ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮಹತ್ವದ ಕ್ರಮಗಳಿಗೆ ಚಾಲನೆ ನೀಡಿದೆ. ನಗರದ ಎತ್ತರದ ಕಟ್ಟಡಗಳಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿ ಹಾಗೂ ಭಯೋತ್ಪಾದಕ ದಾಳಿಗಳಂತಹ ಬಿಕ್ಕಟ್ಟುಗಳನ್ನು ಸಮರ್ಥವಾಗಿ ಎದುರಿಸಲು ಸ್ಥಳೀಯ ಪೊಲೀಸರಿಗೆ 'ರಾಷ್ಟ್ರೀಯ ಭದ್ರತಾ ಪಡೆ' ಮೂಲಕ ವಿಶೇಷ ತರಬೇತಿ ನೀಡಲಾಗುತ್ತಿದೆ.
ಕಮಾಂಡೋ ಮಾದರಿ ತರಬೇತಿ ಸಿಬ್ಬಂದಿಗೆ %50 ಹೆಚ್ಚುವರಿ ವೇತನ:
ಅತ್ಯಂತ ಅಪಾಯಕಾರಿ ಹಾಗೂ ಸವಾಲಿನಿಂದ ಕೂಡಿದ ಕಾರ್ಯಗಳನ್ನು ನಿರ್ವಹಿಸುವ ಈ ವಿಶೇಷ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಗೆ ಉತ್ತೇಜನ ನೀಡುವ ಸಲುವಾಗಿ, ಅವರ ಮೂಲ ವೇತನದ ಶೇ. 50ರಷ್ಟು ಹೆಚ್ಚುವರಿ ಭತ್ಯೆ ನೀಡಲು ನಿರ್ಧರಿಸಲಾಗಿದೆ.
ಗೃಹ ಸಚಿವರ ಪ್ರಸ್ತಾವನೆಗೆ ಸ್ಪಂದಿಸಿರುವ ಸರ್ಕಾರ, ಹಣಕಾಸಿನ ಅಭಾವವನ್ನು ಲೆಕ್ಕಿಸದೆ ಈ ನಿರ್ಧಾರ ಕೈಗೊಂಡಿದೆ. ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಗರವಾಗಿದ್ದು, ಇಲ್ಲಿನ ನಾಗರಿಕರ ಸುರಕ್ಷತೆ ಮತ್ತು ಭಯಮುಕ್ತ ವಾತಾವರಣ ನಿರ್ಮಾಣಕ್ಕೆ ಈ ಕ್ರಮ ಅಗತ್ಯವಾಗಿದೆ.
ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ 'ರೌಡಿ ಸ್ಕ್ವಾಡ್': ರಾಜ್ಯದಲ್ಲಿ ಹಾಗೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ರೌಡಿಗಳ ಹಾವಳಿ ಮತ್ತು ಅಕ್ರಮ ಚಟುವಟಿಕೆಗಳಿಗೆ ಪೂರ್ಣವಿರಾಮ ಇಡಲು ಪ್ರತ್ಯೇಕ 'ರೌಡಿ ಸ್ಕ್ವಾಡ್' ರಚಿಸಲಾಗುವುದು. ಸ್ಥಳೀಯ ಮಟ್ಟದಲ್ಲಿ ಪ್ರಭಾವ ಬೀರದಂತೆ ತಡೆಯಲು, ಸಮರ್ಥ ಐಪಿಎಸ್ ಅಧಿಕಾರಿಯೊಬ್ಬರ ನೇರ ಉಸ್ತುವಾರಿಯಲ್ಲಿ ಈ ಸ್ಕ್ವಾಡ್ ಕಾರ್ಯಾಚರಣೆ ನಡೆಸಲಿದೆ.
ಸೇನೆ ಹಾಗೂ ವಾಯುಪಡೆಯೊಂದಿಗೆ ಒಪ್ಪಂದ: ತುರ್ತು ಸಂದರ್ಭಗಳಲ್ಲಿ, ವಿಶೇಷವಾಗಿ ವಿಪತ್ತು ನಿರ್ವಹಣೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಹೆಲಿಕಾಪ್ಟರ್‌ಗಳ ಅಗತ್ಯವಿದ್ದರೆ ತಕ್ಷಣವೇ ಲಭ್ಯವಾಗುವಂತೆ 'ಭಾರತೀಯ ವಾಯುಪಡೆ' ಮತ್ತು 'ಭಾರತೀಯ ಸೇನೆ'ಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ನಗರದ ಎತ್ತರದ ಕಟ್ಟಡಗಳಲ್ಲಿ ಸೂಕ್ತ ಅಗ್ನಿಶಾಮಕ ಉಪಕರಣಗಳು ಹಾಗೂ ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಕಮಿಷನರ್‌ಗೆ ಸ್ಪಷ್ಟ ಸೂಚನೆ ನೀಡಲಾಗಿದೆ.




