ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬದಲಾದ ಜೀವನ ಶೈಲಿ ಹಾಗೂ ಆಹಾರ ಪದ್ದತಿಯಿಂದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಆರೋಗ್ಯದ ಕಡೆ ಎಲ್ಲರೂ ಕಾಳಜಿ ವಹಿಸುವಂತೆ ಎಸ್.ಆರ್.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಕರೆ ನೀಡಿದರು.
ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯಕ್ಕಿಂತ ಅಮೂಲ್ಯವಾದ ಸಂಪತ್ತು ಮತ್ತೊಂದಿಲ್ಲ. ಶಿಕ್ಷಣದ ಜೊತೆ ಸಾರ್ವಜನಿಕರಿಗೂ ಉಪಯೋಗವಾಗಲಿ ಎನ್ನುವ ದೃಷ್ಟಿಯಿಟ್ಟುಕೊಂಡು ಉಚಿತ ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಹೃದಯಾಘಾತ, ಸಕ್ಕರೆ ಕಾಯಿಲೆ ಸರ್ವೆ ಸಾಮಾನ್ಯವಾಗಿದೆ. ಕಾಲ ಕಾಲಕ್ಕೆ ತಕ್ಕಂತೆ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಾನವನ ದೇಹದಲ್ಲಿ ಕಣ್ಣು ಅತಿ ಸೂಕ್ಷ್ಮವಾದುದು. ದೃಷ್ಟಿ ಕಳೆದುಕೊಂಡರೆ ಜೀವನವೇ ಕತ್ತಲಾಗುತ್ತದೆ. ಹಾಗಾಗಿ ನೇತ್ರ ರಕ್ಷಣೆಗೂ ಒತ್ತು ಕೊಡಬೇಕೆಂದರು.
ಎಸ್.ಆರ್.ಎಸ್.ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ ಮಾತನಾಡಿ ಜೀವನದಲ್ಲಿ ಯಾರೂ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಮಿತ ಆಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಸಾವು-ಬದುಕಿನ ನಡುವೆ ಹೋರಾಡುವವರ ಪ್ರಾಣ ಉಳಿಸಬಹುದೆಂದು ಹೇಳಿದರು.
ಬೆಂಗಳೂರಿನ ಒಮೇಗಾ ಆರ್ಥೊಸ್ಪೈನ್ ಸೆಂಟರ್ನ ಖ್ಯಾತ ಮೂಳೆ ತಜ್ಞರಾದ ಡಾ.ಕಿರಣ್ತೇಜ್ ಸಾರ್ವಜನಿಕರಿಗೆ ಉಚಿತವಾಗಿ ಬೆನ್ನು ಮೂಳೆ ಮತ್ತು ಮೂಳೆ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದರು.
ಚಿತ್ರದುರ್ಗದ ಕೃಷ್ಣ ನರ್ಸಿಂಗ್ ಹೋಂನಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
ಶಿಕ್ಷಣ ಸಂಸ್ಥೆಯ ಸಿಬಿಎಸ್ಇ ವಿಭಾಗದ ಪ್ರಾಂಶುಪಾಲರಾದ ಎಂ.ಎಸ್.ಪ್ರಭಾಕರ್, ಐಸಿಎಸ್ಇ. ವಿಭಾಗದ ಪ್ರಾಚಾರ್ಯರಾದ ಎಂ.ಎಸ್.ಅರ್ಪಿತ ಇವರುಗಳು ರಕ್ತದಾನ ಮಾಡಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಅರುಣ್ಕುಮಾರ್, ಗುರುಮೂರ್ತಿ, ಮಜರ್ವುಲ್ಲಾ ಇನ್ನು ಅನೇಕರು ಶಿಬಿರದಲ್ಲಿ ಹಾಜರಿದ್ದರು.




