ಚಂದ್ರವಳ್ಳಿ ನ್ಯೂಸ್, ರಾಮನಗರ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಶಾಸಕ ಹಾಗೂ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದು, "ನಮ್ಮ ಹಳೇ ಬಾಸ್ ಎಚ್.ಡಿ. ಕುಮಾರಸ್ವಾಮಿ ಅವರು ಭಸ್ಮಾಸುರ ಇದ್ದಂತೆ. ಅವರು ಎಲ್ಲಿಗೆ ಹೋಗುತ್ತಾರೋ ಅಲ್ಲಿ ಅವರ ತಲೆಯ ಮೇಲೆಯೇ ಕೈ ಇಡುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಬಾಲಕೃಷ್ಣ, "ಅವರು ಎನ್‌ಡಿಎ ಸರ್ಕಾರ ಬರುತ್ತದೆ ಎಂದು ಹೇಳಿದರೆ, ನಾವು ಮತ್ತೆ ನಮ್ಮದೇ ಸರ್ಕಾರ ಬರುತ್ತದೆ ಎಂದು ಹೇಳುತ್ತೇವೆ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ವಿರೋಧ ಪಕ್ಷದಲ್ಲಿರುವವರು ಸಹಜವಾಗಿಯೇ ಸರ್ಕಾರದ ಕೆಲಸಗಳನ್ನು ಹೊಗಳುವುದಿಲ್ಲ. ಆದರೆ, ಏನೇ ಇದ್ದರೂ ಅಂತಿಮವಾಗಿ ರಾಜ್ಯದ ಜನರೇ ತೀರ್ಪು ನೀಡುತ್ತಾರೆ" ಎಂದು ಹೇಳಿದರು.
ಕೈಗಾರಿಕೆ ಸ್ಥಾಪನೆಗೆ ಬಹಿರಂಗ ಸವಾಲು: ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರ ಕೊಡುಗೆಯನ್ನು ಪ್ರಶ್ನಿಸಿದ ಬಾಲಕೃಷ್ಣ, "ಬರೀ ಕಥೆ ಹೇಳಿಕೊಂಡು ಓಡಾಡಿದರೆ ಏನೂ ಆಗುವುದಿಲ್ಲ. ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ಸಾಮಾಜಿಕ ನ್ಯಾಯವನ್ನು ಕುಮಾರಸ್ವಾಮಿ ಅವರು ಮೊದಲು ಕೊಡಿಸಲಿ. ಮೇಕೆದಾಟು ಯೋಜನೆಗೆ ಇದುವರೆಗೂ ಅನುಮತಿ ಕೊಡಿಸಲು ಅವರಿಂದ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಎಲ್ಲೂ ಒಂದೇ ಒಂದು ಕೈಗಾರಿಕೆಯನ್ನೂ ಸ್ಥಾಪಿಸಿಲ್ಲ" ಎಂದು ಕಿಡಿಕಾರಿದರು.
"ಅವರಿಗೆ ನಿಜವಾಗಿಯೂ ಕೈಗಾರಿಕೆಗಳನ್ನು ಸ್ಥಾಪಿಸುವ ಇಚ್ಛೆಯಿದ್ದರೆ, ನಮ್ಮ ಮಾಗಡಿ ಕ್ಷೇತ್ರದಲ್ಲಿ 150 ಎಕರೆ ಜಾಗವನ್ನು ಕೊಡುತ್ತೇವೆ. ಅಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕೊಡುತ್ತಾರಾ ಕೇಳಿ? ಸುಮ್ಮನೆ ಎಲ್ಲರಿಗೂ ಕಿವಿ ಮೇಲೆ ಹೂವಿಡುವ ಕೆಲಸ ಮಾಡುತ್ತಿದ್ದಾರೆ" ಎಂದು ಹೆಚ್.ಸಿ. ಬಾಲಕೃಷ್ಣ ವಾಗ್ದಾಳಿ ನಡೆಸಿದರು.




