ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೋರಾಟದ ಹಾದಿಯಲ್ಲಿ ಅರಳಿದ ಬದುಕು:
"ನನ್ನೂರು ಮತ್ತು ನಾನು" – ಒಂದು ಅನುಭವ ಕಥನ
ಬದುಕಿನಲ್ಲಿ ಆಗುಹೋಗುಗಳ ನಡುವೆ, ಸುತ್ತಮುತ್ತಲಿನವರೊಂದಿಗೆ ಜೀವಿಸುವ ಸಂದರ್ಭದಲ್ಲಿ ನಾವು ಉಚಿತವಾಗಿ ಅನುಭವಗಳ ಬುಟ್ಟಿಯನ್ನೇ ಪಡೆಯುತ್ತೇವೆ. ಅದರಲ್ಲಿ ಸುಖ-ದುಃಖಗಳು ಎದುರಾದಾಗ ಸಮಾಜವು ನಮ್ಮ ಕಣ್ಣಿಗೆ ಹೇಗೆ ತನ್ನದೇ ಆದ ರೂಪದಲ್ಲಿ ಗೋಚರಿಸುತ್ತದೆ ಎಂಬುದನ್ನು ಆತ್ಮಕಥನಗಳ ಮೂಲಕ ಅಥವಾ ಆತ್ಮಕ್ಕೆ ಸಮೀಪವಾದ ಅನುಭವ ಕಥನಗಳ ಮೂಲಕ ತಿಳಿಯಬಹುದು. ಇಂತಹ ವಿಚಾರಗಳನ್ನು ಡಾ. ಎಸ್. ಪಾರಿಜಾತ ಅವರು *"ಬಾಳ್ವೆಯ ಕೆಲವು ನುಡಿಚಿತ್ರಗಳು"* ಎಂಬ ಅನುಭವ ಕಥನಗಳ ಗುಚ್ಛದ *"ನನ್ನೂರು ಮತ್ತು ನಾನು"* ಎಂಬ ಶೀರ್ಷಿಕೆಯ ಕೃತಿಯಲ್ಲಿ ನೀಡಿದ್ದಾರೆ. ಈ ಕೃತಿಯನ್ನು ಓದಿದಾಗ ಅವರ ಅನುಭವಗಳಿಗೆ ನಾವು ತುಂಬಾ ಹತ್ತಿರವಾಗಿದ್ದೇವೆ ಎಂಬ ಭಾವನೆ ಮೂಡುತ್ತದೆ.
ಒಬ್ಬ ಹೆಣ್ಣಾಗಿ, ಕೂಡು ಕುಟುಂಬದ ಪರಿಸರದಲ್ಲಿ ಬೆಳೆದ ಇವರು, ತಮ್ಮ ಅನುಭವಗಳ ಅಧ್ಯಾಯಗಳಿಗೆ *"ಕಾಳರಾತ್ರಿಯ ದಿನಗಳು", "ಮಬ್ಬಿನಿಂದ ಮಬ್ಬಿಗೆ"* ಹಾಗೂ *"ಮುಂಬೆಳಗಿನ ಹೊಸ್ತಿಲಲ್ಲಿ"* ಎಂಬ ಶೀರ್ಷಿಕೆಗಳ ಮೂಲಕ ನುಡಿಚಿತ್ರಗಳನ್ನು ಕಟ್ಟಿಕೊಟ್ಟಿದ್ದಾರೆ.
