ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಆಟೋ ಸ್ಟ್ಯಾಂಡ್ ಚಾಲಕರ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯವಾದಿ ಎಂ.ಡಿ. ನಾಗಣ್ಣ ಅವರು, ಕನ್ನಡ ನಾಡು, ನೆಲ, ಜಲ ಹಾಗೂ ಭಾಷೆಯ ಮಹತ್ವವನ್ನು ಸ್ಮರಿಸಿದರು.
ಈ ನಾಡಿಗಾಗಿ ಅನೇಕ ಕವಿಗಳು, ಕನ್ನಡ ಹೋರಾಟಗಾರರು ಹಾಗೂ ಸಾಧಕರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, "ಆಟೋ ಚಾಲಕರ ವೃತ್ತಿ ಅತ್ಯಂತ ಗೌರವಯುತವಾದದ್ದು. ಇದು ಕೇವಲ ದುಡಿಮೆಯ ವೃತ್ತಿಯಲ್ಲ, ಬದಲಾಗಿ ಇದೊಂದು ಸಮಾಜ ಸೇವೆಯ ವೃತ್ತಿಯಾಗಿದೆ. ಸಮಾಜ ಸೇವೆಯಲ್ಲಿ ಆಟೋ ಚಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಕನ್ನಡ ಉಳಿವಿಗೂ ಇವರ ಪಾತ್ರ ಬಹಳ ಮುಖ್ಯವಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಜಿ.ಕೆ. ಮಂಜುನಾಥ್, ಎನ್. ತಿಮ್ಮಣ್ಣ ಸೇರಿದಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಚಾಲಕರು ಉಪಸ್ಥಿತರಿದ್ದರು.




