ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹಲಕ್ಷ್ಮಿ ಹಣ ಮನೆ ಯಜಮಾನಿಯರ ಸ್ವಾವಲಂಬಿ ಜೀವನಕ್ಕೆ ವರದಾನವಾಗಿದೆ. ವಿವಿಧ ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುವ ಮಹಿಳೆಯರ ಬದುಕಿಗೆ ಆಸರೆಯಾಗಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವುದರ ಜೊತೆಗೆ ತಮ್ಮ ಮನೆ ಮಂದಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಪರೋಪಕಾರಕ್ಕೂ ಹಣವನ್ನು ವೆಚ್ಚ ಮಾಡಿರುತ್ತಾರೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪುರಸಭೆ ವ್ಯಾಪ್ತಿಯ ಶ್ರೀಮತಿ ಭಾಗ್ಯಶ್ರೀರವರು ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಮಕ್ಕಳ ಲಾಲನೆ ಪಾಲನೆ ಮಾಡಿಕೊಂಡು ಮನೆಯಲ್ಲಿಯೇ ಇದ್ದರು. ಗೃಹಲಕ್ಷ್ಮಿ ಯೋಜನೆಯ 15 ತಿಂಗಳ ಒಟ್ಟು ರೂ.30,000ಗಳ ಧನಸಹಾಯದ ಮೂಲಕ ಟೈಲರಿಂಗ್ ತರಬೇತಿಯನ್ನು ಪಡೆದುಕೊಂಡು ಟೈಲರಿಂಗ್ ಮಿಷನ್ ಖರೀದಿಸಿ ಸ್ವಂತ ಉದ್ಯೋಗ ಪ್ರಾರಂಭಿಸಿರುತ್ತಾರೆ. ಆ ಮೂಲಕ ಸ್ವಂತ ಉದ್ಯೋಗ ಮಾಡಿ ಆರ್ಥಿಕವಾಗಿ ಬಲವರ್ಧನೆಯಾಗಲು ಗೃಹಲಕ್ಷ್ಮಿ ಯೋಜನೆಯು ಸಹಕಾರಿಯಾಗಿರುತ್ತದೆ.
ಗೃಹಲಕ್ಷ್ಮಿ ಹಣದಿಂದ ಹೊಲಿಗೆ ಯಂತ್ರ ಖರೀದಿಸಿ ಮೊಮ್ಮಗಳ ಬದುಕು ರೂಪಿಸಿದ ಮಹಿಳೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಶ್ರೀಮತಿ ಗಂಗವ್ವ ಬಿರಾದಾರ ಎನ್ನುವ ಮಹಿಳೆಯು ಗೃಹಲಕ್ಷ್ಮಿ ಯೋಜನೆಯ ಧನಸಹಾಯದಲ್ಲಿ 24 ಸಾವಿರ ರೂಪಾಯಿ ಹಣವನ್ನು ಕೂಡಿಟ್ಟು, ಅದರಲ್ಲಿ 8 ಸಾವಿರ ರೂಪಾಯಿಗಳಲ್ಲಿ ಮೊಮ್ಮಕ್ಕಳಿಗಾಗಿ ಹೊಲಿಗೆ ಯಂತ್ರ ಖರೀದಿಸಿದ್ದಾರೆ. ಆ ಮೂಲಕ ತನ್ನ ಮೊಮ್ಮಕ್ಕಳಿಗೆ, ನೆರೆಹೊರೆಯವರಿಗೆ ಹೊಲಿಗೆ ತರಬೇತಿ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಿರುತ್ತಾರೆ. ಅಲ್ಲದೇ, 12 ಸಾವಿರ ರೂಪಾಯಿ ಹಣವನ್ನು ತನ್ನ ಮೊಮ್ಮಗನ ವಿದ್ಯಾಭ್ಯಾಸದ ಶುಲ್ಕ ಭರಿಸಲು ಹಾಗೂ ಉಳಿದ 4 ಸಾವಿರ ರೂಪಾಯಿಯನ್ನು ಕುಟುಂಬದ ನಿರ್ವಹಣೆಗೆ ಬಳಕೆ ಮಾಡಿಕೊಂಡಿರತ್ತಾರೆ.
