ಈರುಳ್ಳಿ ಮೂಟೆ ಮೇಲೆಯೇ ಕುಳಿತು ರೈತರು, ಕಾರ್ಮಿಕರ ಅಹವಾಲು ಆಲಿಕೆ!
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ, ರೈತರು, ವರ್ತಕರು ಹಾಗೂ ಹಮಾಲಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು.
ಯಾವುದೇ ಪೂರ್ವ ಸೂಚನೆಯಿಲ್ಲದೆ ಬೆಳಗ್ಗೆ 6 ರಿಂದ 7 ಗಂಟೆಯ ಸುಮಾರಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಆಗಮಿಸಿದ ಸಿಎಂ, ಕಚೇರಿಯಲ್ಲಿ ಕುಳಿತು ಕೇಳುವುದಕ್ಕಿಂತ ಸ್ಥಳಕ್ಕೇ ತೆರಳಿ ವಾಸ್ತವ ಪರಿಸ್ಥಿತಿ ಅರಿಯಲು ಈ ಭೇಟಿ ನೀಡಿದ್ದಾರೆ.
ಈರುಳ್ಳಿ, ಆಲೂಗಡ್ಡೆ ಹಾಗೂ ಶುಂಠಿ ಮಂಡಿಗಳಿಗೆ ತೆರಳಿದ ಅವರು, ಈರುಳ್ಳಿ ಮೂಟೆಗಳ ಮೇಲೆಯೇ ಕುಳಿತು ವ್ಯಾಪಾರ-ವಹಿವಾಟಿನ ಸ್ಥಿತಿಗತಿ, ಇಳುವರಿ, ಸಾಗಣೆ ವೆಚ್ಚ ಮತ್ತು ಬೆಲೆ ಕುಸಿತದ ಬಗ್ಗೆ ಮಾಹಿತಿ ಪಡೆದರು.
ಸಮಸ್ಯೆಗಳ ಸುರಿಮಳೆ ಹಾಗೂ ಸಿಎಂ ಸ್ಪಂದನೆ: ರೈತರ ಅಳಲು ಹಾಗೂ ತೂಕ ಅಕ್ರಮ ದೂರು: ಹಾಸನ ಹಾಗೂ ಇತರ ಜಿಲ್ಲೆಗಳಿಂದ ಬಂದಿದ್ದ ರೈತರು ಮಳೆ ಕೊರತೆ, ಬೋರ್‌ವೆಲ್ ಇದ್ದರೂ ವಿದ್ಯುತ್ ಸಮಸ್ಯೆ, ಲಾರಿ ಬಾಡಿಗೆ ವೆಚ್ಚ ಮತ್ತು ಬೆಲೆ ಕುಸಿತದ ಬಗ್ಗೆ ಅಳಲು ತೋಡಿಕೊಂಡರು.
ಕೆಲ ರೈತರು ತೂಕದಲ್ಲಿ ಮೋಸ ನಡೆಯುತ್ತಿದೆ (65 ಕೆಜಿ ಚೀಲವನ್ನು 50 ಕೆಜಿಗೆ ಲೆಕ್ಕ ಹಾಕಲಾಗುತ್ತಿದೆ) ಎಂದು ದೂರಿದರು. ಮತ್ತೆ ಕೆಲವು ರೈತರು ತೂಕ ಸರಿಯಾಗಿಯೇ ಇದೆ, ಆದರೆ ಕೃಷಿ ಸಚಿವರು ಮಾರುಕಟ್ಟೆಗೆ ಭೇಟಿ ನೀಡುತ್ತಿಲ್ಲವೆಂದು ದೂರಿಕೊಂಡರು.
ಸ್ಥಳದಲ್ಲೇ ಮೊಬೈಲ್ ನಂಬರ್ ಪಡೆದ ಸಿಎಂ: ವಿದ್ಯುತ್ ಮತ್ತು ರಸ್ತೆ ಸಮಸ್ಯೆಯನ್ನೇಳಿದ ರೈತರೊಬ್ಬರಿಂದ ಸಿಎಂ ಮೊಬೈಲ್ ನಂಬರ್ ಪಡೆದುಕೊಂಡು, ಉಚಿತ ವಿದ್ಯುತ್‌ಗಾಗಿ ಗ್ರಾಪಂಗೆ ಅರ್ಜಿ ಸಲ್ಲಿಸಲು ಸೂಚಿಸಿದರಲ್ಲದೆ ರಸ್ತೆ ದುರಸ್ತಿಗೆ ಭರವಸೆ ನೀಡಿದರು.
ಮೂಲಸೌಕರ್ಯ ಹಾಗೂ ಶೌಚಾಲಯ ದೂರು: ಕುಡಿಯುವ ನೀರಿಗಾಗಿ ಬಾಟಲಿ ನೀರನ್ನೇ ಖರೀದಿಸುವ ಸ್ಥಿತಿ ಇದೆ, ಶೌಚಾಲಯ ಹಾಗೂ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎಂದು ವರ್ತಕರು ಮತ್ತು ಕೂಲಿ ಕಾರ್ಮಿಕರು ಗಮನ ಸೆಳೆದರು.
ಬಾಲಕಾರ್ಮಿಕ ಪದ್ಧತಿಗೆ ಕಟ್ಟುನಿಟ್ಟಿನ ಕ್ರಮ: ಪರಿಶೀಲನೆ ವೇಳೆ ಸಣ್ಣ ವಯಸ್ಸಿನ ಮಕ್ಕಳು ಕೂಲಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದ ಸಿಎಂ, ಸಂಜೆಯೊಳಗೆ ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿರುವವರನ್ನು ಬಂಧಿಸಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು. ಕಾರ್ಮಿಕರ ಜೊತೆ ಇಡ್ಲಿ ಸವಿದ ಮುಖ್ಯಮಂತ್ರಿ:ಮಾರುಕಟ್ಟೆಯ ರಸ್ತೆಬದಿಯ ಸಣ್ಣ ಉಪಾಹಾರ ಅಂಗಡಿಯೊಂದರಲ್ಲಿ ಕೂಲಿ ಕಾರ್ಮಿಕರು ಮತ್ತು ಹಮಾಲಿಗಳ ಜೊತೆ ಸರಳವಾಗಿ ಕುಳಿತು ಸಿಎಂ ಇಡ್ಲಿ ಮತ್ತು ಕಾಫಿ ಸೇವಿಸಿದರು.
ಅಂಗಡಿ ಮಾಲೀಕರಿಗೆ ₹500 ನೀಡಿದ ಅವರು, ತಮ್ಮೊಂದಿಗೆ ಉಪಾಹಾರ ಸೇವಿಸಿದ ಕಾರ್ಮಿಕರಿಂದ ಹಣ ಪಡೆಯದಂತೆ ಸೂಚಿಸಿದರು. 60 ವರ್ಷಗಳ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಹೀಗೆ ನಮ್ಮ ಜೊತೆ ಕುಳಿತು ಮಾತನಾಡಿದ್ದು ಇದೇ ಮೊದಲು ಎಂದು ಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು. ರಾಜ್ಯದಾದ್ಯಂತ ಎಪಿಎಂಸಿಗಳಲ್ಲಿ ಪಾರದರ್ಶಕ ವ್ಯವಸ್ಥೆ ತರಲು ಇತರ ಸಚಿವರೂ ತಮ್ಮ ಜಿಲ್ಲೆಗಳ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ ಎಂದು ಸಿಎಂ ತಿಳಿಸಿದರು.




