ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದೆಲ್ಲೆಡೆ ಶನಿವಾರದಂದು ಪವಿತ್ರ ತುಳಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ತೀಕ ಮಾಸದ ಶುಕ್ಲ ಪಕ್ಷದ ದ್ವಾದಶಿ ಅಂಗವಾಗಿ ಹಿಂದೂ ಧಾರ್ಮಿಕತೆಯ ಸಂಕೇತವಾದ ತುಳಸಿ ಗಿಡಕ್ಕೆ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ತುಳಸಿ ಹಬ್ಬವನ್ನು ಅತ್ಯಂತ ವೈಭವದಿಂದ ಆಚರಿಸಿದರು.ತುಳಸಿ ಹಬ್ಬಕ್ಕೆ ತನ್ನದೇ ಆದ ಐತಿಹ್ಯವಿದೆ. ಪುರಾಣಗಳಲ್ಲಿ ತುಳಸಿ ಹಬ್ಬವನ್ನು ತುಳಸಿ ಪರಿಣಯ ಎಂತಲೂ ಕರೆಯುತ್ತಾರೆ.
ತುಳಸಿ ದೇವಿ ವಿಷ್ಣುವಿನ ಅವತಾರವಾದ ಸಾಲಿಗ್ರಾಮದ ಜೊತೆ ವಿವಾಹವಾದ ದಿನವೆಂದು ನಂಬಲಾಗಿದೆ. ಜೊತೆಗೆ ತುಳಸಿ ದೇವಿಯನ್ನು ಮಹಾಲಕ್ಷ್ಮಿ ಅಪರಾವತಾರವೆಂದು ಬಹು ಮುಖ್ಯವಾಗಿ ತುಳಸಿ ದೇವಿ ಶ್ರೀ ವಿಷ್ಣುವಿನ ಸಂಬಂಧವನ್ನು ಸ್ಮರಿಸುವ ಹಬ್ಬವಾಗಿದೆ.
ತುಳಸಿ ಹಬ್ಬ ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳಿಗೆ ಅತ್ಯಂತ ಪ್ರಿಯವಾದ ಹಬ್ಬವೆನ್ನುವ ಪ್ರತೀತಿ ಇದೆ. ಹಬ್ಬದಂದು ಮಹಿಳೆಯರು ಮನೆಯ ಅಂಗಳದಲ್ಲಿರುವ ತುಳಸಿ ಬೃಂದಾವನವನ್ನು ಸ್ವಚ್ಛ ಗೊಳಿಸಿ ರಂಗೋಲಿ ಚಿತ್ತಾರವ ಬಿಡಿಸಿ ಹರಿಶಿನ ಕುಂಕುಮ ಲೇಪಿಸಿ ನೆಲ್ಲಿಕಾಯಿ ಸೊಪ್ಪನ್ನಿಟ್ಟು ದೀಪಗಳಿಂದ ಅಲಂಕರಿಸಿ ಪೂಜಿಸುತ್ತಾರೆ.
ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಬಾಗಗಳಲ್ಲಿ ತುಳಸಿ ಹಬ್ಬದ ಸಡಗರ ಜೋರಾಗಿತ್ತು. ವಿಶೇಷವಾಗಿ ತುಳಸಿ ಹಬ್ಬಕ್ಕೆ ಗೃಹಿಣಿಯನ್ನು ಆಹ್ವಾನಿಸಿ ಅರಿಶಿಣ ಕುಂಕುಮ ಪ್ರಸಾದವನ್ನು ನೀಡಿ ಸತ್ಕರಿಸುವ ದೃಶ್ಯ ಮನೆ ಮನೆಗಳಲ್ಲಿ ಕಾಣುತ್ತಿತ್ತು. ಒಟ್ಟಾರೆ ತುಳಸಿ ಹಬ್ಬ ಹೆಣ್ಣು ಮಕ್ಕಳ ಹಾಗೂ ಗೃಹಿಣಿಯರ ಸಂಭ್ರಮದ ಹಬ್ಬವೆಂತಲೆ ಹೇಳಬಹುದು.




