೇಳಿಕೊಳ್ಳಲು ಹಿಂಜರಿದಿದ್ದು, ಸಮೀಕ್ಷೆ ಕಾರ್ಯಕ್ಕೆ ತೀವ್ರ ಹಿನ್ನಡೆ ಆಗಿದೆ. ಈ ಸತ್ಯ ಅರಿತು ಸರ್ಕಾರ ಮತ್ತು ಆಯೋಗ ಮೂರು ಬಾರಿ ಸವೇ ಕಾರ್ಯ ದಿನಾಂಕವನ್ನು ವಿಸ್ತರಿಸಿದೆ. ಇದೇ ಅಂತಿಮ ಅವಕಾಶ, ಮತ್ತೊಮ್ಮೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದರು.
ಆದ್ದರಿಂದ ಸಮುದಾಯದ ಚಿಂತಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ನೌಕರರು ಸಮಾಜದ ಋಣ ತೀರಿಸಲು ಜೊತೆಗೆ ನಮ್ಮಗಳ ಭವಿಷ್ಯ ಉಜ್ವಲಕ್ಕಾಗಿ ಸಮೀಕ್ಷೆ ಕಾರ್ಯ ಕುರಿತು ಎಸ್ಸಿ ಕಾಲೋನಿ ಜೊತೆಗೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಬೇಕು. ಜೊತೆಗೆ ಸಮೀಕ್ಷೆದಾರರ ಜೊತೆಗೆ ಮನೆ ಮನೆಗೆ ಹೋಗಿ ಮಾದಿಗ 061 ಎಂದು ಬರೆಯಿಸಲು ಬದ್ಧತೆ ಪ್ರದರ್ಶಿಸಬೇಕು. ಈ ಮೂಲಕ ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು ಎಂದರು.
ಈಗಾಗಲೇ ರಾಜ್ಯಾದ್ಯಂತ ಸುತ್ತಾಟ ನಡೆಸಿದ್ದೇನೆ, ಎಲ್ಲೆಡೆಯೂ ಜಾಗೃತಿ ಮೂಡಿಸಿದ್ದೇನೆ. ಜನರು ಹೆಚ್ಚು ಜಾಗೃತಗೊಂಡಿದ್ದಾರೆ. ಅದೇ ರೀತಿ ಬೆಂಗಳೂರು ಪ್ರದೇಶದಲ್ಲೂ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘಟನೆಗಳ ಮುಖಂಡರು, ಚಿಂತಕರು, ನೌಕರರ ಜವಾಬ್ದಾರಿ ಹೆಚ್ಚು ಇದೆ ಎಂದು ಹೇಳಿದರು.
ಜೂ.22ರ ಬಳಿಕ ಗಡುವ ವಿಸ್ತರಣೆ ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ. ಈಗಾಗಲೇ ಬಹಳಷ್ಟು ಅವಕಾಶ ನೀಡಲಾಗಿದೆ. ಈಗ ಏನಿದ್ದರೂ ಸಮೀಕ್ಷೆ ಅವಧಿ ಮುಗಿಯುತ್ತಿದ್ದಂತೆ ಏಳೆಂಟು ದಿನಗಳಲ್ಲಿ ಪರಿಶಿಷ್ಟರಲ್ಲಿ ಯಾವ್ಯಾವ ಸಮುದಾಯ ಭೂಮಿ, ಮನೆ, ಸರ್ಕಾರಿ ನೌಕರಿ, ಶಿಕ್ಷಣ, ಆರ್ಥಿಕ ಪರಿಸ್ಥಿತಿಯ ದತ್ತಾಂಶ ಒಳಗೊಂಡ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಜೊತೆಗೆ ಅತ್ಯಂತ ಹಿಂದುಳಿದ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಖು ಎಂದರು.
