ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ನೀರು ಕೊಟ್ಟರೆ ಅನ್ನ ಕೊಡುವೆವು" ಎಂದು ಘೋಷಣೆ ಕೂಗುತ್ತಾ, ಕಲ್ಲಳ್ಳಿ ಭಾಗದ ನೂರಾರು ರೈತರು ತಾಲೂಕಿನ ಜ್ವಲಂತ ನೀರಾವರಿ ಸಮಸ್ಯೆಯ ವಿರುದ್ಧ ಹಿರಿಯೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹಿರಿಯೂರಿನ ರಂಜಿತಾ ಹೋಟೆಲ್ ಮುಂಭಾಗದಿಂದ ಆರಂಭವಾದ ಬೃಹತ್ ಬೈಕ್ ರ್ಯಾಲಿಯು ಪ್ರಮುಖ ರಸ್ತೆ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಯನ್ನು ತಲುಪಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಹಾಗೂ ಮೂರೂ ರಾಜಕೀಯ ಪಕ್ಷಗಳ ನಿರ್ಲಕ್ಷ್ಯದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನಂತರ, ತಹಶೀಲ್ದಾರ್ ಸಿದ್ದೇಶ್ ಅವರ ಮುಖಾಂತರ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರೈತರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಸಾವಿರ ಅಡಿ ಕೊರೆದರೂ ಸಿಗದ ನೀರು: ಕೆ.ಟಿ. ತಿಪ್ಪೇಸ್ವಾಮಿ ಖಡಕ್ ಎಚ್ಚರಿಕೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, "ಜೆ.ಜೆ.ಹಳ್ಳಿ ಹೋಬಳಿಯ ಗಾಯತ್ರಿ ಜಲಾಶಯ ಸೇರಿದಂತೆ ಕಲ್ಲಳ್ಳಿ ಭಾಗದ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಸರ್ಕಾರ ಕೂಡಲೇ ಆರಂಭಿಸಬೇಕು. ಕಲ್ಲಳ್ಳಿ ಭಾಗದಲ್ಲಿ ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ಒಂದು ಹನಿ ನೀರು ಸಿಗುತ್ತಿಲ್ಲ. ಕುಡಿಯುವ ನೀರಿಲ್ಲದೆ ಜನರು, ಮೇವಿಲ್ಲದೆ ಜಾನುವಾರುಗಳು ತತ್ತರಿಸುತ್ತಿವೆ. ರೈತರ ತೋಟಗಳು ಕಣ್ಣೆದುರೇ ಒಣಗುತ್ತಿವೆ. ವಾಣಿವಿಲಾಸ ಜಲಾಶಯದಿಂದ ನೀರು ಹರಿಸುವ ಯೋಜನೆಗೆ ಡಿ.ಪಿ.ಆರ್ ಅನುಮೋದನೆ ಸಿಕ್ಕಿದ್ದರೂ, ಕ್ಯಾಬಿನೆಟ್ ಒಪ್ಪಿಗೆ ನೀಡಿ ಟೆಂಡರ್ ಕರೆಯಲು ವಿಳಂಬ ಮಾಡಲಾಗುತ್ತಿದೆ. ತಕ್ಷಣವೇ ಕಾಮಗಾರಿ ಆರಂಭಿಸದಿದ್ದರೆ ಮುಂಬರುವ ವಿಧಾನಸಭಾ ಹಾಗೂ ಉಪಚುನಾವಣೆಗಳನ್ನು ಕಲ್ಲಳ್ಳಿ ಭಾಗದ ಎಲ್ಲಾ ಗ್ರಾಮಸ್ಥರು ಮತ್ತು ರೈತರು ಸಂಪೂರ್ಣವಾಗಿ ಬಹಿಷ್ಕರಿಸಲಿದ್ದಾರೆ" ಎಂದು ಖಡಕ್ ಎಚ್ಚರಿಕೆ ನೀಡಿದರು.
