ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಭಾರತ ನಮ್ಮ ಮಾತೃ ಭೂಮಿ. ಈ ವರ್ಷ ನಮ್ಮ ಭಾರತ ದೇಶಕ್ಕೆ ಎಂಬತ್ತನೇ ಸ್ವಾತಂತ್ರ್ಯ ದಿನದ ಸಂಭ್ರಮ. ಎಲ್ಲರು ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಪಿ.ಉಮೇಶ್ ಹೇಳಿದರು.
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹರ್ ಘರ್ ತಿರಂಗ ಘರ್ ಘರ್ ತಿರಂಗ ಅಭಿಯಾನದಿ ಮಾತನಾಡಿದ ಅವರು ತ್ರಿವರ್ಣ ಧ್ವಜ ನಮ್ಮ ಹಿರಿಯರ ತ್ಯಾಗ ಶ್ರಮ ಬಲಿದಾನಗಳ ಹೆಗ್ಗುರುತು. ಅದಕ್ಕೆ ಯಾವತ್ತು ಅಗೌರವ ತೋರಬಾರದು. ಧ್ವಜ ದೇಶದ ಸ್ವಾತಂತ್ರ್ಯದ ಪ್ರತೀಕ ಹಾಗು ದೇಶವಾಸಿಗಳ ಏಕತೆ ಸಮೃದ್ಧಿ ಹಾಗು ಪ್ರಗತಿಯ ಸಂಕೇತ. ನಮ್ಮೆಲ್ಲರ ಆತ್ಮಾಭಿಮಾನವೇ ತ್ರಿವರ್ಣ ಧ್ವಜದಲ್ಲಿ ಕಂಗೊಳಿಸುತ್ತದೆ. ನೂರಾರು ಜಾತಿ ಮತ ಧರ್ಮದ ನಾವೆಲ್ಲ ತಿರಂಗ ಧ್ವಜದಡಿ ಸಮಾನರಾಗಿ ಜೀವಿಸುತ್ತಿದ್ದೇವೆ. ಯಾವತ್ತು ದೇಶದ ಗೌರವ ಹಾಗು ಘನತೆ ಹೆಚ್ಚಿಸಲು ನಾವೆಲ್ಲರು ಶ್ರಮಿಸೋಣ. ದೇಶಾಭಿಮಾನಿಗಳಾಗಿ ನಮ್ಮ ಮಕ್ಕಳನ್ನು ದೇಶದ ಸತ್ಪ್ರಜೆಗಳಾಗಿಸೋಣ. ದೇಶ ನಮಗೆ ಭದ್ರತೆ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ಸ್ವಾತಂತ್ರ್ಯ ಸಮಾನತೆ, ಸ್ವಾಭಿಮಾನ ನೀಡಿದೆ ಎಂದು ಹೇಳಿ ವಿದ್ಯಾರ್ಥಿಗಳ ಜೊತೆಗೆ ಗ್ರಾಮಸ್ಥರಿಗೆ ತ್ರಿವರ್ಣ ಧ್ವಜದ ಮಹತ್ವ ಹಾಗು ದೇಶದ ಸ್ವಾತಂತ್ರ್ಯದ ಇತಿಹಾಸವನ್ನು ತಿಳಿಸಿದರು.
ಹರ್ ಘರ್ ತಿರಂಗ ಘರ್ ಘರ್ ತಿರಂಗ ಜಾಥ ಅಭಿಯಾನದಲ್ಲಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾರಾದ ಅಮೃತಾಪುರ ಸಿ.ಮಹಲಿಂಗಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಟಿ.ಗೋವಿಂದಪ್ಪ, ಸದಸ್ಯರಾದ ಕಾಂತರಾಜ, ತಿಮ್ಮಮ್ಮ ಸಹಶಿಕ್ಷಕಿ ರೇಷ್ಮಾ, ಅಂಗನವಾಡಿ ಶಿಕ್ಷಕಿ ರಾಧಾ, ಸುಮ, ಪವಿತ್ರ, ಶಿಲ್ಪ ಗ್ರಾಮಸ್ಥರಾದ ರಾಮಪ್ಪ, ಆನಂದ, ನಂದ್ಯಪ್ಪ, ಕೆಂಚಪ್ಪ, ಪನ್ನೇಶ, ತಿಮ್ಮಕ್ಕ, ಶಾರದಮ್ಮ ಮತ್ತು ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲರು ರಾಷ್ಟ್ರಗೀತೆ ಹಾಗು ದೇಶಭಕ್ತಿಗೀತೆ ಹಾಡಿ ಸ್ವಾತಂತ್ರ್ಯ ಹೋರಾಟಗಾರರ ಘೋಷಣೆ ಕೂಗಿದರು.