ಕೃಷಿಗೆ ಗೃಹಲಕ್ಷ್ಮೀ ಬಲ: ಹಾವೇರಿಯಲ್ಲಿ ರೋಟಾವೇಟರ್ ಖರೀದಿಸಿದ ಅತ್ತೆ-ಸೊಸೆ
ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕು ಮಂಟಗಣಿ ಗ್ರಾಮದ ಶಾರದಾ ಮತ್ತು ಲಕ್ಷ್ಮಿ(ಅತ್ತೆ-ಸೊಸೆ) ಇವರು ಗೃಹಲಕ್ಷ್ಮಿ ಯೋಜನೆಯಡಿ ತಮಗೆ ಬಂದ 14 ತಿಂಗಳುಗಳ 28 ಸಾವಿರ ರೂಪಾಯಿಗಳನ್ನು ಕೂಡಿಸಿ ಒಟ್ಟು 48 ಸಾವಿರ ರೂ.ಗಳನ್ನು ತಮ್ಮ ಪುತ್ರ ಅಜೀತ್‍ಗೆ ನೀಡಿದ್ದಾರೆ. ಅಲ್ಲದೆ ಉಳಿದ ಹಣವನ್ನ ಸ್ವಸಹಾಯ ಸಂಘದಿಂದ ಸಾಲ ಪಡೆದು ರೋಟವೇಟರ್ ಕೊಡಿಸಿದ್ದಾರೆ. ಆ ಮೂಲಕ ಅಜೀತ್ ತಮ್ಮ ಜಮೀನಿನಲ್ಲಿ ರೋಟವೇಟರ್ ಉಪಯೋಗಿಸುವುದಲ್ಲದೆ, ಕೆಲಸವಿಲ್ಲದ ದಿನಗಳಲ್ಲಿ ಗ್ರಾಮದ ಬೇರೆ ರೈತರ ಜಮೀನಿಗೆ ಬಾಡಿಗೆಗೂ ಹೋಗುವುದಾಗಿ ತಿಳಿಸಿರುತ್ತಾರೆ.
ಗೃಹಲಕ್ಷ್ಮಿ ಹಣದಿಂದ ಜೀವನ ಕಂಡುಕೊಂಡ ವೃದ್ಧೆ: ಹಣ ಕೂಡಿಟ್ಟು ತರಕಾರಿ ವ್ಯಾಪಾರ ಆರಂಭಿಸಿದ ಸ್ವಾವಲಂಬಿ
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಹೆಬ್ಬಾಳ ಎಂಬ ಗ್ರಾಮದ ಶ್ರೀಮತಿ ಮಕ್ಕುಂಬಿ ನಬೀಸಾಬ್ ಎಂಬ ಮಹಿಳೆಯು ಗೃಹಲಕ್ಷ್ಮಿ ಯೋಜನೆಯಲ್ಲಿ ಬರುವ ಧನಸಹಾಯವನ್ನು ಕೂಡಿಟ್ಟು ರೂ.10,000/-ಗಳ ವೆಚ್ಚದಲ್ಲಿ ತರಕಾರಿ ತಳ್ಳುಗಾಡಿ ಖರೀದಿಸಿ ತರಕಾರಿ ವ್ಯಾಪಾರ ಆರಂಭಿಸಿ ಸ್ವಾವಲಂಬಿಯಾಗಿದ್ದಾರೆ.
ಗೃಹಲಕ್ಷ್ಮೀ ಹಣದಿಂದ ಫ್ರಿಡ್ಜ್ ಖರೀದಿಸಿದ ಮಹಿಳೆ
ಹಾವೇರಿ ಜಿಲ್ಲೆಯ ಶಿಂಗ್ಗಾವಿ ಪಟ್ಟಣದ ನಿವಾಸಿ ಲತಾ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಯುಗಾದಿ ಹಬ್ಬದ ಪ್ರಯುಕ್ತ ಹೊಸ ಫ್ರಿಡ್ಜ್ ಖರೀದಿಸಿ ಅದಕ್ಕೆ ಗೃಹಲಕ್ಷ್ಮೀ ಫಲಾನುಭವಿ ಎಂದು ಲಿಖಿತ ಫಲಕ ಹಾಕಿರುತ್ತಾರೆ.
