ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-60
ಅಖಂಡ ಜೀವ ಕಣಗಳ ತಲ್ಲಣಗಳು, ಜೀವಿಸುತ್ತಲೇ ಚಿಂತನೆಗೆ ಹಚ್ಚಿ, ಹುಡುಕಿಸಿಕೊಳ್ಳುತ್ತಾ ಕೆರಳಿಸುತ್ತಲೇ, ಮತ್ತೆಲ್ಲಿಗೋ ಕರೆದೊಯ್ದು, ಮುದಗೊಳಿಸುತ್ತವೆ. ಆ ಗೆಳೆಯನದೊಂದು,ಅಂತಹ ಕುಂಚ ಕಲೆಯ ವಿಶ್ವಕೋಶವೇ ಸರಿ.
ನಾಗಾಲೋಟದ ಕುದುರೆಯೊಂದಿಗೆ, ಸೂರ್ಯನನ್ನು ನೋಡಲು ಬಿಟ್ಟು, ಬದುಕ ಸಂತೆಯ ಬಯಲೊಳಗೆ, ತೆರೆದುಕೊಳ್ಳುತ್ತಲೇ ಅಗೆದು, ಬಗೆದು, ಆಳಕ್ಕಿಳಿದು ನೋಡುವ, ಎತ್ತರಕ್ಕೇರುವ ಕುಂಚ ಮಿಡಿತಗಳು ಆತನವು.
ಸ್ಥಾವರಗಳಲ್ಲದ, ಕ್ರಿಯಾಶೀಲತೆಗೇ ಒತ್ತುಕೊಟ್ಟ, ಜಂಗಮತೆಯ ಅನಂತ ಚಿತ್ರಗಳಲ್ಲೀ, ನೀವೇನಾದರೂ ಇಳಿದಿರಾದರೆ, ನಿಮ್ಮೊಳಗಿನ ವಿಸ್ತಾರವಲ್ಲದ ಹಿಡಿತಗಳು, ನಿಮ್ಮನ್ನೇ ಕೆಣಕಿ ಬಿಡುತ್ತವೆ.
ಬಯಲ ಆಗಸದಂತೇ,ದಡ ಕಾಣದ ಸಾಗರದಂತೇ,ಹೋದಂತೆಲ್ಲಾ ತೆರನಾದ, ನವಿರಾದ, ರಕ್ಕಸ ದೃಷ್ಟಿಯ ಬಣ್ಣಗಳುಟ್ಟಿ,ನಲುಮೆಯ ನವಿಲಿನ ಚಿತ್ತಾರವಾಗಿ ಮಾತನಾಡಿಸಿಬಿಡುತ್ತವೆ.
ಆತನಿಗೇ ನಿಲುಕದ ಆ ಜಗತ್ತು, ಅನಂತಮಯವೇ!ನಮಗೆ ದಕ್ಕಿದೆಷ್ಟೋ, ಆವರಿಸಿಕೊಳ್ಳಬೇಕಷ್ಟೇ. ಸಾಮಾನ್ಯರೊಳಗೆ ದಕ್ಕಿಸಿಕೊಳ್ಳವುದಂತೂ ಕಷ್ಟವೇ ಸರಿ. ಅಂತರ್ಗತವಾಗಿ ಧ್ಯಾನಿಸಿ ಕುಂಚ ಕದಲಿಸುವುದು,ಅಷ್ಟು ಸುಲಭವಲ್ಲ.ಅದು ಅವರಿಗೆ ಸಿದ್ದಿಸಿದೆ ಎಂದು ಮಾತ್ರ ಹೇಳಬಲ್ಲೆ.
ಏಕಲವ್ಯನಂತೆ, ಆಚಾರ್ಯರನ್ನ ತಪಸ್ಸಲ್ಲಿಯೇ ಕಂಡು, ಕಲಿಕೆಯನ್ನು ಕರಗತ ಮಾಡಿಕೊಂಡ, ಈ ಮಣ್ಣ ಸೊಗಡಿನ ಚಿತ್ರಕಾರ ವೀರೇಶ್, ಅಭ್ಯಾಸದ ದಿನಗಳಲ್ಲಿ ಗುರುದರ್ಶನವಿಲ್ಲದೆ,ಅಂಚೆ ಪತ್ರಗಳ ಮೂಲಕ ಚಿತ್ರಗಳನ್ನು ರಚಿಸಿ,ದೂರದ ಗುರುವಿಗೆ, ಹೇಳುತ್ತಲೇ ಕೇಳುತ್ತಲೇ,ತನ್ನನ್ನು ತಾನೇ ತಿದ್ದಿ,ತೀಡಿ,ಕಟೆದು ರೂಪಕ್ಕಿಳಿಸಿದ ಒಬ್ಬ ಸಾಮಾನ್ಯ.
