ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಜನಸಂಖ್ಯೆ ಮತ್ತು ರಾಜಕೀಯ ಕೊಡುಗೆಯ ಆಧಾರದ ಮೇಲೆ ಸಮರ್ಪಕ ಪ್ರಾತಿನಿಧ್ಯ ನೀಡಬೇಕು ಹಾಗೂ ಹಿರಿಯ ನಾಯಕ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಜಮೀರ್ ಅಹ್ಮದ್ ಖಾನ್ ಅಭಿಮಾನಿ ಬಳಗ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಅನ್ವರ್ ಬಾಷಾ, "ಕಾಂಗ್ರೆಸ್ ಪಕ್ಷವು ಎಲ್ಲಾ ವರ್ಗಗಳ ಆಶೋತ್ತರಗಳನ್ನು ಪ್ರತಿನಿಧಿಸುವ ಪಕ್ಷವಾಗಿದೆ. ಚುನಾವಣಾ ಗೆಲುವಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪಾತ್ರ ಅನನ್ಯ. ಹೀಗಾಗಿ ನೂತನ ಸಂಪುಟ ರಚನೆಯಲ್ಲಿ ಸಮುದಾಯದ ಪ್ರಬಲ ಶಾಸಕರಾದ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಸ್ಥಾನ ನೀಡುವ ಮೂಲಕ ಸರ್ಕಾರ ಸಾಮಾಜಿಕ ನ್ಯಾಯದ ಬದ್ಧತೆ ಪ್ರದರ್ಶಿಸಬೇಕು. ಹೈಕಮಾಂಡ್ ಮುಂದಿನ ದಿನಗಳಲ್ಲಿ ಇವರಿಗೆ ಮಂತ್ರಿ ಸ್ಥಾನದ ಜೊತೆಗೆ ಡಿಸಿಎಂ ಸ್ಥಾನ ನೀಡಲಿದೆ ಎಂಬ ದೃಢ ವಿಶ್ವಾಸ ನಮಗಿದೆ" ಎಂದರು.
"ಅದು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಿದ ನಕಲಿ ಆಡಿಯೋ"
ದಾವಣಗೆರೆ ದಕ್ಷಿಣ ಉಪಚುನಾವಣೆಯ ಸಂದರ್ಭದಲ್ಲಿ ವೈರಲ್ ಆಗಿರುವ ಆಡಿಯೋ ಸಂಪೂರ್ಣ ಸುಳ್ಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ಆಡಿಯೋ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಸ್ಥಾನ ತಪ್ಪಿಸುವ ಏಕೈಕ ಉದ್ದೇಶದಿಂದ ಈ ಕುತಂತ್ರ ನಡೆಸಲಾಗಿದೆ. ಈ ಆಡಿಯೋ ಮೊದಲೇ ಏಕೆ ಬಿಡುಗಡೆಯಾಗಲಿಲ್ಲ? ಈಗಿನ ಸಂದರ್ಭದಲ್ಲೇ ಏಕೆ ಬಿಡಲಾಗಿದೆ? ಎಂದು ಪ್ರಶ್ನಿಸಿದ ಮುಖಂಡರು, ಇದು ರಾಜಕೀಯ ಪಿತೂರಿ ಎಂದು ಆಪಾದಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಹಾಸ್ಟೆಲ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಹಾಜಿ ನಯಾಜ್, ಕಾಂಗ್ರೆಸ್ ಮುಖಂಡ ಸಯ್ಯದ್ ಅನಿಸ್, ಮಾಜಿ ನಗರಸಭಾ ಸದಸ್ಯ ಸರ್ದಾರ್ ಅಹಮದ್ ಪಾಷಾ, ಹಿರಿಯ ವಕೀಲ ಸಾಧಿಕುಲ್ಲಾ, ದಲಿತ ಮುಖಂಡ ಬಾಳೆಕಾಯಿ ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಖುದ್ದೂಸ್, ಅಗನಕಲ್ಲು ಮುತ್ವಲ್ಲಿ ದಾದಾಪೀರ್, ಸ್ಲಂ ಬೋರ್ಡ್ ಸದಸ್ಯ ರಶೀದ್, ಪ್ರಮುಖರಾದ ಅನ್ವರ್ ವರ್ದ, ಮಾಜಿ ನಗರಸಭೆ ಸದಸ್ಯರಾದ ದಾವೂದ್, ಗುಪ್ಪೆ ಮಂಜುನಾಥ್, ಇರ್ಫಾನ್, ಈಜಾಜ್, ನಿಜಾಂ, ಯೂಸುಫ್, ಅಕ್ರಂ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಮೀರ್ ಅಹ್ಮದ್ ಖಾನ್ ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



