ಮೂರನೇ ವ್ಯಕ್ತಿಯ ದೂರು ಆಧರಿಸಿ ಜಾತಿ ಪ್ರಮಾಣಪತ್ರ ರದ್ದುಪಡಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಚಂದ್ರವಳ್ಳಿ ನ್ಯೂಸ್, ಚನ್ನಪಟ್ಟಣ:
ಅಪರಿಚಿತ ಅಥವಾ ಮೂರನೇ ವ್ಯಕ್ತಿಯು ನೀಡುವ ದೂರಿನ ಆಧಾರದ ಮೇಲೆ ಯಾವುದೇ ವ್ಯಕ್ತಿಯ ಜಾತಿ ಪ್ರಮಾಣಪತ್ರವನ್ನು ನೇರವಾಗಿ ರದ್ದುಪಡಿಸುವ ಕಾನೂನಾತ್ಮಕ ಅಧಿಕಾರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್ ಪ್ರಮುಖ ಆದೇಶ ನೀಡಿದೆ.
ಮೂರನೇ ವ್ಯಕ್ತಿಯ ದೂರಿನನ್ವಯ ತಮ್ಮ ಜಾತಿ ಪ್ರಮಾಣಪತ್ರ ರದ್ದುಗೊಳಿಸಿದ್ದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಕ್ರಮವನ್ನು ಪ್ರಶ್ನಿಸಿ, ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದ ಬೈರಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ನೀಡಿದ ಪ್ರಮುಖ ಆದೇಶ: ನಿಯಮಾನುಸಾರ ಮೇಲ್ಮನವಿ ಕಡ್ಡಾಯ: ತಹಶೀಲ್ದಾರರು ನೀಡಿದ ಜಾತಿ ಪ್ರಮಾಣಪತ್ರದ ವಿರುದ್ಧ ಆಕ್ಷೇಪಗಳಿದ್ದರೆ, 1990ರ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕಾಯ್ದೆಯ ಸೆಕ್ಷನ್ 4(ಬಿ) ಅಡಿಯಲ್ಲಿ ಮೇಲ್ಮನವಿ ಸಲ್ಲಿಸಬೇಕು.
ಜಿಲ್ಲಾಧಿಕಾರಿಗಳಿಗೆ ಮಾತ್ರ ಸ್ವಯಂಪ್ರೇರಿತ ಅಧಿಕಾರ: ಕಾಯ್ದೆಯ ಸೆಕ್ಷನ್ 4ಎಫ್ ಅಡಿಯಲ್ಲಿ ಜಿಲ್ಲಾಧಿಕಾರಿಗಳು (DC) ಮಾತ್ರವೇ ಸ್ವಯಂಪ್ರೇರಿತವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬಹುದು.
ಸಮಿತಿಗೆ ಅಧಿಕಾರವಿಲ್ಲ: ಮೂರನೇ ವ್ಯಕ್ತಿಯಿಂದ ನೇರವಾಗಿ ದೂರು ಸ್ವೀಕರಿಸಿ ಪ್ರಮಾಣಪತ್ರ ರದ್ದುಗೊಳಿಸುವ ಕಾನೂನಾತ್ಮಕ ಅಧಿಕಾರ ಅಥವಾ ವ್ಯಾಪ್ತಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ:
ಚಿಕ್ಕೇನಹಳ್ಳಿ ಗ್ರಾಮದ ಬೈರಯ್ಯ ಅವರಿಗೆ 1977ರಲ್ಲಿ ತಹಶೀಲ್ದಾರರು 'ಕಾಡು ಕುರುಬ' (ಪರಿಶಿಷ್ಟ ಪಂಗಡ) ಜಾತಿ ಪ್ರಮಾಣಪತ್ರ ನೀಡಿದ್ದರು. ಆದರೆ, ಈ ಪ್ರಮಾಣಪತ್ರ ವಿತರಣೆಯಲ್ಲಿ ಅಕ್ರಮ ನಡೆದಿದೆ ಎಂದು ಪತ್ರಿಕೆಯೊಂದರ ಪ್ರಧಾನ ಸಂಪಾದಕರು ಸಿಆರ್‌ಇ ಸೆಲ್‌ಗೆ (CRE Cell) ದೂರು ನೀಡಿದ್ದರು. ತನಿಖಾ ವರದಿ ಆಧಾರಿಸಿ ರಾಮನಗರ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು 2021ರ ಜುಲೈ 15ರಂದು ಬೈರಯ್ಯ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿ ಆದೇಶಿಸಿತ್ತು.
ಇದೀಗ ಹೈಕೋರ್ಟ್ ಸಮಿತಿಯ ಆ ಆದೇಶವನ್ನು ರದ್ದುಗೊಳಿಸಿದ್ದು, ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಕಾನೂನುಬದ್ಧ ಸ್ವಾತಂತ್ರ್ಯ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿದೆ.



