ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮನುಷ್ಯನ ಶ್ರೇಷ್ಠತೆ ಆತನ ಹುಟ್ಟಿನಿಂದ ನಿರ್ಧಾರವಾಗುವುದಿಲ್ಲ, ಆತನ ಗುಣ ಜ್ಞಾನ ನಡತೆ ಮತ್ತು ಸಾಧನೆಯಿಂದ ನಿರ್ಧಾರವಾಗುತ್ತದೆ ಎಂದು ಆಡಳಿತಾಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದರು.
ಭೀಮನಬಂಡೆ ಸಮೀಪದ ಯಾಜ್ಞವಲ್ಕ್ಯ ಪದವಿ ಪೂರ್ವ ಕಾಲೇಜಿನಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಕಾರ್ಯಕ್ರಮ ಉದ್ಘಾಟಿಸಿ, ನಾವು ಕನಕದಾಸರ ಭಕ್ತರಾಗುವುದಕ್ಕಿಂತ ಮೊದಲು ಅವರು ಬಯಸಿದ ಸಮಾನತೆಯ ಸಮಾಜದ ನಿರ್ಮಾತೃಗಳಾಗೋಣ ಅದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದರು.
ಜಾತಿಯಿಂದ ಯಾರೂ ಶ್ರೇಷ್ಟರಾಗುವುದಿಲ್ಲ, ಜ್ಞಾನ ಗುಣ ಮತ್ತು ಮಾನವೀಯತೆಯಿಂದ ಶ್ರೇಷ್ಠರಾಗುತ್ತಾರೆ. ಅಂಕಗಳು ನಿಮ್ಮ ಶೈಕ್ಷಣಿಕ ಸಾಧನೆಗಳನ್ನು ತಿಳಿಸಿದರೆ ನಿಮ್ಮ ನಡತೆ ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಕನಕದಾಸರ ವಚನಗಳ ಮೂಲಕ ದಾಸ ಶ್ರೇಷ್ಠರ ಜೀವನ ಕುರಿತ ವಿಷಯಗಳನ್ನು, ಅವರ ಬದುಕಿನ ಮೌಲ್ಯಗಳನ್ನು ಹಾಗೂ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಎದುರಿಸುವ ಪರೀಕ್ಷೆಗಳ ತಯಾರಿಕೆಯ ಹಂತಗಳನ್ನು ಪ್ರಾಂಶುಪಾಲ ಶಿವಾನಂದ್ ಹಂಚಿಕೊಂಡರು.
ಉಪನ್ಯಾಸಕ ವರದೇಗೌಡ ಕಾರ್ಯಕ್ರಮ ನಿರೂಪಿಸಿದರು, ಉಪನ್ಯಾಸಕಿ ನೇತ್ರಾವತಿ ಸ್ವಾಗತಿಸಿ, ಉಪನ್ಯಾಸಕ ಹರ್ಷ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನರಸಿಂಹಮೂರ್ತಿ, ಸುರೇಶ್, ಅಭಿಷೇಕ್, ಹರ್ಷಿತಾ, ಸುಗುಣ, ಅನುಷಾ, ಮಹಾಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




