Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬರ ನಿರ್ವಹಣೆ ಸರ್ಕಾರದಿಂದ ಸಲಕ ಸಿದ್ದತೆ- ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಬರ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಗೆ ಸರ್ಕಾರವು ಸಕಲ ಸಿದ್ಧತೆ ಮಾಡಿಕೊಂಡಿದ್ದು
, ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ತಲಾ 5 ಕೋಟಿ ರೂಪಾಯಿಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಜಿಲ್ಲಾ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಪ್ರಮುಖ ಸೂಚನೆಗಳನ್ನು ನೀಡಿದರು.

ಬರ ಮತ್ತು ಪ್ರಕೃತಿ ವಿಕೋಪ ನಿರ್ವಹಣೆಯ ಒಟ್ಟಾರೆ ಜವಾಬ್ದಾರಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೇಲಿರುತ್ತದೆ. ಜಿಲ್ಲಾಧಿಕಾರಿಗಳ ರೂ. 5 ಕೋಟಿ ಹಣವನ್ನು ಬರ ಮತ್ತು ಪ್ರಕೃತಿ ವಿಕೋಪದ ತುರ್ತು ಕಾರ್ಯಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೆಚ್ಚುವರಿ ಅನುದಾನದ ಅಗತ್ಯವಿದ್ದಲ್ಲಿ ತಕ್ಷಣವೇ ಪ್ರಸ್ತಾವನೆ ಸಲ್ಲಿಸಬೇಕು. ಅದಕ್ಕೆ ತಕ್ಷಣವೇ ಅನುಮೋದನೆ ನೀಡಲಾಗುವುದು. ಈ ಬಗ್ಗೆ ಯಾವುದೇ ಆತಂಕ ಬೇಡ. ಬರ ಪರಿಹಾರಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ, ಶೀಘ್ರದಲ್ಲೇ ರಾಜ್ಯದ ಒಟ್ಟಾರೆ ವರದಿಯನ್ನು ಮುಖ್ಯಮಂತ್ರಿಗಳು ಹಾಗೂ ನಾವು ಸಲ್ಲಿಸಲಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಸಿಇಒ ಅವರೇ ಈ ಕಾರ್ಯದ ನೋಡಲ್ ಅಧಿಕಾರಿಗಳಾಗಿದ್ದು, ಅವರು ನೀಡುವ ಪ್ರತಿಯೊಂದು ಆದೇಶ ಹಾಗೂ ಸೂಚನೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸ್ಪಂದಿಸಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಯಾವುದೇ ಅಧಿಕಾರಿ ಬರ ಕೆಲಸದಿಂದ ನುಣುಚಿಕೊಳ್ಳುವಂತಿಲ್ಲ. ಇಲಾಖೆಯ ಅಧಿಕಾರಿಗಳು ಸಹಕಾರ ನೀಡದಿದ್ದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳೂವುದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

ಕೊಳವೆ ಬಾವಿಗಳ ವಿದ್ಯುದ್ದೀಕರಣಕ್ಕೆ ಗಡುವು:
ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು
, ಹೊಸದಾಗಿ ಕೊರೆದಿರುವ ಹಾಗೂ ಬಾಕಿ ಇರುವ ಎಲ್ಲಾ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಕೇವಲ 15 ದಿನಗಳ ಒಳಗೆ ಕಡ್ಡಾಯವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಾಮಾನ್ಯವಾಗಿ ಎಲ್ಲಾ ಪ್ರಗತಿ ಪರಿಶೀಲನಾ ಸಭೆಗಳಲ್ಲೂ ಕೊಳವೆ ಬಾವಿ ಕೊರೆದರೂ ಪಂಪ್ ಹಾಗೂ ಮೋಟಾರ್ ಅಳವಡಿಸದಿರುವುದು ಅಥವಾ ಮೋಟಾರ್ ಇದ್ದರೂ ವಿದ್ಯುತ್ ಸಂಪರ್ಕ ನೀಡದೆ ಇರುವ ಸಮಸ್ಯೆಗಳು ಕೇಳಿಬರುತ್ತಿವೆ. ಇದಕ್ಕೆ ಇನ್ನು ಮುಂದೆ ಆಸ್ಪದ ನೀಡಬಾರದು ಎಂದರು.

