ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದ ಕೋಟ್ಯಂತರ ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ 23ನೇ ಕಂತಿನ ಹಣವನ್ನು ನೇರವಾಗಿ ವರ್ಗಾವಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ರೈತಪರ ಕಾಳಜಿಯನ್ನು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುಯಲ್ ವೇದಿಕೆ ಮೂಲಕ ಹಮ್ಮಿಕೊಂಡಿದ್ದ ಈ ಸಾರ್ಥಕ ಕಾರ್ಯಕ್ರಮದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಿಂದಲೇ ಪಾಲ್ಗೊಂಡಿದ್ದರು.
18,800 ಕೋಟಿ ಹಣ ನೇರ ಜಮೆ-
ದೇಶದ ಒಟ್ಟು 9.44 ಕೋಟಿ ಅನ್ನದಾತರಿಗೆ ತಲಾ 2,000 ಮೊತ್ತದಂತೆ ಒಟ್ಟು 18,800 ಕೋಟಿ ಹಣವನ್ನು ಪ್ರಧಾನಮಂತ್ರಿಯವರು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡಿದ್ದಾರೆ.
ಸಬಲೀಕರಣವಿಲ್ಲದೆ ಅಭಿವೃದ್ಧಿಗೆ ಅರ್ಥವಿಲ್ಲ: ಕುಮಾರಸ್ವಾಮಿ
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಎಚ್. ಡಿ. ಕುಮಾರಸ್ವಾಮಿ ಅವರು, ಪ್ರಧಾನಿಗಳ ಈ ಹೆಜ್ಜೆಯನ್ನು ಅಭಿನಂದಿಸಿದ್ದಾರೆ.
"ದೇಶಕ್ಕೆ ಅನ್ನ ನೀಡುವ ಅನ್ನದಾತನ ಸಬಲೀಕರಣವಾಗದಿದ್ದರೆ ಅಭಿವೃದ್ಧಿಗೆ ಅರ್ಥವಿರುವುದಿಲ್ಲ. ಕಳೆದ 12 ವರ್ಷಗಳಲ್ಲಿ ಇಂತಹ ವಿರೋಧಾಭಾಸಗಳಿಗೆ ತಿಲಾಂಜಲಿ ಇಟ್ಟು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರೈತರ ಕಲ್ಯಾಣಕ್ಕಾಗಿ ಅವಿರತವಾಗಿ ದುಡಿಯುತ್ತಿದ್ದಾರೆ. ಅವರ ಕಾಳಜಿ ಮತ್ತು ದೂರದೃಷ್ಟಿಗೆ ನನ್ನ ಅಭಿನಂದನೆಗಳನ್ನು ಸಮರ್ಪಿಸುತ್ತೇನೆ," ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಕಳೆದ ದಶಕಕ್ಕೂ ಹೆಚ್ಚು ಕಾಲದಿಂದ ರೈತರ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಲು ಹಾಗೂ ಕೃಷಿ ವಲಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂಬುದಕ್ಕೆ ಈ ಯೋಜನೆಯೇ ಸಾಕ್ಷಿ ಎಂದು ಅವರು ಪ್ರಶಂಸಿದ್ದಾರೆ.



