ಚಂದ್ರವಳ್ಳಿ ನ್ಯೂಸ್, ಕೊಪ್ಪಳ:
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೂತನ ಅಧಿಕೃತ ನಿವಾಸದ ಗೃಹಪ್ರವೇಶ ಹಾಗೂ ಔತಣಕೂಟದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡಿರುವುದು ರಾಜ್ಯ ರಾಜಕೀಯದಲ್ಲಿ ವಾಕ್ಸಮರಕ್ಕೆ ಕಾರಣವಾಗಿದೆ.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನವೆಂಬರ್ 19 ರಂದು ನೂತನ ಅಧಿಕೃತ ನಿವಾಸ 'ಗಂಗಾ'ದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷಾತೀತವಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಜನಾರ್ದನ ರೆಡ್ಡಿ, ಎಸ್.ಆರ್. ವಿಶ್ವನಾಥ್, ಕೆ. ಗೋಪಾಲಯ್ಯ ಸೇರಿದಂತೆ ಹಲವು ಬಿಜೆಪಿ ಶಾಸಕರು ಭಾಗವಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಬಿ.ವೈ. ವಿಜಯೇಂದ್ರ, "ಸಿಎಂ ಆಯೋಜಿಸಿದ್ದ ಔತಣಕೂಟದಲ್ಲಿ ನಮ್ಮ ಪಕ್ಷದ ಶಾಸಕರು ಭಾಗಿಯಾಗಿರುವುದನ್ನು ನಾನು ವೈಯಕ್ತಿಕವಾಗಿ ಒಪ್ಪುವುದಿಲ್ಲ" ಎಂದು ಅಸಮಾಧಾನ ಹೊರಹಾಕಿದ್ದರು.
ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಗಾಲಿ ಜನಾರ್ದನ ರೆಡ್ಡಿ, "ಔತಣಕೂಟಕ್ಕೆ ಹೋಗಬಾರದು ಎಂದು ರಾಜ್ಯಾಧ್ಯಕ್ಷರು ಮೊದಲೇ ಸೂಚನೆ ನೀಡಿದ್ದರೆ ನಾವ್ಯಾರೂ ಹೋಗುತ್ತಿರಲಿಲ್ಲ. ನಾನೊಬ್ಬ ಶಾಸಕನಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಗೃಹಪ್ರವೇಶದಲ್ಲಿ ಬಹಿರಂಗವಾಗಿ ಪಾಲ್ಗೊಂಡಿದ್ದೇನೆಯೇ ಹೊರತು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, "ನಾನು ಬೇರೆಯವರಂತೆ ಕತ್ತಲಲ್ಲಿ ಅಥವಾ ಹಿಂಬಾಗಿಲಿನಿಂದ ಹೋಗಿ ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವ ರಾಜಕಾರಣಿಯಲ್ಲ; ನೇರವಾಗಿ ರಾಜಕಾರಣ ಮಾಡುವವನು" ಎಂದು ವಿಜಯೇಂದ್ರ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.




