Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ದುರ್ಗದ 'ಅಜ್ಜ' ಅಜರಾಮರ!

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಮನೆಯ ಗೇಟಿನ ಬಳಿಯೇ ತೊಯ್ದು ಬಿದ್ದ ಆಂಗ್ಲ ಪತ್ರಿಕೆಗಳು. ಅಗಲಿಕೆಯ ನೋವಿಂದ ಸಾಕು ನಾಯಿ ಕಂಬನಿ. ಸೆಲ್ಯೂಟ್ ನೀಡಿದ ಭಂಗಿಯಲ್ಲಿ ನಿಂತ ಗಿಡಮರಗಳು. ವನದಿ ನೆಲೆಸಿದ ಪಕ್ಷಿಸಂಕುಲ ಮೌನಕ್ಕೆ ಶರಣು. ನಮ್ಮ ಪ್ರೀತಿಯ ಅಜ್ಜ ಜಿ ಎಸ್ ಉಜ್ಜಿನಪ್ಪ ಅವರು ದೈವಸೃಷ್ಟಿಯೊಳು ಲೀನವಾದ ಮುಂಜಾವು ಅವರ
'ಕಲಶ' ನಿವಾಸ ಬಳಿ ಕಣ್ಣಿಗೆ ಕಂಡ ದೃಶ್ಯಾವಳಿವು.

ಗೇಟು ದಾಟುತ್ತಿದ್ದಂತೆ 'ಪ್ಲೀಸ್ ಕಮ್ ಬಸಣ್ಣ, ಬನ್ನಿ ಬನ್ನಿ..' ಎಂದು ಕರೆಯುವ ಅಜ್ಜನ ದನಿಯಿನ್ನು ನೆನಪು ಮಾತ್ರ ಎಂದು ನೆನೆದು ಭಾವುಕನಾದೆನು. ಅಜ್ಜ ಮನೆ ಅಂಗಳದಲ್ಲಿ ಚಿರನಿದಿರೆಗೆ ಜಾರಿದ್ದರು. ಅದೇ ಅಂಗಳದಲ್ಲಿ ಅದೆಷ್ಟೋ ಸಲ ನಿಮಿಷವೂ ಸುಮ್ಮನಿರದೆ ಅಜ್ಜನ ಜತೆ ಮಾತಿನ ಮಂಟಪ ಕಟ್ಟಿದ್ದ  ಹೆಚ್ ಹಂನುಮಂತಪ್ಪನವರು ಆಪ್ತ ಗೆಳೆಯನ ಅಗಲಿಕೆಯ ದುಃಖದಲ್ಲಿ ಮುಳುಗಿದ್ದರು. ಕುಟುಂಬಸ್ಥರು ಮನೆಯ ಆಧಾರಸ್ತಂಭವೇ ಕುಸಿದಂತೆ ಕಂಗಾಲಾಗಿದ್ದರು. ಕಣ್ಣೀರು ತಡೆಯಲಾಗಲಿಲ್ಲ...

Advertisement

ಎರಡು ದಶಕದ ಹಿಂದೆ ದಿ ಹಿಂದೂ ಪತ್ರಿಕೆಯ ವರದಿಗಾರ ಫಿರೋಜ್ ನನ್ನನ್ನು ಉಜ್ಜಿನಪ್ಪ ಅವರಿಗೆ ಪರಿಚಯಿಸಿದ್ದನು. ಕಲಬುರಗಿಯವನೆಂದು ತಿಳಿದಾಕ್ಷ ನನ್ನ ಮೇಲೆ‌ ವಿಶೇಷ ಪ್ರೀತಿ ತೋರಿದ್ದರು. 'ನಾನು ಕಲಬುರಗಿಯ MSK ಮಿಲ್ ನಲ್ಲೇ ಮೊದಲ ನೌಕರಿ ಮಾಡಿದ್ದೆನು' ಎಂದು ಹೇಳಿ ನಮ್ಮ ಭಾಗದ ಹೋರಾಟಗಾರ ಎಸ್ ಕೆ‌ ಕಾಂತಾ ಅವರನ್ನು ನೆನೆದಿದ್ದರು.

