ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಾಡಿನಲ್ಲಿ ಭಾನುವಾರ ಒಂದು ವಿಶೇಷ ದಿನವಾಗಿ ಮಾರ್ಪಟ್ಟಿದೆ. ಮೌಢ್ಯ, ಕಂದಾಚಾರ, ಅಸ್ಪೃಶ್ಯತಾಚರಣೆಗಳೇ ತುಂಬಿರುವ ಕಾಡುಗೊಲ್ಲ ಸಮಾಜದ ಯುವತಿಯೊಬ್ಬಳು ದಿಟ್ಟ ನಿರ್ಧಾರ ಮಾಡಿ ಅಂತರ್ಜಾತಿ ವಿವಾಹ ಆಗುವ ಮೂಲಕ ಮಾದರಿ ಎನಿಸಿದ್ದಾರೆ.
ಕುವೆಂಪು ಅವರ ಮಂತ್ರ ಮಾಂಗಲ್ಯಕ್ಕಿಂತ ಸರಳಾತಿ ಸರಳ ಎನ್ನಬಹುದಾದ ಸಂವಿಧಾನ ಸಾಕ್ಷಿಯಾಗಿ ಸಾಂಗತ್ಯಕ್ಕೆ ಕಾಲಿಡಲು ಸಂವಿಧಾನದ ಪೀಠಿಕೆ ಓದುವ ಮೂಲಕ ಮತ್ತು ಪೀಠಿಕೆಯಲ್ಲಿನ ವಿಚಾರಗಳನ್ನ ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಕೇಶ್ ಅವರ ಬಾಳ ಸಂಗಾತಿಯಾಗಿ ಮೇಘನಾ ಅವರು ಕೈ ಹಿಡಿದಿದ್ದಾರೆ.
ಈ ರೀತಿಯ ಸರಳ ಮದುವೆಗೆ ಸಾಕ್ಷಿಯಾಗಿದ್ದು ವಧು-ವರರ ತಂದೆ ತಾಯಿಗಳು, ಬಂಧು ಮಿತ್ರರು, ಸ್ನೇಹಿತರು, ವಿಚಾರವಾದಿಗಳು.
ಪುರೋಹಿತರ ಕಾಟವಿಲ್ಲ, ಅಕ್ಷತೆಗಳಿಲ್ಲ, ವಾದ್ಯ ವೇದಗಳಿಲ್ಲ, ಚಪ್ಪರವಿಲ್ಲ, ಅರಿಶಿನ, ಕುಂಕುಮ ಬಟ್ಟಲುಗಳಿಲ್ಲ, ಹಾಲು ತುಪ್ಪು, ಅಕ್ಕಿ, ಬೇಳೆ, ಬೆಲ್ಲ, ಕೊಬ್ಬರಿ, ಪಂಚಾಗವಿಲ್ಲ, ಮುಹೂರ್ತದ ಸಮಯ ಮೊದಲೇ ಇಲ್ಲ, ರಾಹು ಕಾಲ, ಗುಳಿಕ ಕಾಲ, ಯಮಗಂಡ ಕಾಲ ಈ ಯಾವುದನ್ನ ಲೆಕ್ಕಿಸದೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತಹ ಸಂವಿಧಾನ ಸಾಕ್ಷಿಯಾಗಿ ಹೂ ಮಾಲೆ ಬದಲಾಯಿಸಿಕೊಳ್ಳುವ ಮೂಲಕ ಅತ್ಯಂತ ಸರಳ ರೀತಿಯಲ್ಲಿ ಅದೂ ಅಂತರ್ಜಾತಿ ವಿವಾಹ ಆಗುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದು ಎಲ್ಲ ಸಂಪ್ರದಾಯವಾದಿಗಳು ಹುಬ್ಬೇರುವಂತೆ ಮಾಡಿದ್ದಾರೆ.
