ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉನ್ನತೀಕರಣ-ಸಚಿವರಾದ ಕೆ.ಹೆಚ್ ಮುನಿಯಪ್ಪ

WhatsApp
Telegram
Facebook
Twitter
LinkedIn

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉನ್ನತೀಕರಣ
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:

ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಮತ್ತು ವಾರ್ಷಿಕ ನಿರ್ವಹಣೆಗಾಗಿ  2.10 ಕೋಟಿ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2.24 ಕೋಟಿ ಹಾಗೂ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲ ಸೌಕರ್ಯ ಒದಗಿಸಲು 5.56 ಕೋಟಿ ರೂಗಳ ಆರೋಗ್ಯ ಇಲಾಖೆಯ ಕಾಮಗಾರಿಗಳಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ದೊಡ್ಡಬಳ್ಳಾಪುರ ಟೌನ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಾಲನೆ ನೀಡಿದರು. 

 

ನಂತರ ಮಾತನಾಡಿ ಅಧಿಕಾರಿಗಳ ಶ್ರಮ, ಕಾಯಕನಿಷ್ಠೆ ‌ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ದೊಡ್ಡಬಳ್ಳಾಪುರದ ತಾಲ್ಲೂಕು ಆಸ್ಪತ್ರೆಗೆ ರಾಷ್ಟ್ರ ಮಟ್ಟದ ಗರಿ ಲಭಿಸಿದೆ. ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜಿಲ್ಲೆಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು .ಬಸವಣ್ಣನವರು ಹೇಳಿದ ಕಾಯಕವೇ ಕೈಲಾಸ ಪರಿಪಾಲನೆ ಮಾಡಬೇಕು ಎಂದರು.

 

ದೊಡ್ಡಬಳ್ಳಾಪುರದ‌ಸರ್ಕಾರಿ ಆಸ್ಪತ್ರೆ ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ, ಈ ಸೇವೆ ಇದೇ ರೀತಿ ಮುಂದಿನ ದಿನಗಳಲ್ಲೂ ಮುಂದುವರೆಯಲಿ ಎಂದು   ವೈದ್ಯಾಧಿಕಾರಿಗಳಿಗೆ ಅಭಿನಂದಿಸಿದರು.

 

     ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಶಿಲಾನ್ಯಾಸ ರೂಪುಗೊಂಡಿದ್ದು, ಶೀಘ್ರವೇ ಮಂಜೂರಾತಿಗಾಗಿ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಜಿಲ್ಲೆಯ ಎಲ್ಲಾ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ದೊಡ್ಡಬಳ್ಳಾಪುರ ನಗರ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಅಪಘಾತಗಳ ಸಂಭವ ಹೆಚ್ಚಾಗಿ ಕಂಡುಬರುತ್ತಿದೆ‌. ಇದರಿಂದಾಗಿ ಕೇಂದ್ರ ಸರಕಾರ ವತಿಯಿಂದ ಕ್ರಿಟಿಕಲ್ ಕೇರ್ ಯುನಿಟ್ ಸಹ ಸ್ಥಾಪಿತವಾಗಲಿದ್ದು, ಜನರಿಗೆ ಇದು ಉಪಯೋಗವಾಗಲಿದೆ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವ ಸಾರ್ವಜನಿಕರಿಗೆ ಲಕ್ಷಾಂತರ ರೂಗಳ ಖರ್ಚು ತಪ್ಪಲಿದೆ ಎಂದು ಸಚಿವರು ಹೇಳಿದರು.

 

     ದೊಡ್ಡಬಳ್ಳಾಪುರ ತಾಲ್ಲೂಕಿನ ಶಾಸಕ ಧೀರಜ್  ಮುನಿರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆ ಅತ್ಯುತ್ತಮ ಸೇವೆ ಸಲ್ಲಿಸುತ್ತಾ ಬಂದಿದೆ. ಇಲ್ಲಿನ ಅಧಿಕಾರಿಗಳ ಸಹಭಾಗಿತ್ವದಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೆ ಕೇಂದ್ರ ಸರಕಾರದ ಆರೋಗ್ಯ ಇಲಾಖೆಯ ವತಿಯಿಂದ ತಾಲ್ಲೂಕು ಮಟ್ಟದ ಅತಿ ಉತ್ತಮ ಆಸ್ಪತ್ರೆ ಎಂದು ಬಿರುದು ಪಡೆದುಕೊಂಡಿದೆ. ನಮ್ಮ ಸುತ್ತ ಮುತ್ತಲು ಇರುವ ಮೂರು ಜಿಲ್ಲೆಗಳಿಗಿಂತ ಅತಿ ಹೆಚ್ಚು ಮಕ್ಕಳ ಜನನ ಆಗುತ್ತಿರುವ ಆಸ್ಪತ್ರೆ ಇದಾಗಿದೆ.