ರಾಜಕಾರಣಿಗಳ ಎಸಿ ಕಣ್ಣೀರಿಗೆ ಬೆಲೆ ಇಲ್ಲ, ನಮಗೆ ನೀರು ಬೇಕು: ಲಕ್ಷ್ಮಣ್ ಹೂಗಾರ್
ನೀರಾವರಿ ಹೋರಾಟಗಾರ ಹಾಗೂ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಮಾತನಾಡಿ, "ರೈತರ ಕಷ್ಟಕ್ಕೆ ಸ್ಪಂದಿಸದ ರಾಜಕಾರಣಿಗಳು ಕೇವಲ ಭಾಷಣ ಬಿಗಿಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಐದು ವರ್ಷ ಎಸಿ ರೂಂನಲ್ಲಿ ಕಾಲ ಕಳೆಯುವ ಇವರಿಗೆ ರೈತರ ನೋವು ಹೇಗೆ ಅರ್ಥವಾಗಬೇಕು? ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರ ಕಣ್ಣಿನಲ್ಲಿ ರಕ್ತದ ಕಣ್ಣೀರು ಬರುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು 16 ಕೆರೆಗಳ ಕಾಮಗಾರಿ ಆರಂಭಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು" ಎಂದು ಆಕ್ರೋಶ ಹೊರಹಾಕಿದರು.
ಇದೇ ಸಂದರ್ಭದಲ್ಲಿ ಕಲ್ಲಳ್ಳಿ ಭಾಗದ ನೀರಾವರಿ ಸಮಿತಿ ಅಧ್ಯಕ್ಷ ಚಂದ್ರಗಿರಿ ಮಾತನಾಡಿ, ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ, ತಕ್ಷಣ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ರೈತರ ಕಣ್ಣಲ್ಲಿ ರಕ್ತ ಬರುವ ಮುನ್ನ ಎಚ್ಚೆತ್ತುಕೊಳ್ಳಿ!
"ಗಾಯತ್ರಿ ಜಲಾಶಯ ಹಾಗೂ 16 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತಕ್ಷಣ ಜಾರಿಯಾಗದಿದ್ದರೆ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಸಂಪೂರ್ಣ ಬಹಿಷ್ಕರಿಸಲಾಗುವುದು. ಅಷ್ಟೇ ಅಲ್ಲದೆ, ನ್ಯಾಯ ಸಿಗುವವರೆಗೂ ನೀರಾವರಿ ಸಚಿವರ ಮನೆ ಮುಂದೆ ಉಗ್ರ ಧರಣಿ ಸತ್ಯಾಗ್ರಹ ನಡೆಸಲಾಗುವುದು."
ಲಕ್ಷ್ಮಣ್ ಹೂಗಾರ್, ಪತ್ರಕರ್ತರು ಹಾಗೂ ನೀರಾವರಿ ಹೋರಾಟಗಾರರು.
ಈ ಬೃಹತ್ ಹೋರಾಟದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಬಳಗಟ್ಟೆ ವೆಂಕಟೇಶ್, ಗೌರವಾಧ್ಯಕ್ಷ ಸಿದ್ದರಾಮಣ್ಣ, ಮುಖಂಡರಾದ ಗೌಡನಹಳ್ಳಿ ಅಭಿ, ಶ್ರೀಪತಿ, ನಾಗರಾಜ್, ಪ್ರಕಾಶ್ ಸೂರಪ್ಪನಹಟ್ಟಿ, ಕೃಷ್ಣ ದಿಂಡಾವರ, ವಿರೂಪಾಕ್ಷ, ಗಿರೀಶ್ ಗೌಡ, ಮಾಂತೇಶ್ ಬೇತುರ್ ಪಾಳ್ಯ, ರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಾಪಣ್ಣ, ಪರಮನಹಳ್ಳಿ ಮಹಾಲಿಂಗಪ್ಪ, ಜಯಪ್ರಕಾಶ್ ಸೇರಿದಂತೆ ನೂರಾರು ರೈತರು ಹಾಗೂ ಕಲ್ಲಳ್ಳಿ ಭಾಗದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



