ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ, ಎನ್‌ಎಸ್‌ಎಸ್, ಕ್ರೀಡಾ, ಮೈ ಭಾರತ್, ವೈಆರ್‌ಸಿ ಹಾಗೂ ಯೂತ್ ರೆಡ್‌ಕ್ರಾಸ್ ವಿಭಾಗಗಳ ಜಂಟಿ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 'ನಶಾಮುಕ್ತ ಅಭಿಯಾನ'ದಡಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ವಿರೋಧಿ ದಿನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ 6ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಅವರು, "ಇಂದಿನ ಯುವಜನತೆ ಮಾದಕ ವ್ಯಸನಗಳಿಗೆ ತಾಗಿ ಮಾರಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. 'ನಶೆ ಮುಕ್ತ ಭಾರತ' ಎಂಬುದು ಕೇವಲ ಒಂದು ಘೋಷಣೆಯಲ್ಲ, ಅದೊಂದು ಮಹಾನ್ ಸಂಕಲ್ಪ. ಆರೋಗ್ಯಕರ ಹಾಗೂ ಬಲಶಾಲಿ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ನಿಂತು ಮಾದಕ ದ್ರವ್ಯಗಳನ್ನು ತಿರಸ್ಕರಿಸಬೇಕಿದೆ. ಯುವ ಸಮೂಹವನ್ನು ರಕ್ಷಿಸಿ ದೇಶದ ಉಜ್ವಲ ಭವಿಷ್ಯಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಎಂ.ಎಸ್. ಪರಮೇಶ್ವರಪ್ಪ, ಡಾ. ಸಿ.ಟಿ. ಜಯಣ್ಣ, ಡಾ. ರಮೇಶ ಕೆ., ಡಾ. ರವಿ ಮೆಟ್ಟಿಹಾಳ, ಕುಮಾರ ಜಿ., ಗಿರೀಶ, ಮಿಸ್ಬಾ ಖಾನಂ, ಮೀರಾ ಯಾದವ್, ಮಲ್ಲೇಶ್, ಮಧು, ಡಾ. ಪುಷ್ಪಾ, ನಂದಿನಿ, ನಿರ್ಮಲ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಘಟಕ-1ರ ಕಾರ್ಯಕ್ರಮ ಅಧಿಕಾರಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಗೋವಿಂದಪ್ಪ ಎನ್.ಎಲ್. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆ ನಡೆಸಿಕೊಟ್ಟರೆ, ಎನ್‌ಎಸ್‌ಎಸ್ ಘಟಕ-2ರ ಕಾರ್ಯಕ್ರಮ ಅಧಿಕಾರಿ ಕೆ.ಎಚ್. ಶಿವಕುಮಾರ್ ಧನ್ಯವಾದ ಅರ್ಪಿಸಿದರು.