 

ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಪಾತ್ರವಾಗಿದೆ. ದೊಡ್ಡಬಳ್ಳಾಪುರ ನಗರದ ಸಿದ್ದೇನಾಯಕನಹಳ್ಳಿಯಲ್ಲಿ

195 ಕೋಟಿ ರೂ ಗಳ ವೆಚ್ಚದ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೆ ಒಪ್ಪಿಗೆ ನೀಡಿದೆ. ಇದಲ್ಲದೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅಭಿಮ್ ಯೋಜನೆಯಡಿಯಲ್ಲಿ 50 ಹಾಸಿಗೆಯುಳ್ಳ ಕ್ರಿಟಿಕಲ್ ಕೇರ್ ಯುನಿಟ್(CCU) ಆಸ್ಪತ್ರೆ ದೊಡ್ಡಬಳ್ಳಾಪುರದಲ್ಲಿ ಮುಂಬರುವ ದಿನಗಳಲ್ಲಿ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು. 

 

  ಆರೋಗ್ಯ ಇಲಾಖೆಯ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಮೊತ್ತ ಹಾಗೂ ವಿವರ-

   ಜಿಲ್ಲೆಯ ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಗೆ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣ ಮತ್ತು ವಾರ್ಷಿಕ ನಿರ್ವಹಣೆಗಾಗಿ  2,10,60,000 ರೂಗಳು ಹಾಗೂ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಕನಸವಾಡಿಗೆ ಮೂಲಭೂತ ಸೌಕರ್ಯಗಳ ಉನ್ನತೀಕರಣಕ್ಕಾಗಿ ಒಟ್ಟು  60,28,900 ಲಕ್ಷ ರೂ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡಬಳ್ಳಾಪುರಕ್ಕೆ ಮೂಲಸೌಕರ್ಯಗಳ ಉನ್ನತೀಕರಣಕ್ಕಾಗಿ ಒಟ್ಟು 61,10,000 ರೂ ಮತ್ತು

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಮೂಲಸೌಕರ್ಯ ಸೌಲಭ್ಯಗಳ ಉನ್ನತೀಕರಣಕ್ಕಾಗಿ 2,24,82,000 ಕೋಟಿ ರೂ ವೆಚ್ಚ ಸೇರಿ ಜಿಲ್ಲೆಗೆ ಮಂಜೂರಾಗಿರುವ ಒಟ್ಟು ಮೊತ್ತ ರೂ 5,56,80,900 ಕೋಟಿ ರೂ ಗಳಾಗಿರುತ್ತದೆ. 

 

   ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನಾ ಸಮಿತಿಯ ಜಿಲ್ಲಾ ಅಧ್ಯಕ್ಷ ಬಿ.ರಾಜಣ್ಣದೊಡ್ಡಬಳ್ಳಾಪುರ ಉಪ‌ವಿಭಾಗಾಧಿಕಾರಿ ದುರ್ಗಾಶ್ರೀ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಟಿ.ಕೆ ರಮೇಶ್,‌ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುನಿಲ್ ಕುಮಾರ್, ದೇವನಹಳ್ಳಿ ತಾಲ್ಲೂಕು ತಹಶೀಲ್ದಾರ್ ಬಾಲಕೃಷ್ಣ, ದೊಡ್ಡಬಳ್ಳಾಪುರ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು, ನಗರಸಭೆ ಆಯುಕ್ತ ಕಾರ್ತಿಕ್ ಈಶ್ವರ್ ಸೇರಿದಂತೆ ನಗರಸಭಾ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು, ಚುನಾಯಿತ ಜನಪ್ರತಿನಿಧಿಗಳು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

 

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon