ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಲು ಸಾಲು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ನಿಯಂತ್ರಿಸುವ ಬದಲು ಭ್ರಷ್ಟರೊಂದಿಗೆ ಪಾಲುದಾರಿಕೆ ನಡೆಸುತ್ತಿದೆ ಎಂದು ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದಾರೆ.
ನೇಮಕಾತಿಗಳಲ್ಲಿ ನಡೆಯುತ್ತಿರುವ ಸಾಲು ಸಾಲು ಅವ್ಯವಹಾರಗಳಿಂದಾಗಿ ಆಯೋಗದ ಮೇಲೆ ಸಾರ್ವಜನಿಕರು ಹಾಗೂ ಉದ್ಯೋಗಾಕಾಂಕ್ಷಿಗಳು ಶೇ. 1ರಷ್ಟು ನಂಬಿಕೆಯನ್ನೂ ಇಡದಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಕೋಟಿ ಕೋಟಿ ಲಂಚದ ಬೇಡಿಕೆ: ಇತ್ತೀಚೆಗೆ ಪಶು ವೈದ್ಯಕೀಯ ಅಧಿಕಾರಿ ಹುದ್ದೆಗೆ 80 ಲಕ್ಷ ರೂಪಾಯಿ ಲಂಚದ ಡಿಮಾಂಡ್ ಮಾಡಲಾಗಿದ್ದ ವಿಷಯ ಬಯಲಿಗೆ ಬಂದ ಬೆನ್ನಲ್ಲೇ, ಕೆಎಎಸ್ (KAS) ಪರೀಕ್ಷೆಯಲ್ಲೂ ಭ್ರಷ್ಟಾಚಾರದ ಆರೋಪ ಹೊರಬಿದ್ದಿದೆ. ಕೆಎಎಸ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳಿಗೆ 1.5 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿದೆ.
ಭ್ರಷ್ಟರ ಜೊತೆ ಸರ್ಕಾರ ಪಾರ್ಟ್‌ನರ್‌ಶಿಪ್: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಬದಲಿಗೆ ಭ್ರಷ್ಟರ ಜೊತೆಗೆ ಪಾಲುದಾರಿಕೆ ನಡೆಸುತ್ತಾ, ಅವ್ಯವಹಾರಗಳಿಗೆ ಮುಕ್ತ ಲೈಸೆನ್ಸ್ ನೀಡಿದೆ.
ಎಗ್ಗಿಲ್ಲದೆ ಸಾಗಿರುವ ಅವ್ಯವಹಾರ: ಸರ್ಕಾರದ ಈ ಧೋರಣೆಯ ಪರಿಣಾಮವಾಗಿಯೇ ಕೆಪಿಎಸ್‌ಸಿಯಲ್ಲಿ ಯಾವುದೇ ಭಯವಿಲ್ಲದೆ ಸಾಲು ಸಾಲು ಅಕ್ರಮಗಳು ಮುಂದುವರಿಯುತ್ತಿದ್ದು, ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ.



