ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಪರಾಧಿಯಾದ ಶಾಸಕ ಗಾಲಿ ಜನಾರ್ಧನ ರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಹೈದರಾಬಾದ್:
ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿ ಆದೇಶಿಸಿದೆ. ಅಕ್ರಮ ಗಣಿಗಾರಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.

ಹೈದರಾಬಾದ್ ಸಿಬಿಐ ನ್ಯಾಯಾಲಯವು ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಸಿಬಿಐ ನ್ಯಾಯಾಲಯವು ಮಹತ್ವದ ತೀರ್ಪು ನೀಡುವ ಮೂಲಕ ಗಾಲಿ ಜನಾರ್ಧನ ರೆಡ್ಡಿ ಅಪರಾಧಿ ಎಂದು ಸಾಬೀತು ಆಗಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿ, 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಮಹತ್ವದ ತೀರ್ಪು ನೀಡಲಾಗಿದೆ.
ಓಬಳಾಪುರಂ ಅಕ್ರಮ ಗಣಿಗಾರಿಕೆ  ಮತ್ತು ಗಡಿ ಒತ್ತುವರಿ ಪ್ರಕರಣದಲ್ಲಿ ಶಾಸಕ ಜನಾರ್ಧನ ರೆಡ್ಡಿಗೆ
7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಹೈದರಾಬಾದ್ ನ ನಾಮಪಲ್ಲಿಯಲ್ಲಿರೋ ಸಿಬಿಐ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದ್ದು  ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಸಹಿತ 5 ಮಂದಿ ಜೈಲು ಶಿಕ್ಷೆ ಅನುಭವಿಸಲಿದ್ದಾರೆ. ಈಗಾಗಲೇ ಜನಾರ್ಧನ ರೆಡ್ಡಿ ಮೂರುವರೆ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ.
ಇದೇ ಅಕ್ರಮ ಗಣಿಗಾರಿಕೆ ಪ್ರಕರಣಲ್ಲಿ ಆರೋಪಿಗಳಾಗಿದ್ದ ಆಂಧ್ರಪ್ರದೇಶದ ಮಾಜಿ ಸಚಿವೆ ಸಬಿತಾ ಇಂದ್ರ ರೆಡ್ಡಿ ಮತ್ತು ಕೃಷ್ಣಾನಂದಗೆ ರಿಲೀಪ್‌ಸಿಕ್ಕಿದೆ. ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ಧನ ರೆಡ್ಡಿ ಸೋಮವಾರವೇ ಹೈದರಾಬಾದ್ ಗೆ ತೆರಳಿದ್ದರು. ಇಂದು ವಿಚಾರಣೆ ನಡೆಸಿದ ಸಿಬಿಐ ಕೋರ್ಟ್    ಜನಾರ್ದನ ರೆಡ್ಡಿ ದೋಷಿ ಎಂದು ತೀರ್ಪು ಪ್ರಕಟಿಸಿ
, ಶಿಕ್ಷೆಯ ಪ್ರಮಾಣವನ್ನು ಕೂಡ ಘೋಷಿಸಿದೆ. ಪ್ರಕರಣದಲ್ಲಿ  A1 ಓಎಂಸಿ ಎಂಡಿ ಶ್ರೀನಿವಾಸ ರೆಡ್ಡಿ, A2 ಜನಾರ್ದನ ರೆಡ್ಡಿ, A3 ರಾಜಗೋಪಾಲ್ ರೆಡ್ಡಿ, A4 ಅಲಿಖಾನ್ ಅಪರಾಧಿಗಳಾಗಿದ್ದಾರೆ.

ರದ್ದಾಗುತ್ತಾ ಶಾಸಕ ಸ್ಥಾನ?
ಹೈದರಾಬಾದ್‌ಸಿಬಿಐ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮತ್ತು ಜಾಮೀನು ಕೋರಿ ಜನಾರ್ಧನ ರೆಡ್ಡಿ ಹೈಕೋರ್ಟ್ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ನಿಂದ ರೆಡ್ಡಿ ಪರವಾಗಿ ತೀರ್ಪು ಬಂದರೆ ಯಾವುದೇ ಸಮಸ್ಯೆ ಇಲ್ಲ.  ಶಾಸಕ ಸ್ಥಾನ ಉಳಿಯಲಿದೆ. ಒಂದು ವೇಳೆ ರೆಡ್ಡಿ ವಿರುದ್ಧವಾಗಿ ತೀರ್ಪು ಬಂದರೆ ಶಾಸಕ ಸ್ಥಾನವೂ ರದ್ದಾಗಲಿದೆ. ಜೈಲಿಗೂ ಹೋಗಬೇಕಾಗುತ್ತದೆ.

ಗಡಿ ಗುರುತು ನಾಶ ಮತ್ತು ಅರಣ್ಯ ಕಾಯಿದೆ ಉಲ್ಲಂಘನೆಯ ಆರೋಪದ ಮೇಲೆ ಸೆಕ್ಷನ್ 120 ಮತ್ತು 120ಬಿ ಅನ್ವಯ ಗಾಲಿ ಜನಾರ್ಧನ ರೆಡ್ಡಿ ಹಾಗೂ ಶ್ರೀನಿವಾಸ್ ರೆಡ್ಡಿ ಬಂಧನವಾಗಿತ್ತು. ಐಪಿಸಿ ಸೆಕ್ಷನ್ 120ಬಿ, 379, 411, 420, 422 ಮತ್ತು 447ರ ಅಡಿಯಲ್ಲಿ ಹಾಗೂ ಗಣಿಗಾರಿಕೆ ಮತ್ತು ಅರಣ್ಯ, ಖನೀಜ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಇವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಜನಾರ್ಧನರೆಡ್ಡಿ ಅವರ ವ್ಯವಸ್ಥಾಪಕ ನಿರ್ದೇಶಕತ್ವ, ಪಾಲುದಾರತ್ವ ಮತ್ತು ಗಣಿ ಕಂಪನಿಯಲ್ಲದೆ ಗಣಿ ಗುತ್ತಿಗೆ, ಗಡಿ ರೇಖೆ ತಿದ್ದಿರುವುದು, ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಓಬಳಾಪುರಂ ಮೈನಿಂಗ್ ಕಾರ್ಪೊರೇಷನ್, ಅನಂತಪುರಂ ಮೈನಿಂಗ್ ಕಾರ್ಪೊರೇಷನ್, ಓಬಳಾಪುರಂ ಮೈನಿಂಗ್ ಕಂಪನಿ, ಅಂತರ ಗಂಗಮ್ಮ ಮೈನಿಂಗ್ ಕಂಪನಿ, ವೈ. ಮಹಾಬಲೇಶ್ವರಪ್ಪ ಅಂಡ್ ಸನ್ಸ್ ಹಾಗೂ ಬಳ್ಳಾರಿ ಐರನ್ ಓರ್ಸ್ ಪ್ರೈವೇಟ್ ಲಿಮಿಟೆಡ್‌ಸಂಸ್ಥೆಗಳು ಸುದ್ದಿಯಲ್ಲಿದ್ದವು.

ಟಪಾಲ್ ಗಣೇಶ್ ಹೋರಾಟ:
2010ರಲ್ಲಿ ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಾ ಕೆ ಜಿ ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ದೀಪಕ್ ವರ್ಮಾ ನೇತೃತ್ವದ ವಿಭಾಗೀಯ ಪೀಠ ಓಬಳಾಪುರಂ ಮೈನಿಂಗ್ ಕಂಪನಿಯ ಗಣಿಗಾರಿಕೆಗೆ ಸಂಬಂಧಿಸಿದಂತೆ ಭಾರತೀಯ ಸರ್ವೆ ಇಲಾಖೆ ನೇತೃತ್ವದ ಸಮಿತಿ ರಚಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ವರದಿಯನ್ನೂ ಸಲ್ಲಿಸಲಾಗಿತ್ತು. ಆದರೆ 2022ರಲ್ಲಿ ಸರ್ವೇ ಆಫ್‌ಇಂಡಿಯಾದವರು ನಡೆಸಿರುವ ಗಡಿ ಗುರುತು ಕಾರ್ಯ ಸರಿಯಾಗಿಲ್ಲ ಎಂದು ಗಣಿ ಉದ್ಯಮಿ ಟಪಾಲ್‌ಗಣೇಶ್‌ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು.

ಸರ್ವೇ ಆಫ್ ಇಂಡಿಯಾ ಅಧಿಕಾರಿಗಳು ಪೂರಕ ದಾಖಲೆ ಇಲ್ಲದೇ, ಆಂಧ್ರ- ಕರ್ನಾಟಕ ಗಡಿ ರೇಖೆ ತಪ್ಪಾಗಿ ಗುರುತಿಸಿದ್ದಾರೆ ಎನ್ನುವುದು ಟಪಾಲ್ ಗಣೇಶ್ ಆರೋಪವಾಗಿದೆ. ಕಾಂಟೂರ್‌ಮೆಥಡಾಲಜಿಯನ್ನು ಅನುಸರಿಸದೇ ಕಾಲ್ಪನಿಕ‌ನಕ್ಷೆ ಇಟ್ಟುಕೊಂಡು ಸರ್ವೆ ಮಾಡಿದ್ದಾರೆ. ಜನಾರ್ಧನ ರೆಡ್ಡಿ ಸಂರಕ್ಷಣೆ ಮಾಡೋ ರೀತಿಯಲ್ಲಿ ಸರ್ವೇ ಮಾಡುತ್ತಿದ್ದಾರೆಂದು ಟಪಾಲ್ ಗಣೇಶ್ ಆರೋಪಿಸಿ ಪ್ರಧಾನಿ ಕಚೇರಿಗೆ ಪತ್ರ ಕೂಡ ಬರೆದ್ದಿದ್ದರು. ಈ ಹಿನ್ನೆಲೆಯಲ್ಲಿ  ಪ್ರಧಾನ ಮಂತ್ರಿ ಕಚೇರಿ ಪರಿಶೀಲಿಸಿ ಕ್ರಮ ವಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದನ್ನ ಸ್ಮರಿಸಬಹುದಾಗಿದೆ.

 

Share This Article
error: Content is protected !!
";