ಚಿತ್ರದುರ್ಗದ ನಿವಾಸಿ ಸಿ.ಜಿ ಅನ್ನಪೂರ್ಣ ಮತ್ತು ಎನ್.ಎ ರವೀಶ್ ಇವರ ಪುತ್ರಿ ಆರ್.ಮೇಘನಾ ಹಾಗೂ ಕೆ.ಆರ್ ಪೇಟೆ ತಾಲೂಕು ಹೋಸಕೋಟೆಯ ಕೃಷಿಕರಾದ ವಿನೋದ ಮತ್ತು ಸುರೇಶ್ ಇವರ ಪುತ್ರ ರಾಕೇಶ್ ಹೆಚ್.ಎಸ್ ಇವರುಗಳ ವಿವಾಹವು 2025ರ ಮೇ-11 ರಂದು ಚಿತ್ರದುರ್ಗದ ವೈಭವ ಗಾರ್ಡನ್ ನಲ್ಲಿ ಸರಳ ತೀರಿಯಲ್ಲಿ ಸಂವಿಧಾನ ಸಾಕ್ಷಿಯಾಗಿ ವಿವಾಹ ನೆರವೇರಿತು.
ಕಾಡುಗೊಲ್ಲರ ಸಂಪ್ರದಾಯ-
ಕಡು ಸಂಪ್ರದಾಯವಾದಿಗಳಾದ ಕಾಡುಗೊಲ್ಲ ಸಮಾಜದಲ್ಲಿ ವಿಶಿಷ್ಟವಾದ ಮೌಢ್ಯ, ಅನಿಷ್ಟ ಸಂಪ್ರದಾಯಗಳಿವೆ. ಹೆಣ್ಣು ಮಕ್ಕಳು ಮುಟ್ಟಾದಾಗ, ಹೆರಿಗೆ, ಮೈ ನೆರೆತಾಗ ಸೂತಕ ಎಂದು ಪರಿಗಣಿಸಿ ಯುವತಿ, ಮಹಿಳೆಯರನ್ನು ಊರಿನ ಆಚೆ ಉಳಿಸುವಂತಹ ಕೆಟ್ಟ ಕಟ್ಟುಪಾಡುಗಳು ಇನ್ನೂ ಜೀವಂತ ಇವೆ.
ಹಿಂದುಳಿದ ಬುಡಕಟ್ಟು ಕಾಡುಗೊಲ್ಲ ಸಮುದಾಯದಲ್ಲಿ ಪರಂಪಾರಗತವಾಗಿ ಇಂತಹ ಅನಿಷ್ಟ ಪದ್ಧತಿಗಳು ಮುಂದುವರೆದುಕೊಂಡು ಬರುತ್ತಿವೆ. ಮೌಢ್ಯ ಕಂದಾಚಾರಗಳಿಂದ ಕಾಡುಗೊಲ್ಲ ಸಮಾಜವನ್ನು ಮುಕ್ತಗೊಳಿಸುವುದು ಅಷ್ಟು ಸುಲಭದ ಮಾತಲ್ಲ.
ಜಾತಿ, ದೇವರು, ಧರ್ಮ, ಸಂಪ್ರದಾಯದ ನೆಪ ಹೇಳಿ ಹೆಣ್ಣು ಮಕ್ಕಳು ಮುಟ್ಟಾದ ಸಮಯದಲ್ಲಿ ಮನೆಯಿಂದ ಮೂರು ದಿನ ಹೊರಗೆ ಹಾಕುವುದು, ದೇವರು, ಧರ್ಮ, ಧಾರ್ಮಿಕ ಆಚರಣೆಗಳ ನೆಪವೊಡ್ಡಿ ಸೂತಕದ ಹೆಸರಿನಲ್ಲಿ ಆಗತಾನೆ ಹುಟ್ಟಿದ ಶಿಶು, ಬಾಣಂತಿಯರನ್ನು ಕಿರಿದಾದ ಗುಡಿಸಲಲ್ಲಿಟ್ಟು ಊರಿನಿಂದ ಹೊರಕ್ಕೆ ಒಂಟಿಯಾಗಿ ಉಳಿಸುವ ಪದ್ಧತಿ ಜಾರಿಲ್ಲಿದೆ.
