ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ದಾಳಿ ನಡೆಸಿ 26 ಮಂದಿ ಅಮಾಯಕರನ್ನು ಬಲಿತೆಗೆದುಕೊಂಡಿರುವುದನ್ನು ವಿರೋಧಿಸಿ ಮುಸ್ಲಿಂರು ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವ, ರಾಜ್ಯದ ಮುಖ್ಯಮಂತ್ರಿ ರಾಜ್ಯಪಾಲರು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸಿದ ನಂತರ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಭಯೋತ್ಪಾದಕರನ್ನು ಪತ್ತೆ ಮಾಡಿ ಹೊಡೆದುರುಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ನ್ಯಾಯವಾದಿ ಸಾಧಿಕ್‌ವುಲ್ಲಾ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಭಾರತದ ಸ್ವರ್ಗ ಎಂದೆ ಪ್ರಸಿದ್ದಿ ಪಡೆದಿರುವ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿ ೨೬ ಮಂದಿಯನ್ನು ಭೀಕರವಾಗಿ ಕೊಂದಿರುವುದು ಅತ್ಯಂತ ಹೇಯ ಕೃತ್ಯ. ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್‌ಷಾ, ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್ ಇವರುಗಳು ಭಯೋತ್ಪಾದಕರನ್ನು ಸದೆಬಡಿದು ಇನ್ನು ಮುಂದೆ ಇಂತಹ ಅಮಾನವೀಯ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕೆಂದು ವಿನಂತಿಸಿದರು.
ಜಿಲ್ಲಾ ವಕ್ಫ್ ಮಂಡಳಿ ಮಾಜಿ ಚೇರ್ಮನ್ ಇಕ್ಬಾಲ್ ಹುಸೇನ್ ಮಾತನಾಡಿ ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ ನಡೆಸಿ ೨೬ ಜನ ಅಮಾಯಕರನ್ನು ಬಲಿ ಪಡೆದಿರುವುದರಿಂದ ಇಡಿ ದೇಶವೇ ಶೋಕದಲ್ಲಿದೆ. ಪಹಲ್ಗಾಮ್‌ನಲ್ಲಿ ದುಷ್ಕೃತ್ಯ ಮೆರೆದಿರುವ ಉಗ್ರರು ಎಲ್ಲಿಯೇ ಅಡಗಿರಲಿ ಅಲ್ಲಿಗೆ ನುಗ್ಗಿ ಬಗ್ಗು ಬಡಿಯಬೇಕು. ದೇಶದ ಸಹಬಾಳ್ವೆ ಮತ್ತು ಐಕ್ಯತೆಯನ್ನು ಕದಡುವ ಭಯೋತ್ಪಾದಕರುಗಳಿಗೆ ನಮ್ಮ ದೇಶದ ಪ್ರಧಾನಿ ಮೋದಿರವರು ತಕ್ಕ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಮುತುವಲ್ಲಿ ಸಾಧಿಕ್ ಭಾಷಾ, ಕಾರ್ಯದರ್ಶಿ ಮಹಿಬೂಲ್ಲಾ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ನಗರಸಭಾ ಸದಸ್ಯ ಸರ್ದಾರ್ ಅಹ್ಮದ್ ಪಾಷಾ, ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಸೈಯದ್ ಖುದ್ದುಸ್, ಅಶ್ವಾಕ್, ಅಪಾನ್, ಮೋಹಿದ್ದೀನ್ ಚೋಟು, ದಾದಾಪೀರ್, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ,
ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಹಾಜಿ ಆರ್.ದಾದಾಪೀರ್, ಪಟೇಲ್ ದಾದಾಪೀರ್, ಮುಖ್ತಿಯಾರ್, ಸೈಯದ್ ಮೋಹಿದ್ದೀನ್, ಸೈಯದ್ ಖುದ್ದೂಸ್, ಸುಬಾನ್, ನೂರುಲ್ಲಾ, ಹುಸೇನ್‌ಪೀರ್, ಸೈಯದ್ ಅಫಾಖ್ ಅಹಮದ್, ಸೈಯದ್ ಇಸ್ಮಾಯಿಲ್ ಸೇರಿದಂತೆ ವಿವಿಧ ಮಸೀದಿಗಳ ಮುತುವಲ್ಲಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.