"ಕಾಳರಾತ್ರಿಯ ದಿನಗಳು" ಎಂಬ ಅಧ್ಯಾಯದಲ್ಲಿ ಅವರು ತಮ್ಮ ಹಿನ್ನೆಲೆ, ನನ್ನೂರು, ನಮ್ಮ ಮನೆ ಎಂಬ ವಿಷಯಗಳೊಂದಿಗೆ ಶೌಚ ಮತ್ತು ಸ್ನಾನಕ್ಕೆ ಪರದಾಟ, ಬಾಲ್ಯದ ದಿನಗಳು, ಕೂಲಿ ಕೆಲಸ, ಅಪ್ಪನ ರೀತಿ-ನೀತಿಗಳು, ಸಾಲುಸಾಲಾಗಿ ಕೂಡಿ ಬಂದ ಮದುವೆಗಳು, ಅವರ ಮಾವ ಸಬ್‌ಇನ್ಸ್‌ಪೆಕ್ಟರ್ ಆಗಿದ್ದ ಸಂದರ್ಭ, ಚಿಕ್ಕತ್ತೆಯೊಂದಿಗಿನ ಒಡನಾಟ, ತಮ್ಮ ಅಕ್ಕನ ಪ್ರೀತಿ, ಬಾಲ್ಯದ ದಿನಗಳಲ್ಲಿ ಹಾಡುತ್ತಿದ್ದ ಆಟದ ಗಮ್ಮತ್ತು, ಇದೇ ಸಂದರ್ಭದಲ್ಲಿ ಮೂಡುತ್ತಿದ್ದ ಕೊಬ್ಬರಿ ಮಿಠಾಯಿಯ ಆಸೆ, ತಪ್ಪು ಮಾಡಿದ ಸಂದರ್ಭದಲ್ಲಿ ತಿಂದ ಏಟಿನ ಪ್ರಸಂಗ, ಮನೆ ರಿಪೇರಿಗೆ ಬಂದಿದ್ದ ಸೋದರಮಾವಂದಿರು, ಶಾಲೆಗೆ ಸೇರಿದ ಕ್ಷಣಗಳು, ಕೊನೆಯಲ್ಲಿ ತಮ್ಮ ಹೆಸರಿನ ಗೊಂದಲ, ಆಟ-ಪಾಠ, ಬಾರೆಹಣ್ಣು ತಿನ್ನುವ ಆಸೆ, ಶಾಲೆಯಲ್ಲಿ ಶಿಕ್ಷಕರ ಪ್ರೀತಿ, ಕಷ್ಟಕಾಲದಲ್ಲಿ ದೊರೆತ ವಿದ್ಯಾರ್ಥಿವೇತನ, ಪ್ರಾಥಮಿಕ ಶಾಲೆ ಮುಗಿಸಿ ಪ್ರೌಢಶಾಲೆಗೆ ಪ್ರವೇಶ ಪಡೆದದ್ದು, ಅಲ್ಲಿ ಎದುರಾದ ಮಧ್ಯಾಹ್ನದ ಊಟದ ಸಮಸ್ಯೆ ಹಾಗೂ ಮನೆ ಮತ್ತು ಶಾಲೆಗೆ ನಡೆದುಕೊಂಡು ಹೋಗುವ ದಿನಗಳಲ್ಲಿ ಉಂಟಾದ ಭೀತಿ, ಅಧ್ಯಾಪಕರೊಂದಿಗಿನ ಒಡನಾಟ, ಗುರು-ಶಿಷ್ಯರ ಸಂಬಂಧ, ಉತ್ತಮ ವಿದ್ಯಾರ್ಥಿಯಾಗಿ ಬದುಕಿದ ದಿನಗಳು, ಬದುಕಿನ ರೀತಿ-ನೀತಿಗಳನ್ನು ಅಳವಡಿಸಿಕೊಂಡ ಸಂದರ್ಭಗಳು ಹಾಗೂ ಹಸಿವು ನೀಗಿಸಿದ ತಾಯಿಯನ್ನು ಕಂಡ ದಿನಗಳು ಹೀಗೆ ಹಲವು ಅನುಭವಗಳನ್ನು ದಾಖಲಿಸಿದ್ದಾರೆ.
