ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕೈಗಾರಿಕಾ ವಲಯಕ್ಕೆ ಬೃಹತ್ ಪ್ರಮಾಣದ ಬಂಡವಾಳ ಹರಿದುಬರುತ್ತಿದ್ದು, ಒಟ್ಟು 6,252 ಕೋಟಿಗೂ ಹೆಚ್ಚಿನ ಹೂಡಿಕೆಯ 83 ಪ್ರಸ್ತಾವನೆಗಳಿಗೆ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಚಾಲನೆ ನೀಡಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದ್ದು, ಇದರಿಂದ ರಾಜ್ಯದಲ್ಲಿ 30,000ಕ್ಕೂ ಹೆಚ್ಚು ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
‘ಬಿಯಾಂಡ್ ಬೆಂಗಳೂರು’ ಜಪ: ಹಳ್ಳಿ-ತಾಲೂಕುಗಳಿಗೂ ವಿಸ್ತರಿಸಲಿದೆ ಕೈಗಾರಿಕೆ
ಅನುಮೋದನೆ ಪಡೆದ 83 ಯೋಜನೆಗಳ ಪೈಕಿ 69 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಥಾಪನೆಯಾಗಲಿವೆ. ಕೈಗಾರಿಕಾ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳು ಕೇವಲ ರಾಜಧಾನಿಗೆ ಸೀಮಿತವಾಗದೆ, ಬಿಯಾಂಡ್ ಬೆಂಗಳೂರು ಆಶಯದಂತೆ ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಲು ಈ ನಿರ್ಧಾರ ಅತ್ಯಂತ ಸಹಕಾರಿಯಾಗಲಿದೆ.
ವಿಮಾನಯಾನ (ಏರೋಸ್ಪೇಸ್), ಮೆಷಿನ್ ಟೂಲ್ಸ್, ಆಹಾರ ಸಂಸ್ಕರಣೆ, ಸಕ್ಕರೆ, ಜವಳಿ, ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್, ಜನರಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಉತ್ಪಾದನಾ ವಲಯಗಳಲ್ಲಿ ಬೃಹತ್ ಹೂಡಿಕೆಗಳು ಹರಿದುಬರಲಿವೆ.
ವಿಜಯಪುರ (ದೇವರಹಿಪ್ಪರಗಿ): ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರೀಸ್ ಸಂಸ್ಥೆಯಿಂದ ₹453.10 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಉತ್ಪಾದನಾ ಘಟಕ.
ದೇವನಹಳ್ಳಿ: ಆಕ್ಸಿಸ್‌ಕೇಡ್ ಏರೋಸ್ಪೇಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯಿಂದ ₹426 ಕೋಟಿ ವೆಚ್ಚದ ಏರೋಸ್ಪೇಸ್ ಮೂಲಸೌಕರ್ಯ ಯೋಜನೆ.
ಬಾಗಲಕೋಟೆ: ಪ್ಯಾರಿ ಇಂಡಿಯಾ ಲಿಮಿಟೆಡ್ ವತಿಯಿಂದ ₹397.43 ಕೋಟಿ ವೆಚ್ಚದಲ್ಲಿ ಬೆಲ್ಲ ತಯಾರಿಕಾ ಘಟಕ. ಬೆಳಗಾವಿ - ಮಂಡ್ಯ: ಲೀಫಿನಿಟಿ ಬಯೋಎನರ್ಜಿ ಸಂಸ್ಥೆಯಿಂದ ಚಿಕ್ಕೋಡಿ, ನಿಪ್ಪಾಣಿ ಹಾಗೂ ಪಾಂಡವಪುರದಲ್ಲಿ ₹310 ಕೋಟಿ ವೆಚ್ಚದಲ್ಲಿ 4 ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕಗಳ ಸ್ಥಾಪನೆ.
ಈ ಎಲ್ಲಾ ಬೃಹತ್ ಹೂಡಿಕೆಗಳು ರಾಜ್ಯದ ಸಮಗ್ರ ಪ್ರಗತಿಗೆ ಹೊಸ ವೇಗ ನೀಡುವುದರ ಜೊತೆಗೆ, ಭಾರತದ ಅಗ್ರಗಣ್ಯ ಕೈಗಾರಿಕಾ ಹಬ್ ಆಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಲಿವೆ.