ನೂತನ ರಥ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣ ದೇಣಿಗೆ ನೀಡಿದ ಮಹಿಳಾ ಮಣಿಗಳು
ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸೋಮನಕಟ್ಟಿ ಗ್ರಾಮದ ಮಹಿಳೆಯರು ತಾವು ಪಡೆದ ಗೃಹಲಕ್ಷ್ಮಿ ಯೋಜನೆಯ ಧನಸಹಾಯದ ಮೊತ್ತವನ್ನು ಸೋಮನಕಟ್ಟಿ ಶರಣಬಸವೇಶ್ವರನ ನೂತನ ರಥ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ. ಈ ಮೂಲಕ ಪಕ್ಷ, ಜಾತಿ ಮರೆತು ಒಗ್ಗಟ್ಟನ್ನು ಎತ್ತಿಹಿಡಿದಿದ್ದಾರೆ.
ಗೃಹಲಕ್ಷ್ಮಿ ಹಣದಿಂದ ಗಂಡನಿಗೆ ಸ್ಕೂಟರ್ ಕೊಡಿಸಿದ ಮಹಿಳೆ
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಶ್ರೀಮತಿ ಮಿಸ್ರಿಯಾ ಎನ್ನುವ ಮಹಿಳೆಯು ಗೃಹಲಕ್ಷ್ಮಿ ಯೋಜನೆಯ ಧನಸಹಾಯವನ್ನು ಕೂಡಿಟ್ಟು, ತಮ್ಮ ಬಳಿ ಇದ್ದ ಮೊತ್ತವನ್ನು ಸೇರಿಸಿ ಪೇಂಟರ್ ಕೆಲಸ ಮಾಡುವ ತಮ್ಮ ಗಂಡ ಸಲೀಂ ಅವರಿಗೆ ಹೋಂಡಾ ಡಿಯೋ 125 ಎಂಬ ಸ್ಕೂಟರ್ ಖರೀದಿಸಿ ಉಡುಗೊರೆಯಾಗಿ ನೀಡಿರುತ್ತಾರೆ. ಸದರಿ ಸ್ಕೂಟರ್ ಮೇಲೆ ‘ಆರ್ಥಿಕ ನೆರವು ಗೃಹಲಕ್ಷ್ಮಿ’ ಎಂಬ ನಾಮಫಲಕ ಹಾಕಿರುತ್ತಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ತವಗ ಗ್ರಾಮದ ಶ್ರೀಮತಿ ಬಸವ್ವ ಮತ್ತು ಶ್ರೀ ಶಿವಪ್ಪ ಬುಳ್ಳಿ ಎಂ ಬಡಕುಟುಂಬವು ಗೃಹಲಕ್ಷ್ಮಿ ಯೋಜನೆಯ ಧನಸಹಾಯದಿಂದ ಕೃಷಿ ಚಟುವಟಿಕೆ ಮಾಡಲು ಎತ್ತನ್ನು ಖರೀದಿಸಿರುತ್ತಾರೆ.
ಗೃಹಲಕ್ಷ್ಮಿ ಹಣದಿಂದ ಬೈಕ್ ಖರೀದಿಗೆ ಮಗನಿಗೆ ಮುಂಗಡ ಹಣ ನೀಡಿದ ತಾಯಿ ಗೋಕಾಕ್ ತಾಲ್ಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆಯು ಪುತ್ರನಿಗೆ ಬೈಕ್ ಖರೀದಿಸಲು ಗೃಹಲಕ್ಷ್ಮಿ ಧನಸಹಾಯವನ್ನು ಕೂಡಿಟ್ಟು ಬೈಕ್ ಖರೀದಿಗೆ ಮುಂಗಡ ಹಣ ನೀಡಿರುತ್ತಾರೆ.
ಗೃಹಲಕ್ಷ್ಮಿ ಹಣದದಿಂದ ಮಹಿಳೆಯರು ಕುಟುಂಬದ ಆದಾಯಕ್ಕಾಗಿ ಕೆಲಸ ಮಾಡಲು ಮತ್ತು ಅವರ ಸಾಮಾನ್ಯ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಮಾಡಲು ಸಾಧ್ಯವಾಗುತ್ತಿದೆ. ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಪ್ರಕಟಣೆ ತಿಳಿಸಿದೆ.
ವಿಶೇಷ ಲೇಖನ-ಸ್ಮಿತ.ಆರ್, ವಾರ್ತಾ ಸಹಾಯಕರು, ಬೆಂಗಳೂರು.