ಹಾಳೆಗಳೊಂದಿಗಿನ ವಿದ್ಯಾಭ್ಯಾಸವಾಗಿದ್ದರೂ, ಮನಸ್ಸುಗಳೊಂದಿಗಿನ ಕಲಿಕೆಗೆ ತಕಿಸುವ ಗೆಳೆಯ. ಬಾಳ ಬಂಡಿಯ ನೊಗಕ್ಕೆ ಇನ್ನೂ ಜೊತೆಯಾಗದ ದಿನಗಳವು.ನನ್ನದು ಕೃಷಿ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸವಾದರೆ,ಆಗಿನ್ನೂ ಕ್ರಿಯೇಟಿವ್ ಸ್ಟುಡಿಯೋ ಪ್ರಾರಂಭ ಮಾಡಿದ ವೀರೇಶ್, ಬದುಕಿನ ಆಸರೆಗೆ ಒಬ್ಬ ಫೋಟೋಗ್ರಾಫರ್ ಬಾಬು ರಾಜೇಂದ್ರ, ಶಾಲಿಮಾರ್ ಟೈಲರ್, ವಯಸ್ಸಲ್ಲೂ ಅನುಭವದಲ್ಲೂ ನಮ್ಮಿಬ್ಬರಿಗಿಂತಲೂ ಹಿರಿಯ, ನಾವೆಲ್ಲರೂ ಸೇರಿ ಆತ್ಮೀಯ ಕೊಂಡಿಗಳೇ. ತಿಳುವಳಿಕೆಯ ವಿಚಾರದಲ್ಲಿ ನಮಗೆಲ್ಲಾ ಜ್ಞಾನಾಶ್ರಯ, ದ್ರೋಣಾಚಾರ್ಯ ತಿಪ್ಪೇರುದ್ರಪ್ಪನವರೇ.
ಆ ದಿನಗಳಲ್ಲಿ ನಾಡಿನ ಎಲ್ಲಿಗಾದರೂ ಸರಿ, ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಯಾವ ಪ್ರಾಕಾರಗಳ ಸಮ್ಮೇಳನಗಳಿರಲಿ, ಗುರುಗಳು ಹೋಗೋಣ ಅಂದ್ರೆ,ನಾನು ಮತ್ತು ವೀರೇಶ್, ಒಮ್ಮೊಮ್ಮೆ ಶಾಲಿಮಾರ್ ಬಾಬು ಕೂಡಿ ಬೆಳಿಗ್ಗೆ ತಯಾರಿನೇ. ಲಕ್ಷ್ಮಿ ಬಜಾರ್ ನ ನೆಲಮಾಳಿಗೆಯೊಂದರಲ್ಲಿ, ಪ್ರಾರಂಭವಾದ ಫೋಟೋ ಸ್ಟುಡಿಯೋ, ನಾವೆಲ್ಲಾ ಬರುವ, ಸೇರುವ, ಮಾತನಾಡುವ, ಹರಟೆಯ ಪಾಠಶಾಲೆಯೂ ಆಗಿತ್ತು, ನಮ್ಮೆಲ್ಲರ ಸಂಗಮದ ಸ್ಥಳವೂ ಹೌದು.
