ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ಕಾರ್ಯಕರ್ತ ಅಕಿಲ್ ರೆಡ್ಡಿ ಜೀಡಮಾಕಲಹಳ್ಳಿ ಅವರನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಅಣಕನೂರು ಜಿಲ್ಲಾ ಉಪ-ಕಾರಾಗೃಹದಲ್ಲಿ ಖುದ್ದಾಗಿ ಭೇಟಿ ಮಾಡಿದರು.
ಜೈಲಿನಲ್ಲಿರುವ ಅಕಿಲ್ ರೆಡ್ಡಿ ಅವರ ಆರೋಗ್ಯ ವಿಚಾರಿಸಿದ ನಿಖಿಲ್, "ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ" ಎಂದು ಧೈರ್ಯ ತುಂಬಿದರು.
ಕುಟುಂಬಕ್ಕೆ ಸಾಂತ್ವನ – ಪಕ್ಷದಿಂದ ಕಾನೂನು ನೆರವು:
ಕಾರಾಗೃಹದ ಭೇಟಿಯ ಬಳಿಕ ಅಕಿಲ್ ರೆಡ್ಡಿ ಅವರ ನಿವಾಸಕ್ಕೆ ತೆರಳಿದ ನಿಖಿಲ್ ಕುಮಾರಸ್ವಾಮಿ, ಕುಟುಂಬದ ಸದಸ್ಯರ ಯೋಗಕ್ಷೇಮ ವಿಚಾರಿಸಿದರು. "ನಮ್ಮ ಪಕ್ಷದ ವತಿಯಿಂದ ಸಂಪೂರ್ಣ ಕಾನೂನು ಸಹಕಾರ ನೀಡುತ್ತೇವೆ. ತಾವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು" ಎಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕಾಂಗ್ರೆಸ್ ವಿರುದ್ಧ ನಿಖಿಲ್ ಆಕ್ರೋಶ:
ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ರಾಜ್ಯದ ಸದ್ಯದ ಪರಿಸ್ಥಿತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು:
"ರಾಜ್ಯ ಕಾಂಗ್ರೆಸ್ ಸರ್ಕಾರ ಸದ್ಯ ದ್ವೇಷ ಹಾಗೂ ಟಾರ್ಗೆಟ್ ರಾಜಕಾರಣ ಮಾಡುತ್ತಿದೆ. ನಮ್ಮ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು. ಸಮಾಧಾನ ಹಾಗೂ ಶಾಂತಿಯಿಂದ ಯಾವುದೇ ವಿಚಾರಗಳಿದ್ದರೂ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರಬೇಕು. ನಿಮ್ಮ ಕುಟುಂಬದ ಬಗ್ಗೆಯೂ ಯೋಚಿಸಿ, ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ ಇಡಬೇಕು. ಜೆಡಿಎಸ್ ಪಕ್ಷ ಸದಾ ಕಾರ್ಯಕರ್ತರ ಜೊತೆಗಿದೆ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ."
ಈ ಸಂದರ್ಭದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ. ಕೃಷ್ಣಾರೆಡ್ಡಿ, ಶಾಸಕರಾದ ಬಿ.ಎನ್. ರವಿಕುಮಾರ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಚೌಡರೆಡ್ಡಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ರಶ್ಮಿ ರಾಮೇಗೌಡ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.



