ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆ ಬಿಕ್ಕಟ್ಟು ಸದ್ಯಕ್ಕೆ ಸುಖಾಂತ್ಯ ಕಂಡಿದೆ. ಜಲಸಂಪನ್ಮೂಲ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಹೈಕಮಾಂಡ್ ನಡೆಸಿದ ಸಂಧಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ.
ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದಿದ್ದ ಭಿನ್ನಮತವನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ರಂಗಪ್ರವೇಶ ಮಾಡಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಅವರು ರಾಮಲಿಂಗಾರೆಡ್ಡಿ ಅವರೊಂದಿಗೆ ಸುದೀರ್ಘ ಸಭೆ ನಡೆಸಿ, ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜೀನಾಮೆ ರಿಜೆಕ್ಟ್: ರಾಮಲಿಂಗಾರೆಡ್ಡಿ ಸ್ಪಷ್ಟನೆ
ಹೈಕಮಾಂಡ್ ನಾಯಕರೊಂದಿಗಿನ ಮಹತ್ವದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, "ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನಗೊಂಡು ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ನಿಜ. ಆದರೆ ಮುಖ್ಯಮಂತ್ರಿಗಳು ನನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಸಿಎಂ ರಾಜೀನಾಮೆ ಅಂಗೀಕರಿಸುತ್ತಿಲ್ಲ ಎಂದರೆ ಅದು 'ರಿಜೆಕ್ಟ್' ಆಗಿದೆ ಎಂದೇ ಅರ್ಥ," ಎಂದು ಸ್ಪಷ್ಟಪಡಿಸಿದರು.
"ಈಗಾಗಲೇ ಮುಖ್ಯಮಂತ್ರಿಗಳ ಜೊತೆಯೂ ಮಾತನಾಡಿದ್ದೇನೆ. ಖಾತೆ ಬದಲಾವಣೆ ಹಾಗೂ ಹಂಚಿಕೆಯ ಜವಾಬ್ದಾರಿಯನ್ನು ಸಿಎಂ ಮತ್ತು ಹೈಕಮಾಂಡ್ ನಾಯಕರು ನೋಡಿಕೊಳ್ಳಲಿದ್ದಾರೆ. ಸದ್ಯಕ್ಕೆ ಎಲ್ಲ ಗೊಂದಲಗಳೂ ಬಗೆಹರಿದಿವೆ," ರಾಮಲಿಂಗಾರೆಡ್ಡಿ, ಸಚಿವರು.
ರಾಮಲಿಂಗಾರೆಡ್ಡಿ ಅವರ ಮನವೊಲಿಕೆಯೊಂದಿಗೆ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿದ್ದ ಪ್ರಮುಖ ಭಿನ್ನಮತ ಸದ್ಯಕ್ಕೆ ಶಮನಗೊಂಡಂತಾಗಿದ್ದು, ಕೈ ನಾಯಕರು ನಿಟ್ಟುಸಿರು ಬಿಡುವಂತಾಗಿದೆ.