ಹೀಗೆ ಹಲವು ದಿನಗಳು, ಹಲವು ಅನುಭವಗಳು, ಮರೆಯಲಾಗದ ಕ್ಷಣಗಳು ಹಾಗೂ ಸದಾ ನೆನಪಿನಲ್ಲಿ ಉಳಿಯುವ ಕಷ್ಟದ ದಿನಗಳನ್ನು ಅವರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಸ್ಕಾರಯುತವಾಗಿ ಶಾಲೆಗೆ ಮತ್ತು ಮನೆಗೆ ನಡೆದುಕೊಂಡು ಹೋದ ಸಂದರ್ಭಗಳು, ಶಾಲೆ ದೂರವಿದ್ದರೂ, ಮನೆಯವರೆಲ್ಲರೂ ಕಷ್ಟದಲ್ಲಿದ್ದರೂ ಶಿಕ್ಷಣವನ್ನು ಬಿಡದೆ ಮುಂದುವರಿಸಿದ ಕ್ಷಣಗಳು ಹೀಗೆ ಎಲ್ಲ ಪ್ರಮುಖ ಅನುಭವಗಳನ್ನು ಕಣ್ಣಾರೆ ಕಂಡಂತೆ ನಮ್ಮ ಮುಂದೆ ಚಿತ್ರಿಸಿದ್ದಾರೆ. ಇದು ಸಾಮಾನ್ಯ ವಿಷಯವೆಂದು ಅನಿಸಿದರೂ, ಒಬ್ಬ ಹೆಣ್ಣಿನ ಜೀವನದ ಹೋರಾಟದ ಮಹತ್ತರ ಸಾಧನೆಯಾಗಿ ಕಾಣುತ್ತದೆ.
"ಮಬ್ಬಿನಿಂದ ಮಬ್ಬಿಗೆ" ಎಂಬ ಅಧ್ಯಾಯದಲ್ಲಿ ಅವರು ಪಿಯುಸಿಗೆ ಸೇರಿದ ಸಂದರ್ಭವನ್ನು ವಿವರಿಸಿದ್ದಾರೆ. ಕಾಲಿಗೆ ಚಪ್ಪಲಿಯೂ ಇಲ್ಲದ ಸಂದರ್ಭದಲ್ಲಿ, ಕಡುಬಡತನದ ನಡುವೆಯೂ ಪ್ರತಿನಿತ್ಯ ಬಸ್ಸಿನಲ್ಲಿ ಪ್ರಯಾಣಿಸಿ ಪಿಯುಸಿ ಶಿಕ್ಷಣವನ್ನು ಮುಗಿಸಿದ ಸಂದರ್ಭ, ಇದೇ ಸಂದರ್ಭದಲ್ಲಿ ಅವರ ತಂದೆಗೆ ಎದುರಾದ ತೊಂದರೆ, ಅದರೊಂದಿಗೆ ಅವರ ಅಕ್ಕನ ಮದುವೆ ಕೂಡಿ ಬಂದ ಕ್ಷಣಗಳು, ಇಂಗ್ಲಿಷ್ ಎಂಬ ಮಹಾಭೂತದ ಕಾಟ, ಪಠ್ಯಪುಸ್ತಕಗಳಿಗಾಗಿ ಪಟ್ಟ ಪರದಾಟ, ಮನೆಗೆಲಸ ಮಾಡಿಕೊಂಡು ಸಾಗಿಸಿದ ಜೀವನ, ಜೋಳದ ಮುದ್ದೆಯ ಸಂದರ್ಭ, ಹೊಲದಲ್ಲಿ ದುಡಿಯುತ್ತಲೇ ಶಿಕ್ಷಣ ಮುಂದುವರಿಸಿದ ರೀತಿ ಇವೆಲ್ಲವನ್ನೂ ವಿವರಿಸಿದ್ದಾರೆ.
