ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟವೇ ಲಂಚ ಹಾಗೂ ಕಪ್ಪದ ಆಧಾರದ ಮೇಲೆ ರಚನೆಯಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಚಿವ ಸ್ಥಾನವನ್ನು 'ಪೇಮೆಂಟ್ ಸೀಟ್' ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೇ ಮಾತನಾಡಿಕೊಂಡಿರುವ ಆಡಿಯೋ ಬಯಲಾಗಿದೆ ಎಂದು ಆರೋಪಿಸಿರುವ ಅವರು, ರಾಜ್ಯದಲ್ಲಿ ಲಂಚಾವತಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದಿದ್ದಾರೆ.
ಕಪ್ಪ ನೀಡಿ ಸಚಿವ ಸ್ಥಾನ: ಸಚಿವ ಸ್ಥಾನ ಪಡೆಯಲು ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಸಲ್ಲಿಸಬೇಕು. ಸಚಿವರಾದ ಬಳಿಕ ಆ ಹಣವನ್ನು ವಸೂಲಿ ಮಾಡಲು ಸಾರ್ವಜನಿಕರಿಂದ ಕಮಿಷನ್ ಹೊಡೆಯಬೇಕು ಎಂಬ ತತ್ವದ ಮೇಲೆ ಸರ್ಕಾರ ನಡೆಯುತ್ತಿದೆ.
ಭ್ರಷ್ಟಾಚಾರ ರಹಿತ ಆಡಳಿತ ಸಾಧ್ಯವೇ?: ಲಂಚದ ಆಧಾರದ ಮೇಲೆಯೇ ಸಚಿವ ಸಂಪುಟ ರಚನೆಯಾಗಿರುವಾಗ, ಈ ಸರ್ಕಾರದಿಂದ ಭ್ರಷ್ಟಾಚಾರ ರಹಿತ ಆಡಳಿತವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಡಿಕೆಶಿಗೆ ನೇರ ಸವಾಲು: "ಹತ್ತು ರೂಪಾಯಿ ಲಂಚ ಕೇಳಿದರೂ ನನಗೆ ಹೇಳಿ" ಎಂದಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಕೋಟ್ಯಂತರ ರೂಪಾಯಿಗಳ ಈ 'ವ್ಯವಹಾರಕ್ಕೆ' ಸಚಿವ ಸಂಪುಟ ವಿಸ್ತರಣೆಯ ಬಣ್ಣ ಬಳಿಯುತ್ತಿದ್ದೀರಲ್ಲ, ಇದಕ್ಕೆ ಏನೆನ್ನುತ್ತೀರಿ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.