 'ದುರ್ಗದಲ್ಲಿ ಜೋಳದ ರೊಟ್ಟಿ ಸಿಗಲ್ಲ' ಎಂದು ತಿಳಿಸಿ ಮನೆಗೆ ಊಟಕ್ಕೆ ಕರೆದಿದ್ದರು. ಬಹುವರ್ಷದ ಬಳಿಕ ಮನೆಗೆ ಬಂದ ಮೊಮ್ಮಗನಿಗೆ ತೋರುವ ಅಕ್ಕರೆ ನೀಡಿ ಭೈರಮ್ಮ ಅಜ್ಜಿ ಉಣ ಬಡಿಸಿದ್ದರು. ಮರಳಿ ಅಜ್ಜ-ಅಜ್ಜಿ ಸಿಕ್ಕ ಭಾವ ನನ್ನಲಿ ಮೂಡಿತ್ತು. ಅಜ್ಜಿ ಬದುಕಿನ ಕೊನೆಕಾಲದವರೆಗೆ ಮನೆಯಲ್ಲಿ ರೊಟ್ಟಿ ಮಾಡಿದಾಗೆಲ್ಲ ಅಜ್ಜ-ಅಜ್ಜಿ ನನ್ನನ್ನು ಮರೆಯುತ್ತಿರಲಿಲ್ಲ.

ಖಾಸಾ ಮೊಮ್ಮಗನಂತೆಯೇ ಕಾಣುತ್ತಿದ್ದ ಅಜ್ಜ ನಾನೊಂಚೂರು ದಪ್ಪ ಆದರೂ ಎಚ್ಚರಿಸುತ್ತಿದ್ದರು. ಹುಡುಗರೇ ಆಗಲಿ; ಹುಡುಗಿಯರೇ ಆಗಲಿ ಸಕಾಲಕ್ಕೆ ಮದುವೆ ಆಗಬೇಕು ಎಂದು ಹೇಳುತ್ತಿದ್ದರು. ಅಪ್ಪನ ನಂಬರ್ ಪಡೆದು 'ಮಗನಿಗೆ ನಮ್ಮ ಕಡೆಯೇ ಹೆಣ್ಣು ನೋಡೋಣವೇ' ಎಂದು ಕೇಳಿದ್ದುಂಟು. ಅಪ್ಪ ದುರ್ಗಕ್ಕೆ ಬಂದಾಗೆಲ್ಲಾ ತಪ್ಪದೆ ಭೇಟಿಯಾಗುತ್ತಿದ್ದರು.

ನನ್ನ ಮದುವೆ ಮುಹೂರ್ತ ನಿರ್ಧಾರವಾದಾಗ ಅಜ್ಜ ಅಕ್ಷರಶಃ ಸಂಭ್ರಮಿಸಿದ್ದರು. ಒಂದು ದಿನ ಮುನ್ನವೇ ಅಜ್ಜ-ಅಜ್ಜಿ ಮನೆಗೆ ಬಂದು ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾಗಿ ಆಶೀರ್ವದಿಸಿದ್ದು ನನ್ನ ಸುದೈವ. ಮದುವೆ ಬಳಿಕ ಯಾವ ಪ್ಲಾನ್ ಮಾಡಬೇಡಿ ಬೇಗ ಮಕ್ಕಳು ಆಗಲಿ ಎಂದು ಬೆನ್ನುಬಿದ್ದಿದ್ದು ಪ್ರೀತಿಯ ಅಜ್ಜ. ಮರಿ ಮೊಮ್ಮಗ ವಿನಯ ಜನಿಸಿದ ವೇಳೆ ಆಸ್ಪತ್ರೆಗೆ ಬಂದಿದ್ದು, ನಾಮಕರಣದಿ ಸಂಭ್ರಮಿಸಿ ಆಶೀರ್ವದಿಸಿದ್ದು ಅವಿಸ್ಮರಣೀಯ.