ಆ ದಿನಗಳಲ್ಲೇ ವೀರೇಶ್ ಚಿತ್ರಗಳು, ನುರಿತ ಚಿತ್ರಕಾರರನ್ನೂ ಸಹ ನಿಲ್ಲಿಸಿ, ದಿಟ್ಟಿಸಿಯೇ ಮಾತನಾಡಿಸುತ್ತಿದ್ದವು. ನಾನಂತೂ ಆತನ ಚಿತ್ರಗಳ ಬಗ್ಗೆ ಮಾತಾಡಬೇಕೆಂದಾಗಲೆಲ್ಲ ಮೌನಕ್ಕೆ ಜಾರುತಿದ್ದೆ, ನಾನು ಒಂದು ದಿಕ್ಕಲ್ಲಿ ಚಲಿಸಿದರೆ, ಆತನ ಚಿತ್ರಗಳು ಹತ್ತಾರು ದಿಕ್ಕುಗಳಲ್ಲಿ ಚಲಿಸುತ್ತಿದ್ದವು, ಆಳ ಆಗಲದ ಸನಿಹಕ್ಕೂ ಹೋಗಲಾಗದವ ನಾನು,ಇದರ ಬಗ್ಗೆ ಅಕ್ಷರಗಳನ್ನು ಕೊಡಿ ಅಂದಾಗ, ನನಗನ್ನಿಸಿದ್ದನ್ನ ಬರೆದು ತಿಳಿಸಿದ್ದೇನೆ, ನೋಡಿ ನಕ್ಕು ಸುಮ್ಮನಾಗುತ್ತಿದ್ದ ಆತ, ಮುಂದೆ ಮಾತನಾಡುತ್ತಿರಲಿಲ್ಲ,ನಿಮ್ಮ ಕಲ್ಪನೆಗೆ ನನ್ನ ಅಕ್ಷರಗಳು, ಮುಟ್ಟಿದ ವಾ ಸರ್, ಅಂತ ಒತ್ತಾಯಿಸಿ ಕೇಳಿದರೆ, ನನಗೂ ಸಹ ದಕ್ಕದ್ದು,ನಿಮಗೆ ದಕ್ಕಿದೆ ಅಂತಲೇ ಕೈಕುಲುಕಿಸಿ, ಮರೆಯಾಗುತ್ತಿದ್ದ ಗೆಳೆಯ.
ಸುಮಾರು ವರ್ಷಗಳ ಹಿಂದೆಯೇ,ಕನ್ನಡ ಸಾಹಿತ್ಯ ಲೋಕದ ವಿದ್ವಾಂಸರನ್ನ, ಪೆನ್ಸಿಲ್ ಗಳಲ್ಲಿ ಬರೆದು, “ಪುಸ್ತಕ ಮತ್ತು ಪೆನ್ಸಿಲ್” ಎಂಬ ಪುಸ್ತಕವನ್ನು ನಮ್ಮ ನೆಲದಲ್ಲಿಯೇ ಲೋಕಾರ್ಪಣೆ ಮಾಡಿದ್ದರು.
ಆ ಪುಸ್ತಕದ ಕೊನೆಯ ಹಾಳೆಯ, ಕೊನೆಯ ಪುಟದಲ್ಲಿ, ನನ್ನನ್ನು ಚಿತ್ರಿಸಿ, ಅಚ್ಚಾಕಿಸಿ, ರಚನೆಯ ಸಾಲ ಕೊಟ್ಟು, ನಿಮಗೆ ಬರೆಯುವ ತಾಕತ್ತಿದೆ ಬರೆಯಬೇಕು, ಬರೆದು ತೀರಿಸಬೇಕು, ಅನ್ನುವ ಜವಾಬ್ದಾರಿಯನ್ನ ಹೆಗಲಿಗಾಕಿ, ಸಾಹಿತ್ಯ ಘಮಿಸುವ,ಅಪರೂಪದ ಪುಷ್ಪಗಳ ಜೊತೆ ಒಂದು ನಾರಾಗಿ,ನನ್ನನ್ನಿಟ್ಟು ನೋಡಿ ಗೆಳೆತನಕ್ಕೆ ಸಾಕ್ಷಿಯಾದಂತಹ ಗೆಳೆಯ.
ಆತನ ಜೊತೆ ಬೆರೆತ ಸಮಯದಲ್ಲೆಲ್ಲಾ, ನಾನು ಬರೆಯುವ ಮಾತುಗಳೇ, ಬದುಕಿನ ಜಂಜಾಟಕ್ಕೆ ಬೆಸ್ತು ಬಿದ್ದು,ಮೂಲೆ ಸೇರಿದ್ದ ನನ್ನ ಬರಹಕ್ಕೆ,ಇತ್ತೀಚೆಗೆ ಮತ್ತೆ ಕೆಂಡವಾಗಿಸಿದ್ದು ಇದೇ ಗೆಳೆಯನೇ.ಅತನ ಚಿತ್ರಗಳೀಗ, ದೆಹಲಿ ಚಿತ್ರಸಂತೆಗೆ ಮುಖ ಮಾಡುತ್ತಿವೆ.