ಸದಾಶಿವ, ಮಾಧುಸ್ವಾಮಿ ಈ ಎರಡು ವರದಿಯಲ್ಲಿ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ನೀಡಲಾಗಿತ್ತು. ನಾಗಮೋಹನ್ ದಾಸ್ ಆಯೋಗವೂ ದತ್ತಾಂಶದ ಆಧಾರಡಿ ಇನ್ನಷ್ಟು ಹೆಚ್ಚು ಮೀಸಲಾತಿ ನೀಡುವ ವಿಶ್ವಾಸ ಇದೆ ಎಂದು ಹೇಳಿದರು.
ಹೂಡಿ ಪ್ರದೇಶದಲ್ಲಿ ಭಾರತೀಯ ಸೇವಾ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಆಂಜನೇಯ ಅವರನ್ನು ಸಮಿತಿ ಕಾರ್ಯಕರ್ತರು, ಸಮುದಾಯದ ಮುಖಂಡರು ಹೂಮಳೆಗೈದು ಸನ್ಮಾನಿಸಿ ಅಭಿಮಾನ ಪ್ರದರ್ಶಿಸಿದರು. ಮಾದಿಗ ಸಮುದಾಯ ಹಿಂದುಳಿದಿದ್ದು, ಜಾತಿಗಣತಿ ಸಮೀಕ್ಷೆ ಕಾರ್ಯ ಆರಂಭಕ್ಕೂ ಮುನ್ನವೇ ಮಾದಿಗರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆಯನ್ನು ಆಂಜನೇಯ ಅವರು ನೀಡಿದ್ದಾರೆ. ಹಗಲು-ರಾತ್ರಿ ರಾಜ್ಯಾದ್ಯಂತ ಏಕಾಂಗಿಯಾಗಿ ಸುತ್ತಾಟ ನಡೆಸಿ ಮಾದಿಗರದಲ್ಲಿ ಸ್ವಾಭಿಮಾನ ಕಿಚ್ಚು ಹಚ್ಚುವ ಜೊತೆಗೆ ಸರ್ಕಾರದ ಮೇಲೆ ಒತ್ತಡ ತರುತ್ತಲೇ, ನಾಗಮೋಹನ್ ದಾಸ್ ಆಯೋಗದೊಂದಿಗೆ ಸಂಘಟನೆಗಳು ಹೆಜ್ಜೆ ಹಾಕಿ, ಶೀಘ್ರ ಒಳಮೀಸಲಾತಿ ಜಾರಿಗಾಗಿ ಶ್ರಮಿಸುತ್ತಿರುವುದು ಮಾದರಿ ಆಗಿದೆ ಎಂದರು.
ಆಂಜನೇಯ ಅವರಲ್ಲಿ ಸಮುದಾಯದ ಕುರಿತ ಕಕ್ಕುಲತೆ ಕಂಡು ಬೇರೆ ಸಮುದಾಯವರು ಕೂಡ ಜಾಗೃತರಾಗಿದ್ದಾರೆ. ಇಂತಹ ನಾಯಕ ಸಿಕ್ಕ ಮಾದಿಗ ಸಮುದಾಯದವರು ಪುಣ್ಯವಂತರು. ನಮ್ಮ ಜಾತಿಗೂ ಇಂತಹ ರಾಜಕಾರಣಿ ಇರಬೇಕಾಗಿತ್ತು ಎಂದು ಹೇಳುತ್ತಿದ್ದಾರೆ. ಅಷ್ಟರಮಟ್ಟಿಗೆ ಆಂಜನೇಯ ಅವರು ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಅಭಿಮಾನ ವ್ಯಕ್ತಪಡಿಸಿದರು.
ರಾಮಚಂದ್ರ ಚಿನ್ನಿ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿ.ವಿಕ್ರಮ್, ಕೃಷ್ಣಮೂರ್ತಿ, ನಾಗರಾಜ್, ಮಂಜುನಾಥ್, ಬಸವರಾಜ್, ಸತೀಶ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಮುಖಂಡ ಕೇಶವಮೂರ್ತಿ, ಮಾದಿಗ ದಂಡೋರ ಸಮಿತಿಯ ಮುಖಂಡ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.