ಮಹಿಳೆಯರು ಮುಟ್ಟಾಗುವುದು ಪ್ರಕೃತಿ ಸಹಜ ಎನ್ನುವುದನ್ನು ಮರೆತು ವರ್ತಿಸುತ್ತಾರೆ. ಸೂತಕದ ಸುಳಿಯಲ್ಲಿ ಮಹಿಳೆಯರು ಬೇಯುತ್ತಿರುತ್ತಾರೆ. ವೈಜ್ಞಾನಿಕವಾಗಿ ಯೋಚನೆಮಾಡಿದೆ ಗರ್ಭಿಣಿ ಮಹಿಳೆಯರು ಮತ್ತು ಮಳೆ ಗಾಳಿ, ಚಳಿ, ಕ್ರಿಮಿ ಕೀಟಗಳ ಬಗ್ಗೆ ಯೋಚಿಸದೆ ಹೆರಿಗೆಯಾದ ಹೆಣ್ಣು ಮಕ್ಕಳನ್ನು ಊರ ಹೊರಗಿಡುವ ಅನಿಷ್ಠ ಪದ್ಧತಿ ಇನ್ನೂ ಜೀವಂತವಾಗಿದೆ. ಹೆಣ್ಣು ಮಕ್ಕಳನ್ನು ಮಟ್ಟುವಂತಿಲ್ಲ. ಮುಟ್ಟಿದರೆ ಅದು ಸೂತಕ ಎನ್ನುವ ಪರಿಸ್ಥಿತಿ ಈಗಲೂ ಇದೆ. ಇಂತಹ ಜಾತಿಯ ಹೆಣ್ಣೊಂದು ಅಂತರ್ಜಾತಿ ವಿವಾಹ ಆಗುವ ಮೂಲಕ ಮಾದರಿಯಾಗಿದ್ದಾರೆ. ಇವರ ವಿವಾಹದಿಂದ ಕಾಡು ಗೊಲ್ಲರ ಹಟ್ಟಿಗಳನ್ನ ಮೌಢ್ಯ ಮುಕ್ತಗೊಳಿಸುವುದು,
ಹಟ್ಟಿಗಳಲ್ಲಿರುವ ಅಸ್ಪೃಶ್ಯತಾಚರಣೆ ಹೋಗಲಾಡಿಸಲು ಕಾಡುಗೊಲ್ಲ ಸಮಾಜದ ಮೇಘನಾ.ಆರ್ ಮತ್ತು ಕೃಷಿ ಕುಟುಂಬದ ರಾಕೇಶ್ ಹೆಚ್.ಎಸ್ ಇವರು ಸಂವಿಧಾನ ಸಾಕ್ಷಿಯಾಗಿ ವಿವಾಹ ಮಾಡಿಕೊಳ್ಳುವ ಮೂಲಕ ಕಾಡು ಗೊಲ್ಲರ ಹಟ್ಟಿಗಳಲ್ಲಿರುವ ಮೌಢ್ಯಾಚರಣೆಗಳು, ಅಸ್ಪೃಶ್ಯತಾಚರಣೆಗಳು ಕೊನೆಗೊಳ್ಳಲು ವೇದಿಕೆ ಕಲ್ಪಿಸುವ ಸಾಧ್ಯತೆ ಇದೆ ಎನ್ನಬಹುದು. ಅತಿ ಮುಖ್ಯವಾಗಿ ಸಮಾಜದಲ್ಲಿ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಒತ್ತು ನೀಡುವುದನ್ನು ತಳ್ಳಿ ಹಾಕುವಂತಿಲ್ಲ. ಈ ಮಟ್ಟಿಗೆ ಕಾಡುಗೊಲ್ಲ ಸಮಾಜ ಬದಲಾವಣೆಯತ್ತ ದಾವುಗಾಲು ಹಾಕಿದೆ ಎಂದು ಹೇಳಬಹುದು.
