ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಎನ್.ಹೆಚ್-48ರಲ್ಲಿರುವ ಆದಿಜಾಂಬವ ಮಠದಲ್ಲಿ ಆಗಸ್ಟ್ 23ರ ಭಾನುವಾರ ಆಯೋಜಿಸಲಾಗಿರುವ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಬಹಿಷ್ಕರಿಸುವುದಾಗಿ ದಲಿತ ಮತ್ತು ಮಾದಿಗ ಸಮುದಾಯದ ಮುಖಂಡರು ಹಾಗೂ ಮಠದ ಭಕ್ತಾದಿಗಳು ಜಂಟಿಯಾಗಿ ಪ್ರಕಟಿಸಿದ್ದಾರೆ.
ಈ ಕಾರ್ಯಕ್ರಮವನ್ನು ಸಮಾಜದ ಭಕ್ತರ ಹಾಗೂ ಜನಾಂಗದ ಗಮನಕ್ಕೆ ತರದೆ ಏಕಪಕ್ಷೀಯವಾಗಿ ತೀರ್ಮಾನಿಸಲಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.
ಏಕಪಕ್ಷೀಯ ನಿರ್ಧಾರ: ಶ್ರೀ ಶಿವಮುನಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶ್ರೀ ಬ್ರಹ್ಮಾನಂದಮುನಿ ದೇಶಿಕೇಂದ್ರ ಸ್ವಾಮೀಜಿ ಎನ್ನುವ ವ್ಯಕ್ತಿಗಳು ಸಮುದಾಯದ ಮತ್ತು ಭಕ್ತರ ಸಮ್ಮತಿ ಪಡೆಯದೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಸ್ವಾರ್ಥ ಹಾಗೂ ರಾಜಕೀಯ ದುರುದ್ದೇಶ: ರಾಜಕೀಯ ಲಾಭಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಜನಾಂಗವನ್ನು ಹಾಗೂ ಭಕ್ತಾದಿಗಳನ್ನು ಗುಲಾಮರನ್ನಾಗಿ, ಜೀತದಾಳುಗಳನ್ನಾಗಿ ಮಾಡುವ ಪ್ರವೃತ್ತಿ ಇದರಲ್ಲಿದೆ ಎಂದು ಮುಖಂಡರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಿರುವ ನಗರಸಭೆ ಮಾಜಿ ಸದಸ್ಯ ಧನಂಜಯ್ ಕುಮಾರ್, ಸಣ್ಣಪ್ಪ, ಪುರುಷೋತ್ತಮ್, ದಲಿತ ಮುಖಂಡರಾದ ಹರ್ತಿಕೋಟೆ ದಯಾನಂದ್, ಬಬ್ಬೂರು ರಂಗಸ್ವಾಮಿ, ಕೆ. ಓಂಕಾರಪ್ಪ, ಓಬಳೇಶ್, ಮಾದಿಗ ಜನಾಂಗದ ವಿವಿಧ ಮುಖಂಡರು, ದಲಿತಪರ ಸಂಘಟನೆಗಳು ಹಾಗೂ ಮಠದ ಭಕ್ತಾದಿಗಳು ಈ ಸಮಾರಂಭವನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.



