ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ :
ಸಮಾಜವನ್ನು ದುಶ್ಚಟಗಳಿಂದ ಮುಕ್ತಗೊಳಿಸಿ, ಆರೋಗ್ಯಕರ ಹಾಗೂ ಜಾಗೃತ ಜೀವನದತ್ತ ಮಕ್ಕಳು, ಯುವಕರು ಮತ್ತು ಸಾರ್ವಜನಿಕರನ್ನು ಪ್ರೇರೇಪಿಸುವ ಉದ್ದೇಶದಿಂದ ನಶಾ ಮುಕ್ತ ಭಾರತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದುಶ್ಚಟಗಳು ದುರ್ಮಾರ್ಗಕ್ಕೆ ದಾರಿಯಾಗಿ ಮಾನವನ ವ್ಯಕ್ತಿತ್ವ ಅಧಃಪತನಕ್ಕೆ ತಳ್ಳಲ್ಪಡುತ್ತದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಟಿ.ಪಿ.ಉಮೇಶ್ ಹೇಳಿದರು.
ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಂಬಾಕು, ಜರ್ದ, ಗುಟ್ಕಾ, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಹೊಂದಿರಬೇಕು. ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಓದುವ, ಬರೆಯುವ, ಕಲೆ ಸಾಹಿತ್ಯ, ಸಂಗೀತ ಕ್ರೀಡೆ ನೃತ್ಯ ಮತ್ತು ಸ್ವ ಉದ್ಯೋಗ ಕುಲಕಸುಬುಗಳ ಕಡೆ ವಿದ್ಯಾರ್ಥಿಗಳು ಸದಾ ಗಮನ ನೀಡಿದರೆ ಮಾನವ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು “ಮಾದಕ ವಸ್ತುಗಳಿಂದ ದೂರವಿರೋಣ, ಆರೋಗ್ಯಕರ ಭಾರತ ನಿರ್ಮಿಸೋಣ”, “ನಶೆ ಬೇಡ, ಶಿಕ್ಷಣ ಬೇಕು” ಎಂಬ ಘೋಷಣೆಗಳ ಮೂಲಕ ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ನಶಾಮುಕ್ತ ಭಾರತದ ಸಂಕಲ್ಪ ಪ್ರತಿಜ್ಞಾ ವಿಧಿ ಕೈಗೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಜಿ.ಎನ್.ರೇಷ್ಮಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.



