ಚಂದ್ರವಳ್ಳಿ ನ್ಯೂಸ್, ತುಮಕೂರು:
ಬಿಜೆಪಿ ಹಮ್ಮಿಕೊಂಡಿರುವ 'ಸೇವಾ ಸಂಕಲ್ಪ ಅಭಿಯಾನ'ದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿರುವ 'ಬೂತ್ ವಿಜಯ ಸಂಕಲ್ಪ ಯಾತ್ರೆ'ಯ ಭಾಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸದ ವೇಳೆ ಗುಬ್ಬಿ ಕ್ಷೇತ್ರದ ಜುಂಜಪ್ಪನ ಹಟ್ಟಿಯಲ್ಲಿರುವ ಪವಿತ್ರ ಜುಂಜಪ್ಪನ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಅವರು, ದೇವರಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ನಾಡಿನ ಕ್ಷೇಮಕ್ಕಾಗಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ವನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ಬಸವರಾಮಾನಂದ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ದೇವಾಲಯ ದರ್ಶನದ ನಂತರ ಸ್ಥಳೀಯ ಕಾಡುಗೊಲ್ಲ ಸಮುದಾಯದ ಪ್ರಮುಖರು ಮತ್ತು ಬಂಧುಗಳನ್ನು ಭೇಟಿಯಾದ ವಿಜಯೇಂದ್ರ ಅವರು, ಅವರ ಕುಂದುಕೊರತೆಗಳು, ಸವಾಲುಗಳು ಹಾಗೂ ಆಶೋತ್ತರಗಳನ್ನು ಆತ್ಮೀಯವಾಗಿ ಆಲಿಸಿದರು. ಕಾಡುಗೊಲ್ಲ ಸಮುದಾಯದ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಬಿಜೆಪಿ ಪಕ್ಷವು ಸದಾ ಬದ್ಧವಾಗಿದೆ ಎಂದು ಇದೇ ವೇಳೆ ಅವರು ಪುನರುಚ್ಚರಿಸಿದರು.
ನಂತರ ನೆರೆದಿದ್ದ ಸ್ಥಳೀಯರು ಹಾಗೂ ಸಾರ್ವಜನಿಕರ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳು, ಜನಪರ ಸೇವೆಗಳು ಹಾಗೂ 'ವಿಕಸಿತ ಭಾರತ'ದ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪ್ರತಿಯೊಬ್ಬರ ಕರ್ತವ್ಯದ ಕುರಿತು ಬೆಳಕು ಚೆಲ್ಲಿದರು.
ಈ ಕಾರ್ಯಕ್ರಮದಲ್ಲಿ ಶಾಸಕರುಗಳಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ಮಾಜಿ ಶಾಸಕ ಮಸಾಲ ಜಯರಾಮ್, ಮಾಜಿ ವಿಧಾನಪರಿಷತ್‌ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್, ಕಾರ್ಯದರ್ಶಿ ವಿನಯ್ ಬಿದ್ರೆ, ಗುಬ್ಬಿ ತಾಲೂಕು ಅಧ್ಯಕ್ಷ ದಿಲೀಪ್ ಕುಮಾರ್, ದೇವಾಲಯದ ಪ್ರಧಾನ ಅರ್ಚಕರಾದ ಈರಪ್ಪ, ಜಿಲ್ಲೆಯ ಹಲವು ಪ್ರಮುಖ ನಾಯಕರು, ಪದಾಧಿಕಾರಿಗಳು ಹಾಗೂ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.