ಅಧಿಕಾರಿಗಳಿಗೆ ಕೇಂದ್ರಸ್ಥಾನದಲ್ಲಿರಲು ತಾಕೀತು:
ನೋಡಲ್ ಅಧಿಕಾರಿಗಳ ಜವಾಬ್ದಾರಿ ಮತ್ತು ವರದಿ ಪ್ರತಿ ತಾಲೂಕಿಗೆ ನೇಮಕವಾಗಿರುವ ನೋಡಲ್ ಅಧಿಕಾರಿಗಳು ತಾಲೂಕಿನ ಕುಡಿಯುವ ನೀರಿನ ಸಮಸ್ಯೆ
, ಒಣಗುತ್ತಿರುವ ಬೋರ್‌ವೆಲ್‌ಗಳು ಹಾಗೂ ಮಳೆಯ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರಂತರವಾಗಿ ದೈನಂದಿನ ವರದಿ ನೀಡಬೇಕು. ಎಲ್ಲಾದರೂ ನೀರಿನ ಸಮಸ್ಯೆ ತಲೆದೂರಿದರೆ ತಕ್ಷಣವೇ ಮೇಲಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಬರಗಾಲದ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಲಭ್ಯವಿರಬೇಕು.ಹತ್ತಿರದ ಜಿಲ್ಲೆಗಳಿಂದ ದಿನನಿತ್ಯ ಓಡಾಟ ನಡೆಸುವ ಅಧಿಕಾರಿಗಳಿಗೆ ರಿಯಾಯಿತಿ ಇಲ್ಲ. ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಶುದ್ಧ ಕುಡಿಯುವ ನೀರು ಸರಬರಾಜಿಗೆ ಸೂಚನೆ:
ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜಾಗದಂತೆ ಅಧಿಕಾರಿಗಳು ತೀವ್ರ ನಿಗಾವಹಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಳೆಗಾಲದಲ್ಲಿ ಪೈಪ್‌ಲೈನ್‌ಗಳ ಮೂಲಕ ನೀರು ಸರಬರಾಜು ಮಾಡುವಾಗ ವಿಶೇಷ ಎಚ್ಚರಿಕೆ ಅಗತ್ಯ. ಕೆಲವು ಕಡೆಗಳಲ್ಲಿ ಪೈಪ್‌ಗಳನ್ನು ಸರಿಯಾಗಿ ಜೋಡಿಸದೇ ಇರುವುದರಿಂದ ನೀರು ನಿಂತು ಪಾಚಿ ಕಟ್ಟಿಕೊಳ್ಳುತ್ತದೆ. ನೀರು ಸರಬರಾಜು ಸ್ಥಗಿತಗೊಂಡು, ಬಳಿಕ ಮತ್ತೆ ಮೋಟಾರ್ ಆನ್ ಮಾಡಿದಾಗ ಸುತ್ತಮುತ್ತಲಿನ ಕಲುಷಿತ ನೀರು ಪೈಪ್‌ಲೈನ್‌ಗೆ ಮರುಸಂಗ್ರಹಣೆ (ಸಕ್ಷನ್) ಆಗುವ ಅಪಾಯ ಇರುತ್ತದೆ. ಇದರಿಂದಾಗಿ ಕಲುಷಿತ ನೀರು ಸಾರ್ವಜನಿಕರಿಗೆ ಸರಬರಾಜಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದರು.

ಕಲುಷಿತ ನೀರು ಸೇವನೆಯಿಂದ ಸಾರ್ವಜನಿಕರ ಆರೋಗ್ಯ ಹದಗೆಡುತ್ತದೆ. ಈ ಹಿಂದೆ ಕಲುಷಿತ ನೀರು ಕುಡಿದು ಕೆಲವರು ಮೃತಪಟ್ಟ ಉದಾಹರಣೆಗಳೂ ಇವೆ. ಇಂತಹ ಘಟನೆಗಳು ಮರುಕಳಿಸದಂತೆ ವಾಟರ್ ಸರಬರಾಜು ಇಂಜಿನಿಯರ್‌ಗಳು, ಜೂನಿಯರ್ ಹಾಗೂ ಅಸಿಸ್ಟೆಂಟ್ ಇಂಜಿನಿಯರ್‌ಗಳು ತಳಮಟ್ಟದಲ್ಲಿ ಪರಿಶೀಲನೆ ನಡೆಸಬೇಕು. ಇಡೀ ಜಿಲ್ಲೆಯಲ್ಲಿ ಇಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಇದರಲ್ಲಿ ಯಾವುದೇ ಲೋಪ ಕಂಡುಬಂದು ಅನಾಹುತಗಳಾದರೆ ನೇರವಾಗಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಎಚ್ಚರಿಸಿದರು.