ಕವಿ, ಚಲನಚಿತ್ರ ನಿರ್ದೇಶಕ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದ ರಾಜ್ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರುವಂತ ಇಂತಹ ಸರಳ, ಅಂತರ್ಜಾತಿ ವಿವಾಹಕ್ಕೆ ನಾವಷ್ಟೇ ಸಾಕ್ಷಿಯಾಗಿಲ್ಲ, ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು, ಮಹಾತ್ಮ ಗಾಂಧಿ ಮೊದಲಾದ ಮಹಾನ್ ನಾಯಕರು ಸಾಕ್ಷಿಯಾಗಿ ಅತ್ಯಂತ ಸರಳ, ಸಂಭ್ರಮದಿಂದ ಕೂಡಿದ ಮದುವೆ ಇದಾಗಿದೆ ಎಂದರು.
ಸಂವಿಧಾನ ಕಾರಣಕ್ಕಾಗಿಯೇ ನಾವೆಲ್ಲ ಇಂದು ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ. ಸಂವಿಧಾನ ಮಾಡಿರುವ ಮಹಾ ಪವಾಡದಿಂದಾಗಿ ಕಾರು, ಬೈಕ್ ಗಳಲ್ಲಿ ಓಡಾಡುತ್ತಿದ್ದೇವೆ. ಬೃಹತ್ ಕಟ್ಟಡಗಳನ್ನು ಕಟ್ಟಿ ಜೀವನ ಮಾಡುತ್ತಿದ್ದೇವೆ.
ಅಡಿಕೆ, ಎಲೆಗಳ ಗೋಜಿಲ್ಲದ ಸರಳವಾಗಿ ಮದುವೆ ಆಗಿದೆ. ಒಂದು ಚೆಂಬು, ಕಳಸ ಕಂಬಳಿ, ನೀರಿಲ್ಲದೆ ಎಷ್ಟೋ ಮದುವೆಗಳು ಮುರಿದು ಬಿದ್ದಿವೆ. ಸಂಪ್ರದಾಯದಿಂದ ಕೂಡಿದ ಮದುವೆಗಳಿಂದ ಏನೂ ಪ್ರಯೋಜನವಿಲ್ಲ.
ಜೀವನದಲ್ಲಿನ ದುಡಿಮೆಯ ಶೇ.60 ರಷ್ಟು ಹಣವನ್ನ ಆಡಂಬರದ ಮದುವೆ, ನಾಮಕರಣ, ಗೃಹ ಪ್ರವೇಶ, ಶಾಸ್ತ್ರ, ಸಂಬಂಧ ಎಂದು ಖರ್ಚು ಮಾಡುವುದಕ್ಕಿಂತ ಈ ರೀತಿಯ ಸರಳ ವಿವಾಹಗಳು ಸಮಾಜದಲ್ಲಿ ನಡೆಯಬೇಕಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಹರಳಯ್ಯನಿಗೆ ಬ್ರಾಹ್ಮಣರ ಯುವತಿಯನ್ನು ಮದುವೆ ಮಾಡಿಸಿದ್ದಾರೆ. ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಪುತ್ರ ಪೂರ್ಣಚಂದ್ರ ತೇಜಸ್ವಿ ಮದುವೆಯನ್ನ ಮಂತ್ರ ಮಾಂಗಲ್ಯದ ಪರಿಕಲ್ಪನೆ ಮೂಲಕ ಮಾಡಿದ್ದಾರೆ. ಗಂಡು, ಹೆಣ್ಣು, ಮೇಲು ಕೀಳಲ್ಲ, ಜಾತಿ, ಧರ್ಮದ ಗೊಡವೆಗಳಿಲ್ಲದೆ ಅವರು ಮದುವೆ ಮಾಡಿದ್ದರು ಎಂದು ಮುಕಂದರಾಜ್ ತಿಳಿಸಿದರು.
