ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಬಂಡೇಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ನಡೆದಿದೆ.
ಆರೋಪಿಯನ್ನು ಸೈಯ್ಯದ್ ಜೀಶಾನ್ ಅಲಿಯಾಸ್ ಸರ್ವೀಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಆರೋಪಿಯ ಹಲ್ಲೆಯಿಂದ ಕಾನ್‌ಸ್ಟೇಬಲ್ ಸಂದೀಪ್ ಕಾಂಬ್ಳೆ ಗಾಯಗೊಂಡಿದ್ದು, ಗುಂಡೇಟು ತಿಂದ ಆರೋಪಿ ಹಾಗೂ ಗಾಯಗೊಂಡ ಕಾನ್‌ಸ್ಟೇಬಲ್ ಇಬ್ಬರನ್ನೂ ಚಿಕಿತ್ಸೆಗಾಗಿ ನಗರದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಸೋಮಸುಂದರಪಾಳ್ಯದ ಬಳಿ ಗುರುವಾರ ತಡರಾತ್ರಿ ಸ್ಕೂಟರ್‌ನಲ್ಲಿ ಆರೋಪಿಯು ಮಾರಕಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿತ್ತು. ತಕ್ಷಣವೇ ಸಬ್ ಇನ್ಸ್‌ಪೆಕ್ಟರ್ ಸಚಿನ್ ನೇತೃತ್ವದ ಪೊಲೀಸ್ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಯ ಸ್ಕೂಟರ್ ಅನ್ನು ಬೆನ್ನಟ್ಟಿ ತಡೆಯಲು ಯತ್ನಿಸಿದೆ. ಆದರೆ ಆರೋಪಿ ಸೋಮಸುಂದರಪಾಳ್ಯ ಕೆರೆಯ ನಿರ್ಜನ ಪ್ರದೇಶದ ಕಡೆಗೆ ವೇಗವಾಗಿ ವಾಹನ ಚಲಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಪೊಲೀಸರು ತಕ್ಷಣವೇ ಆತನನ್ನು ಚೇಸ್ ಮಾಡಿ ಸುತ್ತುವರೆದಾಗ, ಆರೋಪಿ ಜೀಶಾನ್ ತನ್ನ ಬಳಿಯಿದ್ದ ಉದ್ದನೆಯ ಕತ್ತಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎಂದು ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್ ತಿಳಿಸಿದ್ದಾರೆ.
ಪಿಎಸ್‌ಐನಿಂದ ಫೈರಿಂಗ್: ಶರಣಾಗುವಂತೆ ಪಿಎಸ್‌ಐ ಸಚಿನ್ ಅವರು ಮೊದಲು ಪಿಸ್ತೂಲ್‌ನಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದಾಗ್ಯೂ ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿ ಕಾನ್‌ಸ್ಟೇಬಲ್ ಸಂದೀಪ್ ಕಾಂಬ್ಳೆ ಮೇಲೆ ಹಲ್ಲೆ ನಡೆಸಿ, ಬಳಿಕ ಪಿಎಸ್‌ಐ ಸಚಿನ್ ಮೇಲೆಯೂ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್‌ಐ ಸಚಿನ್ ಅವರು ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಹಲವು ಪ್ರಕರಣಗಳಲ್ಲಿ ಭಾಗಿ: ಆರೋಪಿ ಜೀಶಾನ್ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರಾಬರಿ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದನು. ಅಲ್ಲದೆ, ಇತ್ತೀಚೆಗೆ ಮಡಿವಾಳದಲ್ಲಿ ನಡೆದಿದ್ದ ಸುಹೈಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಪ್ರಸ್ತುತ ಆರೋಪಿಯ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಂಡೇಪಾಳ್ಯ ಇನ್ಸ್‌ಪೆಕ್ಟರ್ ಮಂಜುನಾಥ್ ಆರ್.ವಿ. ಹಾಗೂ 'ಸೋಕೋ' ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.