ಮಳೆ ಮಾಪನ ಕೇಂದ್ರಗಳ ದುರಸ್ತಿಗೆ ನಿರ್ದೇಶನ:
ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಿಖರವಾದ ಮಾಹಿತಿಯನ್ನು ಪಡೆಯಲು ಮಳೆ ಮಾಪನ ಕೇಂದ್ರಗಳು ಅತ್ಯಂತ ಪ್ರಮುಖವಾಗಿವೆ. ಜಿಲ್ಲೆಯಲ್ಲಿರುವ ಒಟ್ಟು 201 ಮಳೆ ಮಾಪನ ಕೇಂದ್ರಗಳಲ್ಲಿ ಪೈಕಿ ದುರಸ್ತಿಯಲ್ಲಿರುವ ಅಥವಾ ಸರಿಯಾಗಿ ಕಾರ್ಯನಿರ್ವಹಿಸದ ಎಲ್ಲಾ ಕೇಂದ್ರಗಳನ್ನು ತಕ್ಷಣವೇ ದುರಸ್ತಿಗೊಳಿಸಿ
, ಅವುಗಳು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕೇಂದ್ರವನ್ನು ದುರಸ್ತಿ ಮಾಡಲು ಸಾಧ್ಯವಿಲ್ಲದಿದ್ದರೆ, ಅದನ್ನು ಹಾಗೆಯೇ ಬಿಡದೇ ತಕ್ಷಣವೇ ವಿಲೇವಾರಿ ಮಾಡಿ, ಹೊಸ ಮಳೆ ಮಾಪನ ಉಪಕರಣಗಳನ್ನು ಅಳವಡಿಸಬೇಕು. ಪ್ರತಿ ಪಂಚಾಯತಿ ಮಟ್ಟದಲ್ಲಿ ಮಳೆ ಮಾಪನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವು ಪಂಚಾಯತಿಗಳಲ್ಲಿ ಈ ಕೇಂದ್ರಗಳು ಇಲ್ಲದೇ ಇದ್ದಲ್ಲಿ, ಅಂತಹ ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ನಿರ್ದೇಶನ ನೀಡಿದರು.

ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತೆ ಹೊನ್ನಾಂಭ ಮಾನತಾಡಿ, ಜಿಲ್ಲೆಯಲ್ಲಿ ಸದ್ಯ ಒಟ್ಟು 201 ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಸದ್ಯ 126 ಕೇಂದ್ರಗಳು ಲಭ್ಯವಿದ್ದು, 109 ಕೇಂದ್ರಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಉಳಿದ 17 ಕೇಂದ್ರಗಳು ರಿಪೇರಿಯಾಗಬೇಕಾಗಿದ್ದು, ಅದರಲ್ಲಿ ಈಗಾಗಲೇ 9 ಕೇಂದ್ರಗಳನ್ನು ದುರಸ್ತಿ ಮಾಡಲಾಗಿದ್ದು, ಇನ್ನ 7 ಕೇಂದ್ರಗಳ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ.

ಈ ಹಿಂದೆ ಸರಿಯಾಗಿ ಕಾರ್ಯನಿರ್ವಹಿಸದ 97 ಕೇಂದ್ರಗಳ ಪೈಕಿ 75 ಕೇಂದ್ರಗಳನ್ನು ಸಂಪೂರ್ಣವಾಗಿ ಬದಲಾಯಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಏಜೆನ್ಸಿ ಮೂಲಕ ಅನುಸ್ಥಾಪನಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ ಎರಡು ತಿಂಗಳ ಕಾಲಾವಕಾಶ ಬೇಕಾಗಬಹುದು ಎಂದು ಮಾಹಿತಿ ನೀಡಿದರು.

