ಕನ್ನಡಿಗರ ಕಿವಿಗೆ ಹೂವಿಟ್ಟು ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಬರಲಿದೆ ಪ್ರಗತಿ ತರಲಿದೆ” ಎಂದು ಕನ್ನಡಿಗರ ಕಿವಿಗೆ ಹೂವಿಟ್ಟು ಅಧಿಕಾರಕ್ಕೆ ಬಂದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪ್ರಗತಿಶೀಲ ರಾಜ್ಯವಾದ ಕರ್ನಾಟಕದ ಆರ್ಥಿಕ ಪ್ರಗತಿಯನ್ನು ಅಧೋಗತಿಗೆ ತಳ್ಳಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

2024-25ರ ಆರ್ಥಿಕ ವರ್ಷದ ಇಲಾಖಾವಾರು ಆರ್ಥಿಕ ಪ್ರಗತಿಯ ಸ್ಥಿತಿಗತಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇನ್ನೂ ಕಳಪೆಯಾಗಿದ್ದು ಜನವರಿವರೆಗೂ ಕೇವಲ 62% ರಷ್ಟು ಮಾತ್ರ ಪ್ರಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಅಭಿವೃದ್ಧಿಯಲ್ಲಿ ಜನ ನಿಮ್ಮಿಂದ ಅಷ್ಟೇನೂ ನಿರೀಕ್ಷೆ ಇಟ್ಟುಕೊಂಡಿರಲ್ಲಿ. ಆದರೆ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಹಿಂದ ಸಮುದಾಯಗಳ ಮತಗಳ ಮೇಲೆ ಸವಾರಿ ಮಾಡಿ ರಾಜಕೀಯ ಬದುಕು ಕಟ್ಟಿಕೊಂಡು ಸತತವಾಗಿ ಅಧಿಕಾರ ಅನುಭವಿಸುತ್ತ ಬಂದಿರುವ ತಾವು ಕನಿಷ್ಠ ಪಕ್ಷ ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ಒದಗಿಸುತ್ತೀರಿ ಎನ್ನುವ ನಿರೀಕ್ಷೆ ಇತ್ತು.

ಆದರೆ ಈ ಆರ್ಥಿಕ ವರ್ಷದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೇವಲ 53% ಆರ್ಥಿಕ ಪ್ರಗತಿ ಆಗಿದ್ದರೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಲ್ಲಿ ಕೇವಲ 39% ಪ್ರಗತಿ ಆಗಿದೆ. ಇದೇನಾ ನಿಮ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆ? ಇದೇನಾ ನಿಮ್ಮ ಸಮಾಜವಾದ? ಎಂದು ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ಸಚಿವ ಹೆಚ್.ಸಿಮಹಾದೇವಪ್ಪ ನವರೇ, ಇದೇನಾ ಬುದ್ಧ, ಬಸವ, ಅಂಬೇಡ್ಕರರ ಆಶಯ ಈಡೇರಿಸುವ ಪರಿ? ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಪಕ್ಷದ ಡೋಂಗಿ ಸಾಮಾಜಿಕ ನ್ಯಾಯಕ್ಕೆ. ಬಹುಶಃ ಬಾಬಾಸಾಹೇಬ್ ಅಂಬೇಡ್ಕರರು ಇವತ್ತು ಬದುಕಿದ್ದಿದ್ದರೆ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರೆಂಟಿ ಛೀಮಾರಿ ಹಾಕುತ್ತಿದ್ದರು ಎಂದು ಅಶೋಕ್ ತಿಳಿಸಿದ್ದಾರೆ.

 

 

Share This Article
error: Content is protected !!
";