ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶೀಯ ಉತ್ಪಾದನೆಯನ್ನು ವೃದ್ಧಿಸುವ ಹಾಗೂ ಭಾರತೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ವಾಹನಗಳಿಗೆ (EV) ಹೆಚ್ಚಿನ ಬೇಡಿಕೆ ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ನಗರದ ಎಚ್‌ಎಂಟಿ ಭವನದಲ್ಲಿ ಎಲೆಕ್ಟ್ರಿಕ್ ವಾಹನೋದ್ಯಮದ ಪ್ರಮುಖರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.
ವಿಶೇಷವಾಗಿ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ತಯಾರಿಕೆ ಹಾಗೂ ಇವಿ ವಲಯದ ವಿವಿಧ ಉತ್ಪನ್ನಗಳ ಉತ್ಪಾದನೆಗೆ ಅತ್ಯಗತ್ಯವಾದ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಫಲಪ್ರದ ಚರ್ಚೆಗಳು ಜರುಗಿದವು. ಎಥರ್ ಎನರ್ಜಿ, ಮ್ಯಾಟರ್, ರಿವರ್, ಇಯುಲರ್ ಮೋಟಾರ್ಸ್ ಮತ್ತು ರಾಪ್ಟಿ ಹೆಚ್‌ವಿ ಸೇರಿದಂತೆ ದೇಶದ ಪ್ರಮುಖ ಇವಿ ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ಮತ್ತು ಉದ್ಯಮದ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಧಾನಿ ಮೋದಿ ಯೋಜನೆಗಳಿಗೆ ಶ್ಲಾಘನೆ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ಅನುಷ್ಠಾನಕ್ಕೆ ಬಂದಿರುವ PM E-DRIVE ಮತ್ತು PLI ಆಟೋ ಯೋಜನೆಗಳ ಬಗ್ಗೆ ಉದ್ಯಮದ ಪ್ರಮುಖರು ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು. ದೇಶೀಯ ಇವಿ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಇಂತಹ ನೀತಿಗಳು ಅತ್ಯಂತ ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯ ಹಂಚಿಕೊಂಡರು.
ಸರ್ಕಾರದ ಪೂರ್ಣ ಬೆಂಬಲದ ಭರವಸೆ:
ಉದ್ಯಮಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, "ದೇಶದಲ್ಲಿ ದೃಢವಾದ, ನಾವೀನ್ಯತೆಯಿಂದ ಕೂಡಿದ ಹಾಗೂ ಜಾಗತಿಕ ಗುಣಮಟ್ಟದ ಸ್ಪರ್ಧಾತ್ಮಕ EV ಪೂರಕ ವ್ಯವಸ್ಥೆಯನ್ನು ನಿರ್ಮಿಸುವುದಕ್ಕೆ ಕೇಂದ್ರ ಸರ್ಕಾರದ ವತಿಯಿಂದ ಪೂರ್ಣ ಬೆಂಬಲ ನೀಡಲಾಗುವುದು," ಎಂದು ಭರವಸೆ ನೀಡಿದರು. ಅಲ್ಲದೆ, ಸ್ಥಳೀಯ ತಂತ್ರಜ್ಞಾನ ಅಭಿವೃದ್ಧಿ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಕೈಗಾರಿಕೆಗಳಿಗೆ ಅಗತ್ಯವಿರುವ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಆತ್ಮನಿರ್ಭರ ಮತ್ತು ವಿಕಸಿತ ಭಾರತದ ಗುರಿ:
ಪ್ರಧಾನಮಂತ್ರಿಗಳ AatmanirbharBharat ದೃಷ್ಟಿಕೋನವನ್ನು ಸಾಕಾರಗೊಳಿಸಲು ಮತ್ತು 2070ರ ವೇಳೆಗೆ ಸಮೂಹ ಆಟೋ ಕ್ಷೇತ್ರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸುವ ರಾಷ್ಟ್ರೀಯ ಗುರಿಯೊಂದಿಗೆ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ತಿಳಿಸಿದ ಅವರು, ViksitBharat2047ರ ಸಾಕಾರಕ್ಕೆ ಸರ್ಕಾರದ ಪರಿಪೂರ್ಣ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.