 ಗೋಶಾಲೆ ಮತ್ತು ಮೇವು ಬ್ಯಾಂಕ್‌ಗಳ ಸ್ಥಾಪನೆ:
 ಜಿಲ್ಲೆಯಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇದ್ದ ವ್ಯವಸ್ಥೆಯನ್ನು ಪರಾಮರ್ಶಿಸಿ
, ಎಲ್ಲಿ ಅಗತ್ಯವಿದೆಯೋ ಅಲ್ಲಿ ತಕ್ಷಣವೇ ಇವುಗಳನ್ನು ಕಾರ್ಯಗತಗೊಳಿಸಲು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಪ್ರಕೃತಿ ವಿಕೋಪದ ನಿರ್ವಹಣೆಗಾಗಿ ಎನ್‌ಡಿಆರ್‌ಎಫ್ ಅನುದಾನವನ್ನು ಮುಂಚಿತವಾಗಿಯೇ ಕಾಯ್ದಿರಿಸಿಕೊಂಡು ಬಳಸಿಕೊಳ್ಳಬೇಕು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಹವಾಮಾನ ವೈಪರೀತ್ಯ ಹಾಗೂ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಚಿತ್ರದುರ್ಗ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಚಿಕೂನ್ ಗುನ್ಯಾ ಪ್ರಕರಣಗಳು ದಾಖಲಾಗುತ್ತಿರುವುದರಿಂದ, ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಈ ಕುರಿತು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನಿಗೆ ಸೂಚನೆ:
ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಮುನ್ನೆಚ್ಚರಿಕೆಯಾಗಿ ದಾಸ್ತಾನು ಮಾಡಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ಜಿಲ್ಲೆಗೆ ಈ ಮುಂಗಾರು ಹಂಗಾಮಿಗೆ ಒಟ್ಟು 74,000 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಸದ್ಯ 48,000 ಮೆಟ್ರಿಕ್ ಟನ್ ಲಭ್ಯವಿದೆ. ಇದರಲ್ಲಿ ಈಗಾಗಲೇ 20,000 ಮೆಟ್ರಿಕ್ ಟನ್ ವಿತರಣೆ ಮಾಡಲಾಗಿದ್ದು, ಇನ್ನು 28,000 ಮೆಟ್ರಿಕ್ ಟನ್ ದಾಸ್ತಾನಿದೆ ಎಂದು ತಿಳಿಸಿದರು.ಈ ವೇಳೆ ಮಾತನಾಡಿದ ಸಚಿವರು, ಇನ್ನುಳಿದ ರಸಗೊಬ್ಬರವನ್ನು ಶೀಘ್ರದಲ್ಲೇ ತರಿಸಿಕೊಂಡು ದಾಸ್ತಾನು ಮಾಡಿಕೊಳ್ಳಬೇಕು. ಒಂದು ವೇಳೆ ಹಠಾತ್ ಮಳೆ ಬಂದಲ್ಲಿ ರೈತರು ಏಕಾಏಕಿ ರಸಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ಆಹಾಕಾರ ಮಾಡಬಾರದು. ಹಾವೇರಿ ಜಿಲ್ಲೆಯಲ್ಲಿ ಆದಂತಹ ಪರಿಸ್ಥಿತಿ ಇಲ್ಲಿ ಮರುಕಳಿಸಬಾರದು. ಆದ್ದರಿಂದ ಮುನ್ನೆಚ್ಚರಿಕೆಯಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 ಜಿಲ್ಲೆಯಲ್ಲಿ ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಆಪ್ ಮೂಲಕ ನೊಂದಣಿ ಮಾಡಿಕೊಂಡು ವಿತರಿಸುವ ನಿಯಮದಿಂದ ರೈತರಿಗೆ ತೊಂದರೆಯಾಗುತ್ತಿದ್ದು, ವಿನಾಯಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕೋರಿದರು. ಇದಕ್ಕೆ ಸ್ಪಂದಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸ್ಥಳೀಯ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಾಯೋಗಿಕವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಈ ಪ್ರಕ್ರಿಯೆಯಲ್ಲಿ ಯಾವುದೇ ದುರುಪಯೋಗವಾಗಬಾರದು ಮತ್ತು ರೈತರಿಗೆ ತೊಂದರೆಯಾಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಅವರು ಎಚ್ಚರಿಸಿದರು.

 ಕೆ.ಎಂ.ಇ.ಆರ್.ಸಿ ಹಾಗೂ ಡಿಎಂಎಫ್ ಅನುದಾನಗಳ ಬಳಕೆ:
ಚಿತ್ರದುರ್ಗ ಜಿಲ್ಲೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ
, ಬರಗಾಲದ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಕೆ.ಎಂ.ಇ.ಆರ್.ಸಿ ಹಾಗೂ ಡಿಎಂಎಫ್ ಅನುದಾನಗಳ ಬಳಕೆ ಕುರಿತು ಕೆ.ಎಂ.ಇ.ಆರ್.ಸಿ ಅಧ್ಯಕ್ಷರ ಜೊತೆ ಚರ್ಚಿಸುವುದಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.

ಈ ಹಿಂದೆ ಕೆ.ಎಂ.ಇ.ಆರ್.ಸಿ ಅನುದಾನವನ್ನು ಕೇವಲ ಗಣಿಗಾರಿಕೆ ಚಟುವಟಿಕೆ ಇರುವ ತಾಲೂಕುಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಮಾದರಿಯಲ್ಲೇ ಇಡೀ ಜಿಲ್ಲೆಯನ್ನು ಒಂದು ಘಟಕವನ್ನಾಗಿ ಪರಿಗಣಿಸಿ ಕುಡಿಯುವ ನೀರಿಗೂ ಈ ಅನುದಾನ ಬಳಸಲು ವಿನಾಯಿತಿ ಕೋರಲಾಗುವುದು ಎಂದರು

ಡಿಸಿಸಿ ಬ್ಯಾಂಕ್ ಬೆಳೆಸಾಲ ಮನ್ನಾ ಮಾಡಲು ಸಂಸದ ಗೋವಿಂದ ಕಾರಜೋಳ ಮನವಿ-
ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಸಂಸದ ಗೋವಿಂದ ಕಾರಜೋಳ ಸಭೆಯಲ್ಲಿ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಲ್ಲಿ ಮನವಿ ಮಾಡಿದರು.

