ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ 'ವಿಶ್ವ ಯುವ ಕೌಶಲ್ಯ ದಿನಾಚರಣೆ'ಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕೌಶಲ್ಯವೇ ಯಾರೂ ಕದಿಯಲಾಗದ ಬಹುದೊಡ್ಡ ನಿಧಿ ಎಂದು ಬಣ್ಣಿಸಿದ್ದಾರೆ.
ರಾಜ್ಯದ ಯುವಜನತೆಯಲ್ಲಿ ಅಪಾರ ಸಾಮರ್ಥ್ಯವಿದ್ದು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಕೌಶಲ್ಯಾಧಾರಿತ ಶಿಕ್ಷಣ ಅಗತ್ಯ ಎಂದಿದ್ದಾರೆ.
ಸಮಾರಂಭದಲ್ಲಿ ಸಿಎಂ ಆಡಿದ ಪ್ರಮುಖ ಮಾತುಗಳು:
ಕೌಶಲ್ಯವೇ ಅಪಾರ ನಿಧಿ: ರಾಜರು ಅಪಹರಿಸಲಾಗದ, ದಾಯಾದಿಗಳು ಕಸಿಯಲಾಗದ, ಬೆಂಕಿಯಲ್ಲಿ ಸುಡದ ಅತ್ಯಂತ ಶ್ರೇಷ್ಠ ಸಂಪತ್ತು ಎಂದರೆ ವಿದ್ಯೆ ಮತ್ತು ಕೌಶಲ್ಯ. ಅಧಿಕಾರ ಶಾಶ್ವತವಲ್ಲ, ಆದರೆ ಕೌಶಲ್ಯವಿದ್ದರೆ ಜೀವನದಲ್ಲಿ ರಾಜಯೋಗ ಮತ್ತು ಅಪಾರ ಯಶಸ್ಸು ಸಾಧಿಸಬಹುದು.
ಐಟಿ ರಂಗದಲ್ಲಿ ಬೆಂಗಳೂರು ಅಗ್ರಸ್ಥಾನ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ಎಂಜಿನಿಯರ್‌ಗಳಿದ್ದರೆ, ನಮ್ಮ ಬೆಂಗಳೂರು ನಗರ ಒಂದರಲ್ಲೇ 25 ಲಕ್ಷ ಐಟಿ ವೃತ್ತಿಪರರಿದ್ದಾರೆ.
ಜಾಗತಿಕ ಸ್ಪರ್ಧೆಗೆ ಕರೆ: ಸ್ಥಳೀಯ ಹಂತದಲ್ಲಷ್ಟೇ ಸ್ಪರ್ಧಿಸದೆ, ಟಾಟಾ ಮತ್ತು ಮಹೀಂದ್ರಾ ಸಂಸ್ಥೆಗಳಂತೆ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಿ ನಾಡಿನ ಕೀರ್ತಿಯನ್ನು ವಿಶ್ವದಾದ್ಯಂತ ಎತ್ತಿ ಹಿಡಿಯಬೇಕು.
ಪ್ರಾಯೋಗಿಕ ಜ್ಞಾನದ ಮಹತ್ವ: ಹೊಲ ಉಳುವುದು ಮತ್ತು ಪೈರು ನಾಟಿ ಮಾಡುವುದಕ್ಕೆ ಯಾವುದೇ ಎಂಜಿನಿಯರ್‌ಗಳು ತರಬೇತಿ ನೀಡಬೇಕಿಲ್ಲ; ದಿನನಿತ್ಯದ ಪ್ರಾಯೋಗಿಕ ಅನುಭವ ಹಾಗೂ ಸಾಮಾನ್ಯ ಜ್ಞಾನವೇ ಬಹುದೊಡ್ಡ ಕೌಶಲ್ಯ.
'ಯುವಸೇತು' ಯೋಜನೆ: ಖಾಸಗಿ ವಲಯದ ಉದ್ಯೋಗದಾತರಿಂದ ದೊರೆಯುವ ಉದ್ಯೋಗಾವಕಾಶಗಳ ಮಾಹಿತಿಯನ್ನು ನೇರವಾಗಿ ಯುವಜನರಿಗೆ ತಲುಪಿಸಲು 'ಯುವಸೇತು' (ಉದ್ಯೋಗ ಸೇತು) ಯೋಜನೆ ಚಾಲನೆ.
ಎಐ (AI) ವಿಶ್ವವಿದ್ಯಾಲಯ: ತಾಂತ್ರಿಕ ರಂಗದ ಭವಿಷ್ಯದ ಅಗತ್ಯಗಳನ್ನು ಪೂರೈಸಲು ರಾಜ್ಯದಲ್ಲಿ ಹೊಸದಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವಿಶ್ವವಿದ್ಯಾಲಯ ಸ್ಥಾಪನೆ.
ಬೆಂಗಳೂರು ಟೆಕ್ ಸಮಿಟ್: ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಪ್ರತಿಷ್ಠಿತ 'ಬೆಂಗಳೂರು ಟೆಕ್ ಸಮಿಟ್'ನಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಸಿಎಂ ಕರೆ ನೀಡಿದ್ದಾರೆ.
ಕೈಯಲ್ಲಿ ಕೌಶಲ್ಯವಿದ್ದರೆ ಬದುಕಿನಲ್ಲಿ ರಾಜಯೋಗ: ಸಿಎಂ ಡಿ.ಕೆ. ಶಿವಕುಮಾರ್ ಅಭಿಮತ
ಕೈಯಲ್ಲಿ ಕೌಶಲ್ಯವಿದ್ದರೆ ಬದುಕಿನಲ್ಲಿ ರಾಜಯೋಗಕ್ಕೆ ಸಮಾನ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಪಾದಿಸಿದ್ದಾರೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ 'ವಿಶ್ವ ಯುವ ಕೌಶಲ್ಯ ದಿನಾಚರಣೆ - 2026' ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ಮಾತನಾಡಿದರು.
ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ರುದ್ರಪ್ಪ ಲಮಾಣಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.



