ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿರುವುದರ ಜೊತೆಗೆ, ನೀರಿನ ಗುಣಮಟ್ಟವೂ ತೀವ್ರವಾಗಿ ಹದಗೆಟ್ಟಿರುವುದು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಆತಂಕ ಸೃಷ್ಟಿಸಿದೆ. ಕೇಂದ್ರೀಯ ಅಂತರ್ಜಲ ಮಂಡಳಿ ರಾಜ್ಯಾದ್ಯಂತ ನಡೆಸಿದ ನೀರಿನ ಗುಣಮಟ್ಟದ ಪರೀಕ್ಷೆಯಲ್ಲಿ ಅಪಾಯಕಾರಿ ಪ್ರಮಾಣದ ಯುರೇನಿಯಂ, ನೈಟ್ರೇಟ್, ಫ್ಲೋರೈಡ್ ಮತ್ತು ಭಾರ ಲೋಹಗಳು ಪತ್ತೆಯಾಗಿವೆ.
ಮಾಲಿನ್ಯಕ್ಕೆ ಪ್ರಮುಖ ಕಾರಣಗಳೇನು?: ಆಳವಾದ ಬೋರ್ವೆಲ್ಗಳು: ತ್ವರಿತ ನಗರೀಕರಣ ಮತ್ತು ಕೃಷಿ ಬೇಡಿಕೆಗಳಿಗಾಗಿ ಅತಿಯಾಗಿ ಕೊಳವೆಬಾವಿಗಳನ್ನು ಕೊರೆಯುತ್ತಿರುವುದರಿಂದ, ಭೂಮಿಯ ಆಳದಲ್ಲಿರುವ ನೈಸರ್ಗಿಕ ವಿಷಕಾರಿ ಖನಿಜಗಳು ನೀರಿನಲ್ಲಿ ಸೇರಿಕೊಳ್ಳುತ್ತಿವೆ.
ಕೃಷಿ ಮತ್ತು ಕೈಗಾರಿಕಾ ತ್ಯಾಜ್ಯ: ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಹಾಗೂ ಕೈಗಾರಿಕಾ ತ್ಯಾಜ್ಯಗಳು ಅಂತರ್ಜಲವನ್ನು ಕಲುಷಿತಗೊಳಿಸುತ್ತಿವೆ.
ಯಾವ ಜಿಲ್ಲೆಗಳಲ್ಲಿ ಯಾವ ಅಂಶ ಅಪಾಯಕಾರಿ ಮಟ್ಟದಲ್ಲಿದೆ?:
ಯುರೇನಿಯಂ: ಕೋಲಾರ (ದೊಡ್ಡಶಿವಾರದಲ್ಲಿ 2147 ppb) ಮತ್ತು ಚಿಕ್ಕಬಳ್ಳಾಪುರ (ಪೆದ್ದೆತಾಂಡದಲ್ಲಿ 1750.8 ppb) ಜಿಲ್ಲೆಗಳಲ್ಲಿ ಯುರೇನಿಯಂ ಪ್ರಮಾಣ ಸುರಕ್ಷಿತ ಮಿತಿಗಿಂತ (30 ppb) ಹಲವು ಪಟ್ಟು ಹೆಚ್ಚಾಗಿದೆ.
ನೈಟ್ರೇಟ್: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೈಟ್ರೇಟ್ ಕಂಡುಬಂದಿದ್ದು, ಧಾರವಾಡದ ಮೊರಬ್ (936.37 mg/L), ಬಳ್ಳಾರಿಯ ತೆಕ್ಕಲಕೋಟೆ ಮತ್ತು ಗದಗ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣ ದಾಖಲಾಗಿದೆ.
ಫ್ಲೋರೈಡ್: ಬಳ್ಳಾರಿ, ಬೆಳಗಾವಿ ಮತ್ತು ಬೆಂಗಳೂರು ದಕ್ಷಿಣ ಭಾಗದ ಹಲವು ಹಳ್ಳಿಗಳಲ್ಲಿ ಫ್ಲೋರೈಡ್ ಪ್ರಮಾಣ ನಿಗದಿತ ಮಿತಿಗಿಂತ ಹೆಚ್ಚಿದೆ.
ಇತರ ಲೋಹಗಳು: ಕೊಪ್ಪಳದಲ್ಲಿ ಕಬ್ಬಿಣದ ಅಂಶ, ಕಲಬುರಗಿಯಲ್ಲಿ ಮ್ಯಾಂಗನೀಸ್, ರಾಯಚೂರು-ಯಾದಗಿರಿಯಲ್ಲಿ ಆರ್ಸೆನಿಕ್ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೈಗಾರಿಕಾ ತ್ಯಾಜ್ಯದಿಂದಾಗಿ ಸೀಸ ಮತ್ತು ಕ್ಯಾಡ್ಮಿಯಂನಂತಹ ಭಾರ ಲೋಹಗಳು ಪತ್ತೆಯಾಗಿವೆ. ರಾಯಚೂರು, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ನೀರಿನಲ್ಲಿ ವಿದ್ಯುತ್ ವಾಹಕತೆ (ಲವಣಾಂಶ) ಅತಿ ಹೆಚ್ಚಿದೆ.
ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು:
ಈ ಕಲುಷಿತ ನೀರನ್ನು ನಿರಂತರವಾಗಿ ಸೇವಿಸುವುದರಿಂದ ಮನುಷ್ಯರ ದೇಹದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಯುರೇನಿಯಂ: ಕಿಡ್ನಿ ವೈಫಲ್ಯ ಮತ್ತು ಮೂಳೆಗಳ ಸವೆತಕ್ಕೆ ಕಾರಣವಾಗುತ್ತದೆ.
ನೈಟ್ರೇಟ್: ಶಿಶುಗಳಲ್ಲಿ 'ಬ್ಲೂ ಬೇಬಿ ಸಿಂಡ್ರೋಮ್' (ಆಮ್ಲಜನಕದ ಕೊರತೆ) ಹಾಗೂ ವಯಸ್ಕರಲ್ಲಿ ಕ್ಯಾನ್ಸರ್ ಮತ್ತು ಥೈರಾಯ್ಡ್ ಸಮಸ್ಯೆ ತಂದೊಡ್ಡುತ್ತದೆ.
ಫ್ಲೋರೈಡ್: ಹಲ್ಲುಗಳ ಬಣ್ಣ ಬದಲಾಗುವುದು (ದಂತ ಫ್ಲೋರೋಸಿಸ್) ಮತ್ತು ಮೂಳೆಗಳು ವಿರೂಪಗೊಳ್ಳುವ (ಅಸ್ಥಿಪಂಜರದ ಫ್ಲೋರೋಸಿಸ್) ಸಮಸ್ಯೆ ಉಂಟಾಗುತ್ತದೆ.
ಮ್ಯಾಂಗನೀಸ್ ಮತ್ತು ಭಾರ ಲೋಹಗಳು: ಸ್ಮರಣಶಕ್ತಿ ಕುಂದುವುದು, ಪಾರ್ಕಿನ್ಸನ್ ಮಾದರಿಯ ನರವೈಜ್ಞಾನಿಕ ಸಮಸ್ಯೆಗಳು ಹಾಗೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ.
ಅಂತರ್ಜಲದ ಅತಿಯಾದ ಬಳಕೆಗೆ ಕಡಿವಾಣ ಹಾಕದಿದ್ದರೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಲಕ್ಷಾಂತರ ಜನರು ತೀವ್ರ ಆರೋಗ್ಯ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ಎಂದು ವರದಿ ಎಚ್ಚರಿಸಿದೆ.