ಜಿಲ್ಲೆಯ ಡಿಸಿಸಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಅಲ್ಪಾವಧಿ ಬೆಳೆಸಾಲವನ್ನು ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವ ಸರ್ಕಾರ ರೈತರಿಗೆ ನೆರವಾಗಬೇಕು.

ಪ್ರಸಕ್ತ ಸಾಲಿನಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸುಮಾರು 70,000 ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಇದುವರೆಗೆ ಕೇವಲ 5,000 ರೈತರಿಗೆ ಮಾತ್ರ ಸಾಲ ವಿತರಿಸಲಾಗಿದೆ. ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಹೀಗಾಗಿ, ಬೆಳೆ ವಿಮೆಯ ನೂರರಷ್ಟು (100%) ಪ್ರೀಮಿಯಂ ಕಂತನ್ನು ರಾಜ್ಯ ಸರ್ಕಾರವೇ ಭರಿಸಿ ರೈತರಿಗೆ ಆರ್ಥಿಕ ಅನುಕೂಲ ಮಾಡಿಕೊಡಬೇಕು.

 ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 17 ಲಕ್ಷ ಕುರಿ ಮತ್ತು ಮೇಕೆಗಳು ಹಾಗೂ 2.5 ಲಕ್ಷ ದನಕರುಗಳಿವೆ. ಪ್ರಸ್ತುತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ವಿಶೇಷವಾಗಿ ಮಧ್ಯ ಕರ್ನಾಟಕ ಭಾಗದಲ್ಲಿ ಕುರಿ ಸಾಕಾಣಿಕೆಯನ್ನು ಅವಲಂಬಿಸಿರುವ ಶೇ. 90 ರಷ್ಟು ಜನರು ಹಿಂದುಳಿದ ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಜೀವನೋಪಾಯಕ್ಕಾಗಿ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ವಿನಂತಿ ಮಾಡಿಕೊಂಡರು.

ವಿವಿ ಸಾಗರ ಜಲಾಶಯದಿಂದ ನೀರು ತುಂಬಿಸಲು ಮನವಿ: ಮಳೆಯನ್ನೇ ನಂಬಿಕೊಂಡಿರುವ ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ನೀರು ಒದಗಿಸಲು ಇರುವ ಏಕೈಕ ಮಾರ್ಗ ಜಲಾಶಯಗಳು. ಸದ್ಯ ವಿವಿ ಸಾಗರ ಜಲಾಶಯದಲ್ಲಿ ಶೇಕಡಾ 30 ರಷ್ಟು ನೀರಿದ್ದು, ಅಲ್ಲಿಂದ ಮೊಳಕಾಲ್ಮೂರು ತಾಲೂಕಿನ ಪಕ್ಕದಲ್ಲಿರುವ ಕೆರೆಗಳಿಗೆ ನೀರು ಹರಿಸಲು ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಎನ್.ವೈ.ಗೋಪಾಕೃಷ್ಣ ಮನವಿ ಮಾಡಿದರು.

ಮುಂದಿನ 2-3 ತಿಂಗಳ ನಿರ್ವಹಣೆ: ಕೆರೆಗಳಿಗೆ ನೀರು ತುಂಬಿಸಿದರೆ ಅಲ್ಲಿಂದ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಒದಗಿಸಲು ಸಾಧ್ಯವಾಗುತ್ತದೆ. ಮುಂದಿನ ಎರಡು ಮೂರು ತಿಂಗಳುಗಳ ಕಾಲ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಸರ್ಕಾರ ತಕ್ಷಣವೇ ಸೂಕ್ತ ಆದೇಶ ಹಾಗೂ ಅನುಮತಿ ನೀಡಬೇಕು. ಇದರಿಂದ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಭವಿಸಬಹುದಾದ ಯಾವುದೇ ಕುಡಿಯುವ ನೀರಿನ ಸಮಸ್ಯೆಯನ್ನು ಯಶಸ್ವಿಯಾಗಿ ತಡೆಗಟ್ಟಬಹುದು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು.

