ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಹಾಗೂ ಬರಗಾಲದ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಒತ್ತಾಯಿಸಿದ್ದಾರೆ.
ದೇವೇಗೌಡರ ಪತ್ರದ ಪ್ರಮುಖಾಂಶಗಳು: ಕುಡಿಯುವ ನೀರಿಗೆ ಆದ್ಯತೆ: 2026ರಲ್ಲಿ ಕೇವಲ ಶೇ.60ರಷ್ಟು ಮಳೆಯಾಗಿದ್ದು, ಜಲಾಶಯಗಳು ಅರ್ಧದಷ್ಟು ಮಾತ್ರ ತುಂಬಿವೆ. ಬೆಂಗಳೂರು ಸುತ್ತಮುತ್ತಲಿನ ಕುಡಿಯುವ ನೀರಿನ ಅಗತ್ಯಕ್ಕಾಗಿ ನೀರು ಕಾಯ್ದಿರಿಸಬೇಕಿರುವುದರಿಂದ, ತಮಿಳುನಾಡಿಗೆ ನೀರು ಬಿಡುವಂತೆ ಪದೇ ಪದೇ ನೀಡುತ್ತಿರುವ ಸೂಚನೆ ಆತಂಕಕಾರಿಯಾಗಿದೆ. ರಾಷ್ಟ್ರೀಯ ಜಲನೀತಿಯಂತೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು.
ಪ್ರಾಧಿಕಾರದ ಅಧಿಕಾರಕ್ಕೆ ಕಡಿವಾಣ: ನೀರಾವರಿ ಎಂಬುದು ರಾಜ್ಯ ಪಟ್ಟಿಗೆ ಸೇರಿದ ವಿಷಯ. ಹೀಗಾಗಿ, ಜಲಾಶಯಗಳ ಕಾರ್ಯಾಚರಣೆ ಮತ್ತು ಬೆಳೆ ಪದ್ಧತಿಯಲ್ಲಿ CWMA ಹಸ್ತಕ್ಷೇಪ ಮಾಡುವುದು ಸಂವಿಧಾನಬಾಹಿರ.
ಸುಪ್ರೀಂ ಕೋರ್ಟ್ನ 2025ರ ನವೆಂಬರ್ ಆದೇಶದಂತೆ, ಪ್ರಾಧಿಕಾರದ ಅಧಿಕಾರವನ್ನು ಕೇವಲ ಬಿಳಿಗುಂಡ್ಲು ಮಾಪನ ಕೇಂದ್ರದ ಮೇಲ್ವಿಚಾರಣೆಗೆ ಮಾತ್ರ ಸೀಮಿತಗೊಳಿಸಬೇಕು.
ತೀರ್ಪು ಮರುಪರಿಶೀಲನೆ ಹಾಗೂ ಯೋಜನೆಗಳಿಗೆ ಅನುಮತಿ: ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ 50 ವರ್ಷಗಳ ಹಳೆಯ ದತ್ತಾಂಶ ಆಧರಿಸಿದ ಕಾವೇರಿ ನ್ಯಾಯಮಂಡಳಿ ತೀರ್ಪನ್ನು ಮರುಪರಿಶೀಲಿಸಬೇಕು. ಜೊತೆಗೆ, ಬೆಂಗಳೂರಿನ ಕುಡಿಯುವ ನೀರಿಗಾಗಿ 'ಮೇಕೆದಾಟು ಯೋಜನೆ'ಗೆ ಶೀಘ್ರ ಅನುಮೋದನೆ ನೀಡಬೇಕು ಮತ್ತು ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆಯಲ್ಲಿ ರಾಜ್ಯದ ಪಾಲನ್ನು 15.9 ಟಿಎಂಸಿಯಿಂದ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.