ಇದರ ನಡುವೆಯೂ ಪದವಿ ಹಂತಕ್ಕೆ ಬಂದು ಪದವಿ ವಿದ್ಯಾಭ್ಯಾಸಕ್ಕೆ ಸೇರಿದ ಆ ಕ್ಷಣಗಳು, ಅಲ್ಲಿ ನಡೆದ ಒಂದೊಂದು ಪ್ರಸಂಗಗಳು, ಓದುವ ಹುಚ್ಚು, ತಮ್ಮ ಉಪನ್ಯಾಸಕರೊಂದಿಗಿದ್ದ ಓದುವ ಹಂಬಲ ಮತ್ತು ಆಸಕ್ತಿ, ಅದರಲ್ಲಿಯೂ ಸಾಹಿತ್ಯದ ಬಗ್ಗೆ ಹೊಂದಿದ್ದ ಒಲವು, ಶೇಂಗಾ ಬಿತ್ತನೆಯ ಪ್ರಸಂಗ, ಕೂಲಿಗೆ ಹೋಗಿ ಪದವಿ ಮುಗಿಸಿದ ಕ್ಷಣ, ಅವರ ಅಣ್ಣನ ಮದುವೆ ಹಾಗೂ ಅವರ ಮದುವೆಯ ಪ್ರಸ್ತಾಪ ಬಂದ ಕ್ಷಣಗಳು, ಆಸ್ತಿಯ ವಿವಾದದಿಂದ ಉಂಟಾದ ನೋವುಗಳು ಮತ್ತು ವಿರೋಧಿಗಳು ಮಾಡುತ್ತಿದ್ದ ಕುತಂತ್ರಗಳು ಇವೆಲ್ಲವನ್ನೂ ಈ ಅಧ್ಯಾಯದಲ್ಲಿ ನುಡಿಚಿತ್ರಗಳ ರೂಪದಲ್ಲಿ ಚಿತ್ರಿಸಿದ್ದಾರೆ.
ಮೂರನೆಯ ಅಧ್ಯಾಯವಾದ "ಮುಂಬೆಳಗಿನ ಹೊಸ್ತಿಲಲ್ಲಿ" ಎಂಬ ಭಾಗದಲ್ಲಿ ಅವರು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದ ಸಂದರ್ಭದಲ್ಲಿ ಎದುರಾದ ವಸತಿ ಸಮಸ್ಯೆ, ಗೆಳತಿಯರ ಪ್ರೀತಿ, ನಡೆದ ಒಂದೊಂದು ಘಟನೆಗಳು, ಕಷ್ಟದ ಸಮಯದಲ್ಲಿ ಪಾಪಯ್ಯ ಮಾವನ ನೆರವು, ಹೆಣ್ಣು ಎಂಬ ಕಾರಣಕ್ಕೆ ತಂಟೆಗೆ ಬರುತ್ತಿದ್ದ ಪುಂಡರು, ಜೀವವನ್ನು ಭಯದಲ್ಲಿಯೇ ಇಟ್ಟುಕೊಂಡು ನಡೆದಾಡಿದ ದಿನಗಳು, ಖಾಸಗಿ ಬಸ್ಸುಗಳ ಚಾಲಕರು ನೀಡುತ್ತಿದ್ದ ಧೈರ್ಯ ಇವೆಲ್ಲವನ್ನೂ ವಿವರಿಸಿದ್ದಾರೆ.
ಇವೆಲ್ಲದರ ನಡುವೆಯೂ ಪಿಎಚ್.ಡಿ ಅಧ್ಯಯನಕ್ಕೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಎದುರಾದ ಸೀಟುಗಳ ಕೊರತೆ, ನಡುವೆ ಬಂದ ಕೊರೊನಾ ದಿನಗಳು, ಇದೆಲ್ಲದರ ನಡುವೆಯೂ ವಿಷಮಶೀತ ಜ್ವರಕ್ಕೆ ತುತ್ತಾಗಿದ್ದು, ಪಿಎಚ್.