ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು. ದೇಶದ ಅಭಿವೃದ್ಧಿ ಸೂಚ್ಯಂಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಆರೋಗ್ಯ ಪ್ರಧಾನ ಎನಿಸುತ್ತದೆ. ಇಂತಹ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಮಾಧ್ಯಮಗಳ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಎಸ್.ಜೆ.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತು, ಜಿಲ್ಲೆಯ ಪತ್ರಿಕಾ ಹಾಗೂ ವಿದ್ಯುನ್ಮಾನ ವಾಹಿನಿಗಳ ಮಾಧ್ಯಮ ಪ್ರತಿನಿಧಿಗಳಿಗೆ, ನಗರದ ಐಶ್ವರ್ಯ ನವೀನ್ ಹೋಟೆಲ್‍ನಲ್ಲಿ ಏರ್ಪಡಿಸಲಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಶಾ, ನರ್ಸ್, ಆರೋಗ್ಯ ಕಾರ್ಯಕರ್ತರು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರ ಜೀವನಾಡಿಗಳಾಗಿವೆ. ಇವುಗಳ ಹೊರತಾಗಿಯೂ ಆರೋಗ್ಯ ಇಲಾಖೆ ವತಿಯಿಂದ ಬಹಳಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆ, ತಾಯಿ ಹಾಗೂ ಶಿಶು ಮರಣ ತಗ್ಗಿಸುವುದು, ಲಸಿಕಾಕರಣ, ಸಾಂಕ್ರಮಿಕ ಹಾಗೂ ಮಾರಕ ರೋಗಗಳ ತಡೆ ಮತ್ತು ನಿಯಂತ್ರಣ, ಶಾಲಾ ಮಕ್ಕಳ ಬೆಳವಣಿಗೆ ಹಾಗೂ ಆರೋಗ್ಯ ಬಗ್ಗೆಯೂ ನಿಗಾ ಇರಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತಜ್ಞ ವೈದ್ಯರ ತಂಡ ಅವಿರತವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಸೂಕ್ತ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಕೊರತೆಯ ನಡುವೆಯೂ ಸಾಧ್ಯವಾದಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆ ಕಾರ್ಯವೈಖರಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುವ ಸಲುವಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಜಿಲ್ಲೆಯ ಆರೋಗ್ಯ ವ್ಯವಸ್ಥೆಯ ಕುರಿತು ಮಾಧ್ಯಮಗಳು ಬಿತ್ತರ ಹಾಗೂ ಪ್ರಕಟ ಮಾಡುವ ವರದಿಗಳನ್ನು ಸಮಚಿತ್ತ ಮನೋಭಾವದಿಂದ ಸ್ವೀಕರಿಸಿ ಸುಧಾರಣೆ ಕ್ರಮ ಕೈಗೊಳ್ಳುತ್ತಿರುವುದಾಗಿ ಸಿಇಓ ಎಸ್.ಜೆ. ಸೋಮಶೇಖರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಪ್ರಸಾದ್ ಮಾತನಾಡಿ, ಜಿಲ್ಲೆಯ ಮಾಧ್ಯಮಗಳು ಆರೋಗ್ಯ ಇಲಾಖೆಯ ಬಗ್ಗೆ ಸಕಾರತ್ಮಕ ಹಾಗೂ ನಕಾರಾತ್ಮ ವರದಿಗಳನ್ನು ಪ್ರಕಟ ಮಾಡುತ್ತಿವೆ. ಆರೋಗ್ಯ ಇಲಾಖೆಯ ಕಾರ್ಯವೈಖರಿ ಮೆಚ್ಚಿ, ಸಕಾರಾತ್ಮ ವರದಿಗಳು ಪ್ರಕಟವಾದಾಗ ಹೆಚ್ಚಿನ ಕೆಲಸ ನಿರ್ವಹಿಸಲು ಸ್ಪೂರ್ತಿ ದೊರೆಯುತ್ತದೆ. ನಕಾರಾತ್ಮ ವರದಿಗಳು ಪ್ರಕಟವಾದ ಎಚ್ಚತ್ತು, ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಅವಕಾಶ ದೊರಕುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮಾಧ್ಯಮಗಳು ಇಲಾಖೆಯೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಕಾರ್ಯನಿರ್ವಹಿಸಬೇಕು. ಇಲಾಖೆ ಬಗ್ಗೆ ತಟಸ್ಥ ಮನೋಭಾವ ತಾಳಬಾರದು. ಇದರಿಂದ ಅವಲೋಕನ ಸುಧಾರಣೆ ತರಲು ಅಡ್ಡಿ ಉಂಟಾಗುತ್ತದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಮಾತನಾಡಿ, ಆರೋಗ್ಯ ಇಲಾಖೆ ಹಾಗೂ ಮಾಧ್ಯಮಗಳು ಒಂದು ಬಂಡಿಯ ಎರಡು ಚಕ್ರಗಳಿದ್ದಂತೆ, ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಕೋವಿಡ್ ಸಮಯದಲ್ಲಿ ಸಾಕಷ್ಟು ಮಾಧ್ಯಗಳು ಸಂಕಷ್ಟಕ್ಕೆ ಸಿಲುಕಿದವು. ಪತ್ರಕರ್ತರು ಸಹ ಕೋವಿಡ್‍ಗೆ ಬಲಿಯಾದ ಪ್ರಸಂಗಳು ನಡೆದಿವೆ. ಮಾಧ್ಯಮಗಳು ಯಾವುದೇ ಸಾಂಕ್ರಾಮಿಕ ರೋಗಗಳು ಸೇರಿದಂತೆ ಹಲವಾರು ಗಂಭೀರ ಖಾಯಿಲೆಗಳ ಕುರಿತು ವಸ್ತುಸ್ಥಿತಿ ತಿಳಿಸಬೇಕು. ಸಾರ್ವಜನಿಕರನ್ನು ಭಯ ಭೀತರನ್ನಾಗಿ ಮಾಡುವುದರ ಬದಲಾಗಿ, ಈ ಖಾಯಿಲೆಗಳ ಕುರಿತು ಜನಜಾಗೃತಿ ಮೂಡಿಸುವ, ಖಾಯಿಲೆಗಳು ಬಾರದಂತೆ ಹಾಗೂ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಮಾರ್ಗೋಪಾಯಗಳ ಕುರಿತ ಆರೋಗ್ಯ ಇಲಾಖೆ ಹೊರಡಿಸುವ ಪ್ರಕಟಣೆಗಳನ್ನು ವರದಿ ಮಾಡಿ, ಸಾಮಾಜಿಕ ಕಳಕಳಿ ಹಾಗೂ ಬದ್ಧತೆಯನ್ನು ಪ್ರದರ್ಶಿಸುವಂತೆ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಬಿ ಗೌಡಗೆರೆ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ಆರೋಗ್ಯದ ಬಗ್ಗೆ ಗಮನ ಸಹ ಹರಿಸುವುದಿಲ್ಲ. ಇದರಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಕಳೆದ ವರ್ಷ ರಾಜ್ಯಾದ್ಯಂತ ಬಹಳಷ್ಟು ಪತ್ರಕರ್ತರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಪತ್ರಕರ್ತರಿಗಾಗಿ ಉಚಿತ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಬೇಕು. ಇಲಾಖೆ ಐಇಸಿ ಚಟುವಟಿಕೆಗಳ ಅಡಿ ಪ್ರಮುಖ ಸಾರ್ವಜನಿಕ ನಿವೇದನೆ ಹಾಗೂ ಪ್ರಕಟಣೆಗಳನ್ನು ಜಾಹೀರಾತು ರೂಪದಲ್ಲಿ ಪತ್ರಿಕೆಗಳಿಗೆ ಬಿಡುಗಡೆ ಮಾಡಿದರೆ ಸ್ಥಳೀಯ ಪತ್ರಿಕೆಗಳಿಗೆ ಆದಾಯ ದೊರಕುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗಮನ ಹರಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅಭಿನವ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಕಾಶಿ, ಡಾ.ಚಂದ್ರಶೇಖರ್ ಕಂಬಾಳಿ ಮಠ್, ಡಾ. ನಾಗರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾ ನಾಯಕ್, ಸಹಾಯಕ ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್, ಮೂಗಪ್ಪ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.