ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಮಯಕ್ಕೆ ಸರಿಯಾಗಿ ದಾನಿಗಳು ಸಿಗದೆ ಪ್ರತಿದಿನ ಸಾವಿರಾರು ಜೀವಗಳು ಅಂಗಾಂಗ ವೈಫಲ್ಯದಿಂದ ಕೊನೆಗೊಳ್ಳುತ್ತಿದ್ದು, ಈ ಕುರಿತು ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡ (ಬ್ರೇನ್ ಡೆಡ್) ಒಬ್ಬ ವ್ಯಕ್ತಿ ಸಕಾಲದಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಗರಿಷ್ಠ 8 ಜೀವಗಳಿಗೆ ಮರುಜೀವ ನೀಡಲು ಸಾಧ್ಯವಿದೆ. ಅಂಗಾಂಗ ದಾನವು ಭರವಸೆ ಕಳೆದುಕೊಂಡ ಕುಟುಂಬಗಳ ಪಾಲಿಗೆ ಹೊಸ ಬೆಳಕು ತರುವ ಅತ್ಯಂತ ಶ್ರೇಷ್ಠ ಸೇವೆಯಾಗಿದೆ ಎಂದು ಅವರು ಹೇಳಿದ್ದಾರೆ.
ಅಂಗಾಂಗ ದಾನದ ಸುತ್ತಲಿರುವ ಹಿಂಜರಿಕೆ ಮತ್ತು ಸಾಮಾಜಿಕ ಅಂಜಿಕೆಗಳನ್ನು ತೊಡೆದುಹಾಕುವುದು ಅಗತ್ಯವಾಗಿದೆ. ಸಾವಿನ ನಂತರವೂ ಮತ್ತೊಬ್ಬರ ಉಸಿರಾಗಿ ಹಾಗೂ ಕಣ್ಣಿನ ಬೆಳಕಾಗಿ ಜೀವನದ ಸಾರ್ಥಕತೆ ಪಡೆದುಕೊಳ್ಳಲು ಪ್ರತಿಯೊಬ್ಬರೂ ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.