ನನಗೆ ಓದು ಮತ್ತು ಬರವಣಿಗೆಯ ಹುಚ್ಚಿದೆ ಎಂದು ಅರಿತ ಅಜ್ಜ  ಕೆಂಡಸಂಪಿಗೆ ವೆಬ್ಸೈಟ್ ಗೆ ಬರೆಯಲು ಸೂಚಿಸಿದ್ದರು. ಅಬ್ದುಲ್ ರಶೀದ್ ಅವರನ್ನು ಪರಿಚಯಿಸಿ ಲೇಖನಗಳು ಹೊರಹೊಮ್ಮಲು ಪ್ರೇರಣೆ ನೀಡಿದರು. ಬರಹಗಳಿಗೆ ಕೃತಿ ರೂಪ ನೀಡುವಂತೆ ಹೇಳುತ್ತಿದ್ದ ಮಾತು ಸಾಕಾರಗೊಳಿಸಲಾಗದೆ ಅಜ್ಜನ ಕೆಂಗಣ್ಣಿಗೆ ಗುರಿಯಾಗಿದ್ದೆನು. ಕ್ಷಮಿಸಿಬಿಡು ಅಜ್ಜ!.

ಅಪ್ಪಟ ಗ್ರಾಮೀಣ ಪ್ರತಿಭೆ ಎಂದೆಣಿಸಿದರೆ ವಿದೇಶಿಗರೂ ನಾಚುವಂತೆ ಆಂಗ್ಲಭಾಷೆ ಮಾತಾಡುತ್ತಿದ್ದರು. ವೃತ್ತಿಪರ ಪತ್ರಕರ್ತ ಎಂದು ಭಾವಿಸಿದರೆ ಪ್ರಗತಿಪರ ಕೃಷಿಕರೂ ಹೌದೆನ್ನಬೇಕಿತ್ತು. ಗೌನಳ್ಳೇರು, ಹಬ್ಬಿದ ಮಲೆ ಮಧ್ಯದೊಳಗೆ ಕೃತಿಗಳು ಸ್ವಗ್ರಾಮದ ಕಥನಗಳಾಗಿದ್ದರೆ, ಹೆಜ್ಜೆಯಿಟ್ಟ ಕಡೆ, ನಿಕಷ ಕೃತಿಗಳು ಅನುಭವ ಕಥನ ತೆರೆದಿಡುತ್ತವೆ. ದಾರಿಗೆ ಜತೆಯಿಲ್ಲ, ಭಿತ್ತಗಳು, ತಣ್ಣೆಳಲು ಕೃತಿಗಳಲ್ಲಿ ಸೊಗಸಾದ ಕಥೆ ಹೇಳುವ ಅಜ್ಜ ಬದುಕೆಂಬ ಮಹಾ ಪ್ರಸಾದ ಕೃತಿಯಲ್ಲಿ ಆತ್ಮಕಥನ ಬಿಚ್ಚಿಟ್ಟಿದ್ದಾರೆ.

 ಬಹುಮುಖ ಪ್ರತಿಭೆಯ ಅಜ್ಜನಿಗೆ ಸಿದ್ಧಿಸದ ವಿದ್ಯೆ ಇರಲಿಲ್ಲ. ಓದು-ಬರಹ, ಹಾಡು-ಸಾಹಿತ್ಯ, ಜನಪರ ಪತ್ರಕರ್ತ, ಕೃಷಿ-ಖುಷಿ, ಎಲ್ಲರೊಳಗೊಂದಾಗಿ ಪ್ರೀತಿ ಹಂಚುವ ಪರಿ. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳ ಮೇಲಿನ ಹಿಡಿತ. ಕೊನೆಗಾಲದವರೆಗೆ ಕಾಯ್ದುಕೊಂಡಿದ್ದ ಅದ್ಭುತ ಜ್ಞಾಪಕ ಶಕ್ತಿಗೆ ಸಾಟಿಯಿಲ್ಲ. ಪ್ರೀತಿಯ ಅಜ್ಜ ಅಜರಾಮರ...
ಲೇಖನ-ಬಸವರಾಜ ಮುದನೂರ್, ಚಿತ್ರದುರ್ಗ.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು