ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಮೂಲಸೌಕರ್ಯ, ರೈಲ್ವೆ ಮತ್ತು ಇಂಧನ ಕ್ಷೇತ್ರಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಮೂಲಕ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು-ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್: ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ವೇಗಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಈ ರೈಲು ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸಲಿದ್ದು, ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಲಿದೆ.
ರೈಲ್ವೆ ಮೂಲಸೌಕರ್ಯಕ್ಕೆ ಹೊಸ ರೂಪ: ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ನವೀಕರಣಗೊಂಡ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳನ್ನು ಉದ್ಘಾಟಿಸಲಾಯಿತು. ಇದರೊಂದಿಗೆ, ಅತ್ಯಂತ ಸವಾಲಿನ 55 ಕಿ.ಮೀ. ಉದ್ದದ ಶಿರಾಡಿ ಘಾಟ್ (ಸಕಲೇಶಪುರ-ಸುಬ್ರಹ್ಮಣ್ಯ ರೋಡ್) ರೈಲು ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇಡೀ ಬೆಂಗಳೂರು-ಮಂಗಳೂರು ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡಂತಾಗಿದೆ. ಅಲ್ಲದೆ, 45 ಕಿ.ಮೀ. ಬಾಗಲಕೋಟೆ-ವಂಡಾಲ್ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯನ್ನೂ ರಾಷ್ಟ್ರಕ್ಕೆ ಸಮರ್ಪಿಸಲಾಯಿತು.
ಭೂಗತ ಎಲ್ಪಿಜಿ ಶೇಖರಣೆ ಮತ್ತು ಪೆಟ್ರೋಲಿಯಂ ಟರ್ಮಿನಲ್: ಮಂಗಳೂರಿನಲ್ಲಿ 850 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 80,000 ಮೆಟ್ರಿಕ್ ಟನ್ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಶೇಖರಣಾ ಕೇವರ್ನ್ ಹಾಗೂ ಬೆಂಗಳೂರಿನ ದೇವನಗೊಂದಿಯಲ್ಲಿ 330 ಕೋಟಿ ರೂ. ವೆಚ್ಚದ ಎಂಆರ್ಪಿಎಲ್ ಮಾರ್ಕೆಟಿಂಗ್ ಟರ್ಮಿನಲ್ ಅನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದರು.
ತ್ಯಾಜ್ಯದಿಂದ ಜೈವಿಕ ಅನಿಲ: ಬೆಂಗಳೂರಿನ ಹರಳಕುಂಟೆಯಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಗೇಲ್ ಸಂಸ್ಥೆ ನಿರ್ಮಿಸುತ್ತಿರುವ ಸಂಕೋಚಿತ ಜೈವಿಕ ಅನಿಲ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಇದು ಪ್ರತಿದಿನ 300 ಟನ್ ಹಸಿ ತ್ಯಾಜ್ಯವನ್ನು ಸಂಸ್ಕರಿಸಿ 12.6 ಟನ್ ಶುದ್ಧ ಜೈವಿಕ ಅನಿಲ ಉತ್ಪಾದಿಸಲಿದೆ.
ಹಸಿರು ಇಂಧನ ಕ್ರಾಂತಿ: ಕೊಪ್ಪಳ-II ಮತ್ತು ಗದಗ-II (4,450 ಕೋಟಿ ರೂ.) ಹಾಗೂ ಬೀದರ್ನ ಸೌರ ವಿದ್ಯುತ್ ವಲಯದ ಪ್ರಸರಣ ಯೋಜನೆಗಳನ್ನು (1,370 ಕೋಟಿ ರೂ.) ಉದ್ಘಾಟಿಸಲಾಯಿತು.
ಜೊತೆಗೆ ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ನವೀಕರಿಸಬಹುದಾದ ಇಂಧನ ಪ್ರಸರಣ ವ್ಯವಸ್ಥೆ ಬಲವರ್ಧನೆಗಾಗಿ ಒಟ್ಟು 4,550 ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.




