ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಶ್ವ ಕನ್ನಡ ಕಲಾ ಸಂಸ್ಥೆ, ಕರ್ನಾಟಕ ರಾಜ್ಯ ಸಂಸ್ಥೆ ವತಿಯಿಂದ ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ಡಿಸೆಂಬರ್ 26ರ ಶನಿವಾರ ಆಯೋಜಿಸಿರುವ ವಿಶ್ವ ಕನ್ನಡ ಕುವೆಂಪು ಸಾಹಿತ್ಯೋತ್ಸವ ಸಮ್ಮೇಳನ–2026ಕ್ಕೆ ಸಮ್ಮೇಳನಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಡಾ. ಸುರೇಂದ್ರಸ್ವಾಮಿ ಬೇವಿನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ವಿಶ್ವ ಕನ್ನಡ ಕಲಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಈ. ರವೀಶ ಅಕ್ಕರ ಅವರು ತಿಳಿಸಿದ್ದಾರೆ.
ಡಾ. ಸುರೇಂದ್ರಸ್ವಾಮಿ ಬೇವಿನಹಳ್ಳಿ ಅವರು ರಂಗಭೂಮಿ, ಜಾನಪದ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದು, ರಂಗ ಗಂಗೋತ್ರಿ ಜಾನಪದ ಮತ್ತು ತೊಗಲುಗೊಂಬೆ ಕಲಾ ತಂಡದ ಮೂಲಕ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ 'ಒಂದೇ ಭಾರತ ಕನಸು' ಎಂಬ ವಿಶಿಷ್ಟ ರಂಗಪ್ರಯೋಗವನ್ನು ಪ್ರಸ್ತುತಪಡಿಸಲಿದ್ದಾರೆ. ಇದು ಗಾಂಧೀಜಿಯವರು ಕಂಡ ಕನಸಿನ ಪ್ರಸ್ತುತ ಸ್ಥಿತಿಯ ಒಂದು ಭಾಗವಾಗಿದ್ದು, ರಚನೆ ಮತ್ತು ರಂಗ ನಿರ್ದೇಶನವನ್ನು ಡಾ. ಸುರೇಂದ್ರಸ್ವಾಮಿ ಬೇವಿನಹಳ್ಳಿ ಅವರೇ ನಿರ್ವಹಿಸಿದ್ದಾರೆ.
ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಉತ್ತೇಜಿಸುವ ಉದ್ದೇಶದಿಂದ ಸಂಸ್ಥೆಯು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧಕರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ಆಯೋಜಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ಸಮ್ಮೇಳನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಈ ಕುರಿತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿನಾಯಕ ಆರ್.ಜಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