ಡಿ. ಅಧ್ಯಯನಕ್ಕಾಗಿ ಹಂಪಿ ವಿಶ್ವವಿದ್ಯಾಲಯಕ್ಕೆ ಸೇರಿದ ಸಂದರ್ಭ, ಈ ಘಳಿಗೆಯಲ್ಲಿ ತಂದೆಯ ಸಾವು, ಹಾಸ್ಟೆಲ್‌ನ ಆಹಾರದ ಪರಿಣಾಮ, ಇವೆಲ್ಲದರ ನಡುವೆಯೂ ಸಮರ್ಥವಾಗಿ ಅಕ್ಷರ ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಂಡ ಮಧುರ ಕ್ಷಣಗಳು, ಸಾಹಿತ್ಯ ಶಿಬಿರಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡ ಸಂದರ್ಭಗಳು ಹೀಗೆ ಹಲವು ಅನುಭವಗಳನ್ನು ದಾಖಲಿಸಿದ್ದಾರೆ. ಈ ಎಲ್ಲಾ ಕಷ್ಟ-ಸುಖಗಳನ್ನು ಸಹಿಸಿಕೊಂಡು, ಹೊಂದಿಕೊಂಡು, ಹೋರಾಟದ ಹಾದಿಯಲ್ಲಿ ಸಾಗಿದಾಗ ಭಾಗ್ಯದ ಬಾಗಿಲುಗಳು ತೆರೆದಂತಹ ಸಂದರ್ಭಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ಕೃತಿಯ ಆಶಯ ಮತ್ತು ವಿಮರ್ಶಾತ್ಮಕ ನೋಟ:
ಹೀಗೆ ಈ ಕೃತಿಯ ಲೇಖಕರು, ಹೆಚ್ಚಿನದಾಗಿ ಹೆಣ್ಣು ಎಂಬ ಕಾರಣಕ್ಕೆ ಪ್ರಸ್ತುತ ಸಮಾಜವು ಹೇಗೆಲ್ಲ ನಡೆದುಕೊಳ್ಳುತ್ತಿದೆ ಎಂಬ ನೈಜ ಚಿತ್ರಣವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಇದು ಕೇವಲ ನಡೆದ ಪ್ರಸಂಗಗಳಲ್ಲ, ಸಂದರ್ಭಗಳಲ್ಲ ಅಥವಾ ಕ್ಷಣಗಳಲ್ಲ; ಒಂದು ಪ್ರಜ್ಞಾವಂತ ಸಮಾಜವು ಹೇಗೆ ಜೀವಿಸುತ್ತಿದೆ ಎಂಬುದರ ಪ್ರತಿಬಿಂಬವೂ ಹೌದು. ಇಂದು ಒಬ್ಬ ಹೆಣ್ಣಿಗೆ ಇಂತಹ ಪರಿಸ್ಥಿತಿ ಎದುರಾಗಿದೆ ಎಂದಾದರೆ, ನಮ್ಮ ಕಣ್ಣಿಗೆ ಕಾಣದ ಇನ್ನೆಷ್ಟು ಹೆಣ್ಣು ಜೀವಗಳ ರೋಧನೆಗಳು, ಕಷ್ಟಗಳು ಮೃಗೀಯ ಸಮಾಜದ ನಡುವೆ ಸಿಲುಕಿಕೊಂಡಿರಬಹುದು ಎಂಬ ದಿಟ್ಟ ಚಿತ್ರಣವನ್ನು ಈ ಕೃತಿಯು ನಮ್ಮ ಮುಂದೆ ತೆರೆದಿಡುತ್ತದೆ.
ಈ ಕೃತಿಯನ್ನು ಆರಂಭದಲ್ಲಿ ಓದಲು ಪ್ರಾರಂಭಿಸಿದರೆ, ಅದು ಮುಂದಿನ ಹಂತದಲ್ಲಿ ತನ್ನನ್ನು ತಾನೇ ಓದಿಸಿಕೊಳ್ಳುವ ಗುಣವನ್ನು ಹೊಂದಿದೆ. ಯಾಕೆಂದರೆ ಇದರಲ್ಲಿ ಬಣ್ಣ ಹಚ್ಚಿದ ಕಥೆಗಳಿಲ್ಲ; ನೈಜವಾಗಿ ಕಂಡಂತಹ, ಅನುಭವಿಸಿದಂತಹ ಘಟನೆಗಳೇ ಜೀವಂತವಾಗಿ ಮೂಡಿಬಂದಿರುವುದು ಈ ಕೃತಿಯ ಪ್ರಮುಖ ಅಂಶವಾಗಿದೆ.
ಲೇಖನ: ಪಾಲಯ್ಯ ಜಿ, ಕೋನಸಾಗರ