ಆತ ಹತ್ತಿರುವ ಮೆಟ್ಟಿಲುಗಳೇನು ಕಡಿಮೆಯಿಲ್ಲ, ಅಲ್ಲಮಪ್ರಭುವನ್ನು ಅಕ್ಷರ ರೂಪದಲ್ಲಿ ಓದಿಕೊಂಡ ನಾಡಿಗೆ,ಚಿತ್ರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವೇನು ಸಾಮಾನ್ಯದ ವಿಷಯವೇ,ಅದು ಸಹ ಸಾಧ್ಯವಾಗಿ,ಚಿತ್ರ ದಿಗ್ಗಜರ ಮೆಚ್ಚುಗೆಯಲ್ಲಿ,ಆ ದಿನ ಈ ಮಣ್ಣಲ್ಲಿ ಮಿಳಿತವಾಗಿ,ರಾಜ್ಯ ಪತ್ರಿಕೆಗಳಲ್ಲಿ ರಾರಾಜಿಸಿತ್ತು.
ಆತನ ಒಟ್ಟಾರೆ ಚಿತ್ರಗಳು, ಸೂಕ್ಷ್ಮವಾಗಿ ಅವಲೋಕಿಸಿದಾಗ,ಜೀವ ಜಗತ್ತಿನ ಉಗಮದ ಕಡೆ ಮುಖ ಮಾಡುತ್ತ, ವೈವಿಧ್ಯಮಯ ಬದುಕುಗಳು ಅನಾವರಣಗೊಳ್ಳುತ್ತವೆ.
ಯಾವ ಧರ್ಮ ಭಾಷೆ ಪರಿಸರವನ್ನು ಮೀರಿ ಅನಂತದ ಕಡೆ ಚಲಿಸುತ್ತವೆ. ಚಿತ್ರಗಳಲ್ಲಿ ಪೀಠ ಲಿಂಗಗಳ, ಬಗ್ಗೆಯೇ ಸಂವಾದಕ್ಕಿಳಿಯುವ ಅಧ್ಯಯನಕಾರ, ನೈತಿಕ ಮಿಥುನಗಳ ದೈವೋಪಾಸನೆಯಲ್ಲೇ, ಜಗತ್ತು ಸಾಗುವುದು, ಮಿಂದೇಳುವುದೆಂಬ, ಸೂಕ್ಷ್ಮವನ್ನ ಅರಿತಿರುವ ಅಪರೂಪದ ಚಿತ್ರಕಾರ. ಸಾಂಗತ್ಯದ ಸಂಗತ ಧ್ವನಿಗಳೊಂದಿಗೆ”ಶ್ರಮ”ದಲ್ಲಿ ಚಿತ್ರ ಮನಸ್ಸುಗಳು, ಪುಳಕಗೊಂಡು ಅನಾವರಣಿಸಿವೆ. ಒಬ್ಬ ಚಿತ್ರಕಾರ, ತನ್ನ ಕುಟೀರವನ್ನೇ ಚಿತ್ರ ಮನೆಯಾಗಿಸಿರುವುದು, ರಾಜ್ಯದ ಕೆಲವೇ ಮಂದಿಗಳಲ್ಲಿ ಇವರೊಬ್ಬರೆನ್ನಬಹುದು.
ಚಿತ್ರದುರ್ಗಕ್ಕೆ ಬಂದ ಪ್ರವಾಸಿಗರು, ಕೋಟೆ, ಜೋಗಿಮಟ್ಟಿ ಗಿರಿಧಾಮಗಳು, ಅರಣ್ಯಗಳನ್ನು ವೀಕ್ಷಿಸಿ, ನಗರದ ಜೋಗಿಮಟ್ಟಿ ರಸ್ತೆಯಲ್ಲಿನ “ಶ್ರಮ”ದಲ್ಲಿ, ಗೆಳೆಯನ ಹೃದಯ ಭಾಷೆಯ ಆರ್ಟ್ ಗ್ಯಾಲರಿಯನ್ನು ವೀಕ್ಷಿಸಬಹುದು. ಇದು ನಮ್ಮೂರ ಚಿತ್ರ ಮನೆ, ನಮ್ಮ ನಿಮ್ಮೆಲ್ಲರ ಚಿತ್ರ ಮನೆ “ಶ್ರಮ ಮನೆ” ಮುಂದುವರಿಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.