ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾವೇರಿ ನೀರಿನ ಸಮಸ್ಯೆಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು. ರಾಜ್ಯದಲ್ಲಿ ತೀವ್ರ ನೀರಿನ ಅಭಾವವಿದ್ದು, ಕಾವೇರಿ ಹಚ್ಚಿನ ನಮ್ಮ ರೈತರಿಗೆ ಬೆಳೆ ಬೆಳೆಯದಂತೆ ಸಲಹೆ ನೀಡಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ಮತ್ತೆ ನೀರು ಹರಿಸುವುದು ಕನ್ನಡಿಗರಿಗೆ ಮಾಡುವ ದೊಡ್ಡ ದ್ರೋಹ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಮುಂದಿನ 15 ದಿನಗಳ ಕಾಲ ನಿತ್ಯ 12,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ನಿರ್ದೇಶನ ಎಂದರೆ ಸುಮಾರು 15 ಟಿಎಂಸಿಗೂ ಹೆಚ್ಚು ನೀರನ್ನು ಬಿಟ್ಟುಕೊಟ್ಟಂತೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಭದ್ರತೆಗೂ ತೀವ್ರ ಕಂಠಕ ಎದುರಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಈ ಕೂಡಲೇ ತನ್ನ ಕಾನೂನು ತಜ್ಞರೊಂದಿಗೆ ತುರ್ತು ಸಮಾಲೋಚನೆ ನಡೆಸಿ, ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಕರ್ನಾಟಕದ ನೈಜ ಸ್ಥಿತಿಗತಿಯನ್ನು ಗಟ್ಟಿಯಾಗಿ ಮಂಡಿಸಬೇಕು. ನಮ್ಮ ರೈತರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಕರ್ನಾಟಕದ ನೀರನ್ನು ಯಾರೂ ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.