ಶಾಸಕ ಡಾ. ಎಂ. ಚಂದ್ರಪ್ಪ ಹೊಳಲ್ಕೆರೆ ತಾಲ್ಲೂಕು ಮಲೆನಾಡು ಭಾಗಕ್ಕೆ ಹೊಂದಿಕೊAಡಿದ್ದರೂ ಸಹ, ಈ ಬಾರಿ ತೀವ್ರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ತಾಲ್ಲೂಕಿನಲ್ಲಿ ಶೇ. 45 ಕ್ಕಿಂತಲೂ ಹೆಚ್ಚು ಮಳೆ ಕೊರತೆಯಾಗಿದೆ. ಕಳೆದ ನಾಲ್ಕು ತಿಂಗಳುಗಳಿAದ ಕುಡಿಯುವ ನೀರಿಗಾಗಿ ಬೋರ್‌ವೆಲ್‌ಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸಾರ್ವಜನಿಕರ ನೀರಿನ ಅಗತ್ಯವನ್ನು ಪೂರೈಸಲು ಈಗಾಗಲೇ 127 ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಆ ಪೈಕಿ ಸುಮಾರು 28 ರಿಂದ 29 ಬೋರ್‌ವೆಲ್‌ಗಳು ವಿಫಲವಾಗಿವೆ ಅಧಿಕಾರಿಗಳು ಅನುದಾನದ ಕೊರತೆಯನ್ನು ಹೇಳುತ್ತಿದ್ದರೂ, ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು. ಇದಕ್ಕಾಗಿ ಸುಮಾರು 1.50 ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವನೆ ಬಾಕಿ ಉಳಿದಿದೆ. ಮುಂಬರುವ ತಿಂಗಳುಗಳಲ್ಲಿ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಕೈಮೀರಲಿದೆ. ಆದ್ದರಿಂದ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ, ಬಾಕಿ ಇರುವ ಬೋರ್‌ವೆಲ್ ಬಿಲ್ಲುಗಳ ಹಣವನ್ನು ಬಿಡುಗಡೆ ಮಾಡಬೇಕು ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಸಮರ್ಪಕ ಪರಿಹಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನದ ಅಗತ್ಯ:
ಶಾಸಕ ಟಿ. ರಘುಮೂರ್ತಿ ಮಾತನಾಡಿ ಭದ್ರಾ ಮೇಲ್ದಂಡೆ ಯೋಜನೆಗೆ ಪೂರ್ಣಗೊಳ್ಳಬೇಕಾದರೆ ಕೇಂದ್ರ ಸರ್ಕಾರ ಘೋಷಿಸಿರುವ 5,300 ಕೋಟಿ ಅನುದಾನ ಬಿಡುಗಡೆಯಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಜಿಲ್ಲೆಯ ಸಂಸದರು ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ ಮಾಡಿಸಬೇಕು. ಈಗಾಗಲೇ ಒಟ್ಟು 23,000 ಕೋಟಿ ರೂಪಾಯಿಗಳ ಯೋಜನೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ 11,500 ಕೋಟಿ ರೂಪಾಯಿಗಳನ್ನು ಭರಿಸಿ ಚಿತ್ರದುರ್ಗ ಬ್ರಾಂಚ್ ಕೆನಾಲ್ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಿದೆ. ಚಿತ್ರದುರ್ಗ ಜಿಲ್ಲೆ ಯಾವಾಗಲೂ ಬರಗಾಲ ಪೀಡಿತ ಪ್ರದೇಶವಾಗಿದ್ದು
, ಕೇಂದ್ರದ ಅನುದಾನ ಬಂದರೆ ಈ ಯೋಜನೆ ಸಂಪೂರ್ಣಗೊಂಡು ಜಿಲ್ಲೆಯ ಬರಡಾದ ಭೂಮಿಗೆ ಕಾಯಕಲ್ಪ ಸಿಗಲಿದೆ ಎಂದು ರಘುಮೂರ್ತಿ ಅವರು ಸಭೆಯಲ್ಲಿ ತಿಳಿಸಿದರು.

ಚಳ್ಳಕೆರೆ ತಾಲೂಕು ಕೂಡ ತುಂಗಭದ್ರಾ ನೀರಾವರಿ ಯೋಜನೆಗೆ ಒಳಪಡುತ್ತದೆ. ಯೋಜನೆಯ ಬಹುತೇಕ ಕೆಲಸಗಳು ಪೂರ್ಣಗೊಂಡು, ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕೆಲಸವೂ ಆಗಿತ್ತು. ಆದರೆ, ಇತ್ತೀಚೆಗೆ ವಿದ್ಯುತ್ ಬಿಲ್ ಪಾವತಿಸದ ಕಾರಣ ಮೆಗಾ ಇಂಜಿನಿಯರಿಂಗ್ ಸಂಸ್ಥೆಯವರು ಅಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ವಿಷಯ ಈಗಾಗಲೇ ಆಡಿಟ್ ಇಲಾಖೆಯ ಗಮನದಲ್ಲೂ ಇದೆ. ಮಳೆ ಕೈಕೊಟ್ಟಿರುವ ಇಂತಹ ಸಂದರ್ಭದಲ್ಲಿ ಇದು ಮುಂದೆ ದೊಡ್ಡ ಸಮಸ್ಯೆಯಾಗಲಿದ್ದು, ಅಧಿಕಾರಿಗಳು ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು.

ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ, ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ತೀವ್ರ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಲು ಅವಕಾಶ ಮಾಡಿಕೊಡಬೇಕು ಹಿಂದಿನ ವರ್ಷಗಳಲ್ಲಿ ಬೋರ್‌ವೆಲ್ ಕೊರೆಸಿದ ಬಿಲ್‌ಗಳ ಪಾವತಿ ಅನುದಾನ ನೀಡಬೇಕು ಎಂದರು.

ಶಾಸಕ ಬಿ. ಜಿ. ಗೋವಿಂದಪ್ಪ ಮಾತನಾಡಿ ಹೊಸದುರ್ಗ ತಾಲೂಕಿನಲ್ಲಿ ಒಟ್ಟು 33 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ ವರ್ಷವೂ ಈ ಅವಧಿಯಲ್ಲಿ ತಾಲೂಕಿನಲ್ಲಿ ಬಿತ್ತನೆ ಕಾರ್ಯಗಳು ಭರದಿಂದ ನಡೆಯುತ್ತಿದ್ದವು. ಆದರೆ ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದರಿಂದ, ತಾಲೂಕಿನಲ್ಲಿ ಇನ್ನೂ ಬಿತ್ತನೆ ಕಾರ್ಯ ಚುರುಕುಗೊಂಡಿಲ್ಲ. ಮಳೆಯ ಕೊರತೆಯಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ತಾಲೂಕಿನ ಯಾವುದೇ ಗ್ರಾಮ ಪಂಚಾಯಿತಿಯಲ್ಲೂ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ತಾಲೂಕಿನ 18 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ಹಾಗೂ 11 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯುವ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣ ಹಾಗೂ ಪರಿಹಾರ ಕಾರ್ಯಗಳ ಮಾರ್ಗಸೂಚಿಗಳನ್ನು ಅಧಿಕಾರಿಗಳು ಈಗಾಗಲೇ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ನೀಡುವ ಎಲ್ಲಾ ನಿರ್ದೇಶನಗಳು ಮತ್ತು ಆದೇಶಗಳನ್ನು ಜಾರಿಗೆ ತರಲು ತಾಲೂಕು ಆಡಳಿತ ಸಂಪೂರ್ಣ ಸಿದ್ಧವಾಗಿದೆ ಎಂದು ಶಾಸಕ ಬಿ. ಜಿ. ಗೋವಿಂದಪ್ಪ ಅವರು ಸಭೆಗೆ ಭರವಸೆ ನೀಡಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ತಾಲೂಕಿನಲ್ಲಿ ಹೊಸದಾಗಿ ಕೊರೆಯಲಾದ ಬೋರ್‌ವೆಲ್‌ಗಳು ಸಿದ್ಧವಿದ್ದರೂ, ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಬಜೆಟ್ ಕೊರತೆಯ ನೆಪ ಒಡ್ಡುತ್ತಿದ್ದಾರೆ. ನಿರಂತರ ಜ್ಯೋತಿ ಯೋಜನೆಯಡಿ ಈ ಬೋರ್‌ವೆಲ್‌ಗಳಿಗೆ ತುರ್ತಾಗಿ ಕನೆಕ್ಷನ್ ನೀಡಿದರೆ ಕುಡಿಯುವ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಗಲಿದೆ. ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲೂಕಿನ 8 ಪ್ರಮುಖ ಕೆರೆಗಳು ಕೈಬಿಟ್ಟು ಹೋಗಿವೆ. ಈ ಕುರಿತು ಈಗಾಗಲೇ ಡಿಪಿಆರ್ ಸಿದ್ಧಪ ಸಲ್ಲಿಸಲಾಗಿದೆ. ಇದಕ್ಕೆ ಅನುದಾನದ ಹಂಚಿಕೆಯೂ ಆಗಿರುವುದರಿಂದ, ಈ 8 ಕೆರೆಗಳಿಗೆ ಭದ್ರಾ ನೀರನ್ನು ಹರಿಸಲು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಭದ್ರಾ ನೀರು ಬರುತ್ತದೆ ಎಂಬ ಭರವಸೆಯಿಂದ ಕಳೆದ ವರ್ಷ ತಾಲೂಕಿನಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಅಡಿಕೆ ಸಸಿಗಳನ್ನು ನೆಡಲಾಗಿತ್ತು. ಆದರೆ ಪ್ರಸ್ತುತ ತೀವ್ರ ನೀರಿನ ಅಭಾವದಿಂದಾಗಿ ಈಗಾಗಲೇ ಶೇ. 