ಹೆಣ್ಣು ಮತ್ತು ಗಂಡಿನ ಎರಡು ಕುಟುಂಬಗಳು ವೈಜ್ಞಾನಿಕವಾಗಿ ಯೋಚನೆ ಮಾಡಿ ಸ್ನೇಹಿತರಂತೆ ವೇದಿಕೆಯಲ್ಲಿ ಕೂತ ಸಂಭ್ರಮದಿಂದ ಸಂವಿಧಾನ ಸಾಕ್ಷಿ ಮದುವೆಗೆ ಸಾಕ್ಷಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಕವಿ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಮೇಘನಾ ಮತ್ತು ರಾಕೇಶ್ ಅವರು ಅಂತರ್ಜಾತಿ ವಿವಾಹ ಆಗುವುದಲ್ಲದೆ ಸರಳ ರೀತಿಯಲ್ಲಿ ಸಂವಿಧಾನ ಸಾಕ್ಷಿ ಮದೆಯಾಗಿದ್ದಾರೆ. ಅವರನ್ನ ಆದರ್ಶವಾಗಿಟ್ಟುಕೊಂಡು ಮತ್ತೊಷ್ಟು ಮಂದಿ ಅಂತರ್ಜಾತಿ ವಿವಾಹ ಆಗುತ್ತೀರಾ ಎನ್ನುವ ನಂಬಿಕೆ ಇದೆ. ಅಂತರ್ಜಾತಿ ವಿವಾಹದ ಜೊತೆಗೆ ಸರಳ ರೀತಿಯ ಮದುವೆ ಮಾಡಿಕೊಳ್ಳಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ. ಮೌಢ್ಯ, ಕಂದಾಚಾರಗಳಿಗೆ ಬಲಿಯಾಗಬೇಡಿ, ಆ ಶಾಸ್ತ್ರ ಮಾಡಬೇಕಿತ್ತು, ಈ ಶಾಸ್ತ್ರ ಮಾಡಬೇಕಿತ್ತು ಎನ್ನುವ ತಪ್ಪು ಕಲ್ಪನೆಗಳಿಂದ ದೂರವಾಗುವಂತೆ ಅವರು ಕರೆ ನೀಡಿದರು.
ಪೂರ್ಣಚಂದ್ರ ತೇಜಸ್ವಿ ಅವರ ಮದುವೆಯನ್ನು ಕುವೆಂಪು ಅವರು ಅತ್ಯಂತ ಸರಳ ರೀತಿಯಲ್ಲಿ ಮಾಡುತ್ತಾರೆ. ಕೇವಲ ಒಂದು ಕಾರ್ಡ್ ಬರೆದು ನಿಮಗೆ ಸಮಯ ಸಿಕ್ಕಾಗ ಆಶೀರ್ವದಿಸಿ ಆತಿಥ್ಯ ಸ್ವೀಕರಿಸಿ ಬರುವಂತೆ ಪತ್ರ ಬರೆಯುತ್ತಾರೆ. ಅದೇ ರೀತಿ ಇಂದು ಮೇಘನಾ ಮತ್ತು ರಾಕೇಶ್ ಅವರು ಸರಳ ರೀತಿಯಲ್ಲಿ ವಿವಾಹ ಮಾಡಿಕೊಂಡು ಆದರ್ಶವಾದಿಗಳಾಗಿ ಬಾಳಲಿ, ವೈಚಾರಿಕ, ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾನತೆಯಿಂದ ಕೂಡಿ ಬಾಳಲಿ ಎಂದು ಹೇಳಿದರು.
ವೇದಿಕೆಯಲ್ಲಿ ಅನ್ನಪೂರ್ಣ, ರವೀಶ್, ವಿನೋದ, ಸುರೇಶ್, ಸುನೀತ, ಸಿ ಜಿ ರವಿಶಂಕರ್, ಲಕ್ಷ್ಮಿಪತಿ, ಪಾಪಣ್ಣ ಮತ್ತು ರೇಣುಕಾ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ವರ ರಾಕೇಶ್ ಅವರ ಸಹೋದರಿ ಸುಪ್ರಿತಾ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಜೋತಿ ಸಂವಿಧಾನ ಪ್ರಸ್ತಾವನೆ ಓದಿದರು. ಹೇಮಂತ್ ರಾಜ್, ತ್ರಿವೇಣಿ ಅವರ ತಂಡದಿಂದ ವಚನಗಳು, ಕ್ರಾಂತಿ ಗೀತೆಗಳನ್ನು ಪಠಿಸಲಾಯಿತು. ಮೂಲಕ ಮದುವೆ ಸಮಾರಂಭ ಆರಂಭ ಮಾಡಲಾಯಿತು.