ಚಂದ್ರವಳ್ಳಿ ನ್ಯೂಸ್, ಕಣಜನಹಳ್ಳಿ:
ಜಿಲ್ಲೆಯ ಹಿರಿಯೂರು ತಾಲೂಕಿನ ಕಣಜನಹಳ್ಳಿಯಲ್ಲಿ ಶ್ರೀ ಹೊಸೂರಾಂಭದೇವಿ, ಬೀರಲಿಂಗೇಶ್ವರ ಹಾಗೂ ವೆಂಕಟರಮಣಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಏಪ್ರಿಲ್ 27ರಿಂದ 29ರವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳ ವಿವರ:
ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದ್ದು, ಪ್ರಮುಖ ಕಾರ್ಯಕ್ರಮಗಳು ಹೀಗಿವೆ:
ಏಪ್ರಿಲ್ 27 (ಸೋಮವಾರ): ಕಳಸ ಪ್ರತಿಷ್ಠಾಪನೆ, ಮಹಾಗಣಪತಿ ಪೂಜೆ, ಪುಣ್ಯಾಹ ಹಾಗೂ ನವಗ್ರಹ ಪೂಜೆ ನಡೆಯಲಿದೆ. ಲಿಂಗದ ಬೀರೇಶ್ವರ ಸ್ವಾಮಿಗೆ ಜಲಾಧಿವಾಸ, ಕ್ಷೀರಾಧಿವಾಸ ಮತ್ತು ಪ್ರಾಣ ಹೋಮದ ನಂತರ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ದೇವಿ ಮತ್ತು ವೆಂಕಟರಮಣ ದೇವರ ಉತ್ಸವ ಜರುಗಲಿದೆ.
ಏಪ್ರಿಲ್ 28 (ಮಂಗಳವಾರ): ದೇವಸ್ಥಾನದ ಬಳಿ ಕಳಸ ಸ್ಥಾಪನೆ, ಭಕ್ತರಿಂದ ಹರಕೆ ಸಮರ್ಪಣೆ, ಜವಳ ಹಾಗೂ ಆರತಿ ಕಾರ್ಯಕ್ರಮಗಳು ನಡೆಯಲಿವೆ. ಏಪ್ರಿಲ್ 29 (ಬುಧವಾರ): ಮಿಥುನ ಲಗ್ನದಲ್ಲಿ ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಹೆಣ್ಣು ಮಕ್ಕಳಿಗೆ ಬಾಗಿನ ವಿತರಿಸುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಸಾಂಸ್ಕೃತಿಕ ಸೌರಭ:
ಭಕ್ತರ ಮನರಂಜನೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 27ರ ರಾತ್ರಿ: ಕೀರ್ತನಕಾರ ಶಿವಾರ ಉಮೇಶ್ ಅವರಿಂದ ಗೀತ ಗಾಯನ.
28ರ ರಾತ್ರಿ: 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಕಲಾವಿದರಿಂದ ಹಾಸ್ಯ ಮತ್ತು ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಗಣ್ಯರ ಉಪಸ್ಥಿತಿ:
ಈ ಧಾರ್ಮಿಕ ಸಂಭ್ರಮಕ್ಕೆ ಕಾಗಿನೆಲೆ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಹೊಸದುರ್ಗ ಕನಕ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ.
ಅಭಿವೃದ್ಧಿಯ ಸಂಕಲ್ಪ: "ಈಗಾಗಲೇ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಿವಾಹಗಳು ನಡೆಯುವಂತೆ ವ್ಯವಸ್ಥೆ ಮಾಡಿ, ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು," ಎಂದು ದೇವಸ್ಥಾನ ಸಮಿತಿಯ ಗುಡಿಗೌಡರಾದ ಟಿ. ಒಂಟೇಗೌಡ ಅವರು ತಿಳಿಸಿದ್ದಾರೆ.


