ಚಂದ್ರವಳ್ಳಿ ನ್ಯೂಸ್, ಕಠ್ಮಂಡು:
ಟಿಬೆಟ್ ಗಡಿಭಾಗದಲ್ಲಿ ಭಾರಿ ಹಿಮಪಾತದಿಂದ ರೂಪುಗೊಂಡಿದ್ದ ಹಿಮನದಿ ಸರೋವರದ ನೀರಿನ ಮಟ್ಟ ದಿಢೀರ್ ಏರಿಕೆಯಾಗಿದ್ದು, ನೇಪಾಳದಲ್ಲಿ ಮತ್ತೊಮ್ಮೆ ಭೀಕರ ಪ್ರವಾಹದ ಭೀತಿ ಎದುರಾಗಿದೆ.
ಈ ನಡುವೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಶುಕ್ರವಾರವೂ ಹಲವು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 538ಕ್ಕೆ ಏರಿಕೆಯಾಗಿದೆ.
ನೇಪಾಳದ ಎಂಟು ಜಿಲ್ಲೆಗಳಿಂದ ಈ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ನೇಪಾಳ ಪೊಲೀಸರು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಗಳ ವಾರು ಸಾವು ನೋವಿನ ವಿವರ: ಚಿತ್ವಾನ್: 221, ನವಾಲ್‌ಪರಸಿ (ಪೂರ್ವ): 134. ಗೋಖಾ: 46, ನುವಾಕೋಟ್: 37, ಧಾಡಿಂಗ್: 33, ತನು: 28, ನವಾಲ್‌ಪರಸಿ (ಪಶ್ಚಿಮ): 27, ರಸುವಾ: 12.
ದುರಂತ ಸಂಭವಿಸಿದ ಮೂರನೇ ದಿನವೂ ಬೃಹತ್ ಮಟ್ಟದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಯಾಚರಣೆಗಾಗಿ 2,391 ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ ಒಟ್ಟು 7,451 ಭದ್ರತಾ ಸಿಬ್ಬಂದಿಯನ್ನು ದುರಂತ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಮತ್ತೊಂದು ಪ್ರವಾಹದ ಎಚ್ಚರಿಕೆ: ಬುಧವಾರ ರಸುವಾ ಮತ್ತು ಮಧ್ಯ ನೇಪಾಳದಲ್ಲಿ ಸಂಭವಿಸಿದ ಭಾರಿ ದಿಢೀರ್ ಪ್ರವಾಹವು ನೂರಾರು ಜನರ ಸಾವು ಮತ್ತು ಸಾವಿರಾರು ಮಂದಿ ನಾಪತ್ತೆಯಾಗಲು ಕಾರಣವಾಗಿತ್ತು. ಇದೀಗ ದುರಂತ ಸಂಭವಿಸಿದ ಪ್ರದೇಶಗಳಲ್ಲಿ ಮತ್ತೆ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಮತ್ತೊಂದು ಪ್ರವಾಹದ ಅಪಾಯ ಎದುರಾಗಿದೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ನಾಪತ್ತೆ: ಪ್ರವಾಹ ಪೀಡಿತ ನೇಪಾಳದಲ್ಲಿ ಸುಮಾರು 100 ಭಾರತೀಯ ಮೂಲದವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗೂ 320ಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಮತ್ತೊಂದೆಡೆ, ಚೀನಾ ಗಡಿಭಾಗದಲ್ಲಿದ್ದ 400 ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದು, ಅಲ್ಲಿ ಸಿಲುಕಿದ್ದ 96 ಭಾರತೀಯರು ಭೂಮಾರ್ಗದ ಮೂಲಕ ನೇಪಾಳವನ್ನು ಸುರಕ್ಷಿತವಾಗಿ ತಲುಪಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ದೆಹಲಿಗೆ ಮರಳಿದ 21 ಭಾರತೀಯರನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ವೇಳೆ ಸಂತ್ರಸ್ತರ ಭೀಕರ ಅನುಭವಗಳನ್ನು ಕೇಳಿ ಜೈಶಂಕರ್ ತೀವ್ರ ಕಂಬನಿ ಮಿಡಿದರು.