50 ರಷ್ಟು ಅಡಿಕೆ ತೋಟಗಳು ಒಣಗುವ ಹಂತ ತಲುಪಿವೆ. ಈ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಿ, ಕುಡಿಯುವ ನೀರು ಹಾಗೂ ತೋಟಗಳನ್ನು ಉಳಿಸಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಮತ್ತು ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಅನುಗ್ರಹ' ಯೋಜನೆಯನ್ನು ಪ್ರಸ್ತುತ ಸರ್ಕಾರ ಮರುಜಾರಿಗೊಳಿಸಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದಂತೆ ಸುಮಾರು 1.5 ಕೋಟಿ ರೂಪಾಯಿಗಳಷ್ಟು ಅನುದಾನ ಬಾಕಿ ಉಳಿದಿದ್ದು, ರೈತರ ಹಿತದೃಷ್ಟಿಯಿಂದ ಈ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಭೆಯಲ್ಲಿ ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಪರಿಷತ್ ಸದಸ್ಯರಾದ ಶ್ರೀನಿವಾಸ ಮಾತನಾಡಿ ವಿವಿ ಸಾಗರ ನಾಲೆಯ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಲಿಂಕ್ ಲೈನ್ ಕೆಳಭಾಗಕ್ಕೆ ಬಿದ್ದು ದಿನನಿತ್ಯ ಜನರು ಮತ್ತು ಜಾನುವಾರುಗಳು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹಿರಿಯೂರಿನ ಲಕ್ಕೇನಹಳ್ಳಿ, ಬುಡ್ನಹಟ್ಟಿ, ಬುಚ್ಚಪ್ಪನಹಟ್ಟಿ ಮುಂತಾದ ಗ್ರಾಮಗಳ ಸಾರ್ವಜನಿಕರು, ಕುರಿಗಾಹಿಗಳು ಹಾಗೂ ದನಕರುಗಳು ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಐಮಂಗಲ ಹೋಬಳಿಯಲ್ಲಿ ಕೆರೆ ತುಂಬಿಸುವ ಯೋಜನೆಗಾಗಿ ಇತ್ತೀಚೆಗೆ 300ಕ್ಕೂ ಹೆಚ್ಚು ರೈತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 244 ಕೋಟಿ ರೂ. ಗಳ ಯೋಜನೆಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದಾರೆ. ಜವಗೊಂಡನಹಳ್ಳಿ 17 ಕೆರೆಗಳನ್ನು ತುಂಬಿಸುವ ಯೋಜನೆಯ ಡಿಪಿಆರ್ ಸಿದ್ಧವಾಗಿದ್ದು, ಶೀಘ್ರದಲ್ಲೇ ಕ್ಯಾಬಿನೆಟ್ ಮುಂದೆ ಬರಲಿದೆ. ಉಪ ಮುಖ್ಯಮಂತ್ರಿಗಳು ಇದಕ್ಕೆ ಶೀಘ್ರ ಒಪ್ಪಿಗೆ ಕೊಡಿಸಬೇಕು ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದ್ದು, ಇದನ್ನು ಎದುರಿಸಲು ರಾಜ್ಯ ಸರ್ಕಾರವು ವಿಶೇಷವಾದ ಜಲ ನೀತಿಯನ್ನು ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳ ನಡುವೆ ಸರಿಯಾದ ಸಮನ್ವಯ ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಕೈಮೀರಲಿದೆ. ಪ್ರಸ್ತುತ ಹಂತದಲ್ಲೇ ಅಧಿಕಾರಿಗಳು ಜಂಟಿಯಾಗಿ ಕಾರ್ಯಪ್ರವೃತ್ತರಾಗಬೇಕು. ಮಳೆ ಕೊರತೆಯಾಗಿರುವುದರಿಂದ ಮುಂಬರುವ ತಿಂಗಳುಗಳಲ್ಲಿ ಲಭ್ಯವಿರುವ ನೀರನ್ನು ಮಿತವಾಗಿ ಬಳಸಬೇಕಿದೆ. ಕಡಿಮೆ ನೀರು ಬೇಡುವ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ರೈತರಲ್ಲಿ ಇಂದಿನಿAದಲೇ ಜಾಗೃತಿ ಮೂಡಿಸಬೇಕು. ಕಳೆದ ವರ್ಷ ಪ್ರಾಯೋಗಿಕವಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಲಾಗಿತ್ತು. ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಒಂದೇ ರೀತಿಯ ಭೌಗೋಳಿಕ ಮತ್ತು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು, ಸೂಕ್ತ ನೀತಿ ರೂಪಿಸಿದರೆ ನಮ್ಮ ಜಿಲ್ಲೆಯೂ ಸುರಕ್ಷಿತ ಸ್ಥಾನ ತಲುಪಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಆದಿ ಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ರಾಜ್ಯ ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಡಾ.ಯೋಗೇಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಲ್ಲಾ ಉಸ್ತವಾರಿ ಕಾರ್ಯದರ್ಶಿ ಆಮ್ಲಾನ್ ಅದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ.ಸಿಇಓ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.